ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್‌ ಅವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಸೋಮವಾರ ಜಾಮೀನು ನಿರಾಕರಿಸಿದೆ.

ಪವಿತ್ರಾ ಗೌಡ, ಆರ್‌. ನಾಗರಾಜು, ಎಂ ಲಕ್ಷ್ಮಣಗೂ ಜಾಮೀನು ನಿರಾಕರಿಸಿದೆ.
ಇವರ ಕಾಯ್ದಿರಿಸಿದ್ದ ಜಾಮೀನು ಅರ್ಜಿಗಳ ಆದೇಶವನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಜೈಶಂಕರ ಅವರು ಸೋಮವಾರ ಪ್ರಕಟಿಸಿದರು. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್‌ ಮತ್ತು ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ, ದರ್ಶನ್‌ ಮ್ಯಾನೇಜರ್‌ ಆಗಿದ್ದ 11ನೇ ಆರೋಪಿ ಆರ್‌. ನಾಗರಾಜು ಹಾಗೂ 12ನೇ ಆರೋಪಿ ಎಂ ಲಕ್ಷ್ಮಣ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ, ಆರೋಪಿಗಳಾದ ರವಿಶಂಕರ ಮತ್ತು ದೀಪಕಕುಮಾರ ಅಲಿಯಾಸ್‌ ದೀಪಕಗೆ ಜಾಮೀನು ನೀಡಿದೆ.

ಈ ಹಿಂದೆ ಕಾರ್ತಿಕ ಅಲಿಯಾಸ್‌ ಕಪ್ಪೆ, ಕೇಶವಮೂರ್ತಿ ಮತ್ತು ನಿಖಿಲ್‌ ನಾಯಕಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಪ್ರಕರಣದಲ್ಲಿ 17 ಆರೋಪಿಗಳ ಪೈಕಿ ಐವರಿಗೆ ಜಾಮೀನು ಮಂಜೂರಾಗಿದೆ.