ಮಂಗಳೂರು: ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ಪಂಡಿತ್ ರಾಕೇಶ್ ಚೌರಾಸಿಯ ಇದೇ 27ರಂದು ನಗರದಲ್ಲಿ ಬಾನ್ಸುರಿ ವಾದನ ಪ್ರಸ್ತುತಪಡಿಸಲಿದ್ದಾರೆ. ಸಂಗೀತ ಭಾರತಿ ಪ್ರತಿಷ್ಠಾನ ಪುರಭವನದಲ್ಲಿ ಸಂಜೆ 5.30ರಿಂದ ಆಯೋಜಿಸಿರುವ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮದಲ್ಲಿ ಮುಂಬೈನ ಪಂ.ಪೂರ್ಬಯಾನ್ ಚಟರ್ಜಿ ಅವರ ಸೀತಾರ್ ವಾದನವೂ ಇರಲಿದೆ.

ರಾಕೇಶ್ ಚೌರಾಸಿಯ ಅವರಿಗೆ ಮುಂಬೈನ ಓಜಸ್ ಅದಿಯಾ ಮತ್ತು ಪೂರ್ಬಯಾನ್ ಅವರಿಗೆ ಮುಂಬೈನ ಸತ್ಯಜಿತ್‌ ತಲ್ವಾಲ್ಕಕರ್ ತಬಲಾ ಸಾಥ್ ನೀಡುವರು. ಕಚೇರಿಗೆ ಮುಕ್ತ ಪ್ರವೇಶಾವಕಾಶ ಇದೆ ಎಂದು ಸಂಗೀತ ಭಾರತಿ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ.

ರಾಕೇಶ್ ಚೌರಾಸಿಯಾ ಅವರು ಖ್ಯಾತ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯ ಅವರ ಸೋದರಳಿಯ. 2007ರಲ್ಲಿ ರಾಷ್ಟ್ರಪತಿಯವರಿಂದ ಭಾರತೀಯ ಸಂಗೀತ ಅಕಾಡೆಮಿ ಪ್ರಶಸ್ತಿ, 2008ರಲ್ಲಿ ಆದಿತ್ಯ ಬಿರ್ಲಾ ಕಲಾಕಿರಣ ಪುರಸ್ಕಾರ ಮತ್ತು 2011ರಲ್ಲಿ ಗುರು ಶಿಷ್ಯ ಪ್ರಶಸ್ತಿ ಅವರಿಗೆ ಒಲಿದಿದೆ. ತಮ್ಮ ಸಹಯೋಗದಲ್ಲಿ ಸಿದ್ಧಗೊಂಡ ಸಂಗೀತ ಆಲ್ಬಂ ‘ಆ್ಯಸ್ ವಿ ಸ್ಪೀಕ್‌’ಗೆ ಎರಡು ಗ್ರಾಮಿ ಪ್ರಶಸ್ತಿಗಳು ದೊರೆತಿವೆ.

 


ಪೂರ್ಬಯನ್ ಚಟರ್ಜಿ ಸಿತಾರ್ ಕಲಿತದ್ದು ತಂದೆ ಪಾರ್ಥಪ್ರತಿಮ್ ಚಟರ್ಜಿ ಅವರಿಂದ. 2013ರಲ್ಲಿ ಅವರು ಕೋಲ್ಕತ್ತ ನಗರಕ್ಕಾಗಿ ‘ತೊಮೇಕ್ ಚಾಯ್ ಬೋಲೆ ಬಂಚಿ’ ಎಂಬ ಗೀತೆಯನ್ನು ರಚಿಸಿ ಗಮನ ಸೆಳೆದಿದ್ದರು. ಶ್ರೀಜಾತೊ ಅವರ ಹಿಂದಿ ಮತ್ತು ಬೆಂಗಾಲಿ ಸಾಹಿತ್ಯದ ಜೊತೆಗೆ ಬಿಕ್ರಮ್ ಘೋಷ್ ಅವರ ಇಂಗ್ಲಿಷ್‌ ಸಾಹಿತ್ಯವನ್ನೂ ಈ ಹಾಡಿನೊಂದಿಗೆ ಬೆರೆಸಿದ್ದರು. ಇದರೊಂದಿಗೆ ಕೋಲ್ಕತ್ತ, ಅಧಿಕೃತ ಗೀತೆ ಹೊಂದಿದ ನಗರ ಎಂಬ ಖ್ಯಾತಿ ಪಡೆದಿದೆ. 15ನೇ ವಯಸ್ಸಿನಲ್ಲಿ ದೇಶದ ಅತ್ಯುತ್ತಮ ವಾದ್ಯಗಾರ ಪ್ರಶಸ್ತಿಯನ್ನು ರಾಷ್ಟ್ರಪತಿ ಅವರಿಂದ ಪಡೆದ ಖ್ಯಾತಿ ಪೂರ್ಬಯಾನ್ ಅವರದು. ಆದಿತ್ಯ ವಿಕ್ರಮ್ ಬಿರ್ಲಾ ಪ್ರಶಸ್ತಿ, ರೋಟರಿ ಇಂಟರ್‌ನ್ಯಾಷನಲ್ ‘ರಸೋಯಿ’ ಪ್ರಶಸ್ತಿಯೂ ಅವರಿಗೆ ಸಂದಿದೆ.