ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅಹಲ್ಯಾ ಬಾಯಿ ಹೋಳ್ಕರ್ ರವರ 300 ನೇ ವರ್ಷಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ರಾಷ್ಟ್ರ ಸೇವಿಕ ಸಮಿತಿಯ ಪ್ರಾಂತ ಸಹ ಬೌದ್ಧಿಕ ಪ್ರಮುಖ ಆಗಿರುವ ಮೀನಾಕ್ಷಿ ಪುತ್ತೂರು ಅವರು ಅಹಲ್ಯ ಬಾಯಿ ಹೋಳ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಬದುಕುವುದು ಬೇರೆ, ಬದುಕಿ ಬಾಳುವುದು ಬೇರೆ . ಈ ಭೂಮಿಯ ಮೇಲೆ ಬದುಕಿದವರು ಸಾವಿನ ನಂತರ ಮರೆಯಾಗುತ್ತಾರೆ . ಆದರೆ ಬದುಕಿ ಬಾಳಿದವರು ಇತಿಹಾಸದ ಪುಟಗಳಲ್ಲಿ ಅಜರಾಮರರಾಗುತ್ತಾರೆ . ಆ ರೀತಿ ಬದುಕಿ ಬಾಳಿದವರು ಅಹಲ್ಯ ಬಾಯಿ ಹೊಳ್ಕರ್ ಅವರು. ಶಿವ ಭಕ್ತೆಯೂ, ಸಾದ್ವಿಯೂ ಆಗಿರುವ ಹೋಳ್ಕರ್ ಅವರು ತನ್ನ ಗಂಡನ ಮರಣದ ನಂತರ ರಾಜ್ಯಭಾರವನ್ನು ನಡೆಸಿ ಸಾಕಷ್ಟು ಮಾದರಿ ಆಗಬಲ್ಲಂತಹ ಸುಧಾರಣೆಯನ್ನು ತನ್ನ ಆಡಳಿತದಲ್ಲಿ ತಂದವರು. ಎಲ್ಲರಿಗೂ ಒಂದೇ ನ್ಯಾಯ, ಗಂಡನ ಮರಣದ ನಂತರ ಹೆಂಡತಿಗೆ ಆಸ್ತಿಯ ಹಸ್ತಾಂತರ, ಟಪ್ಪಾಲ್ ವ್ಯವಸ್ಥೆ, ಸೈನ್ಯ ಮತ್ತು ರೈತರಿಗೆ ಪ್ರಾಧಾನ್ಯತೆ, ಸರಳ ಜೀವನ , ಸ್ತ್ರೀ ಸೈನ್ಯ ಇತ್ಯಾದಿಗಳಲ್ಲಿ ಐತಿಹಾ ಸಿಕ ನಿರ್ಣಯಗಳನ್ನು ಕೈಗೊಂಡು ಮಾದರಿಯಾದವರು . ಮೂರು ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಜೀರ್ಣೋದ್ಧಾರವನ್ನು ಮಾಡಿದವರು . ಇವರ ಎಲ್ಲಾ ಕಾರ್ಯಗಳಿಗಾಗಿ ಅವರನ್ನು ದೇವಿ ಅಹಲ್ಯಾ ಎಂದು ಕರೆಯುತ್ತಿದ್ದರು . ಇಂದಿನ ವಿದ್ಯಾರ್ಥಿಗಳಿಗೆ ಅವರ ಆದರ್ಶಗಳನ್ನು ಬೋಧಿಸುವ ಅವಶ್ಯಕತೆ ಇದೆ ಎಂದರು.
ಪ್ರಾಂಶುಪಾಲ ಅಮರೇಶ್ ಹೆಗ್ಡೆ , ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ , ಹಾಗೂ ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸುಹಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.