ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕದ ವತಿಯಿಂದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಡಿಯಲ್ಲಿ ಹಿರಿಯರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವು ಸನ್ಮಾನಿತರ ಸ್ವಗೃಹ ಶೇಡಿಮನೆ ಅಗಳಿಬೈಲು ಎಂಬಲ್ಲಿ ಅಕ್ಟೋಬರ್ 14 ರಂದು ನಡೆಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ ಹಿರಿಯರಾದ ಪಿ. ವಾಸುದೇವ ಕ್ರಮಧಾರಿಯವರನ್ನು ದಂಪತಿ ಸಮೇತ ಕ. ಸಾ. ಪ. ವತಿಯಿಂದ ಸನ್ಮಾನಿಸಿ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಕ ಸಾ. ಪ. ಪದಾಧಿಕಾರಿ ವೀಣಾ ಆರ್. ಭಟ್ ಸನ್ಮಾನ ಪತ್ರ ವಾಚಿಸಿದರು.
ನಾನು ಪ್ರಾಥಮಿಕ ಶಾಲೆಯಲ್ಲಿ ನನಗೆ ಕಲಿಸಿದ ಗುರುವಾಗಿದ್ದು, ಅವರ ಬೋಧನೆಯು ನನ್ನ ಮೇಲೆ ಪರಿಣಾಮ ಬೀರಿದುದರಿಂದ ನಾನು ಗಣಿತ ಶಿಕ್ಷಕನಾದೆ.ಆದುದರಿಂದ ನಾನು ಈ ಕಾರ್ಯಕ್ರಮಕ್ಕೆ ಬರಲೇಬೇಕಾಯಿತು ಎಂದು ಶಿಕ್ಷಕ ಸದಾಶಿವ ಬಾಯಾರಿ ಹೇಳಿದರು.ನನ್ನ ತಂದೆ, ತಾಯಿಯವರ ಸಲಹೆಯಂತೆ ಒಳ್ಳೆಯ ಜೀವನ ಮಾಡುತ್ತಿದ್ದು ಅವರೇ ನನಗೆ ಮಾರ್ಗದರ್ಶಕರಾಗಿದ್ದಾರೆ ಎಂದು ರಾಧಾಕೃಷ್ಣ ಕ್ರಮಧಾರಿ ನುಡಿದರು.
ಸನ್ಮಾನಿತರಾದ ವಾಸುದೇವ ಕ್ರಮಧಾರಿಯವರು ತನ್ನ ಸೇವಾವಧಿಯ ಕಾಲದ ಸನ್ನಿವೇಶಗಳನ್ನು ತಿಳಿಸುತ್ತಾ, ವರ್ಗಾವಣೆಗೊಂಡ ಶಾಲೆಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಫಲವಾಗಿ ಈಗ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಯಿತು ಕ.ಸಾ.ಪದ ಈ ಕಾರ್ಯಕ್ರಮ ತುಂಬಾ ಖುಷಿ ಕೊಟ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ಘಟಕ ಕ. ಸಾ. ಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ ವಹಿಸಿದ್ದರು.
ಕ. ಸಾ. ಪ ಗೌರವ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್ ಎಸ್. ಪ್ರಸ್ತಾವಿಕ ಮಾತನಾಡಿದರು . ಗೌರವ ಕಾರ್ಯದರ್ಶಿ ಮಂಜುನಾಥ ಶಿವಪುರ ಸ್ವಾಗತಿಸಿದರು.ಪದಾಧಿಕಾರಿ ಪುಷ್ಪಾವತಿ ಪ್ರಾರ್ಥಿಸಿದರು. ನವೀನ್ ಶೆಟ್ಟಿ ಮಡಾಮಕ್ಕಿ ನಿರೂಪಿಸಿ ವಂದಿಸಿದರು.ಪತ್ರಕರ್ತ ಬಾಲಚಂದ್ರ ಮುದ್ರಾಡಿ, ಕ. ಸಾ ಪ. ಸದಸ್ಯರು, ಕ್ರಮಧಾರಿ ಮನೆಯವರು ಹಾಜರಿದ್ದರು.