ಬೆಳಗಾವಿ : ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯ ಜಗದೀಶ ಶೆಟ್ಟರ್ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಕೆ. ಆರ್ ನಾಯ್ಡು ಅವರನ್ನು ಭೇಟಿಯಾಗಿ ಬೆಳಗಾವಿ- ಬೆಂಗಳೂರು-ಬೆಳಗಾವಿ ಮಧ್ಯೆ ದಿನನಿತ್ಯ ಬೆಳಿಗ್ಗೆ ಸಂಚರಿಸುವ ಇಂಡಿಗೋ ಸಂಸ್ಥೆ ವಿಮಾನಯಾನ ಸೇವೆಯನ್ನು ರದ್ದು ಮಾಡಿರುವ ಕುರಿತು ಗಮನಸೆಳೆದರು. ಇದು ರದ್ದಾಗದಂತೆ ನೋಡಿಕೊಳ್ಳುವ ವಿಷಯವಾಗಿ ಚರ್ಚಿಸಿದರು.
ಬೆಳಗಾವಿ – ಬೆಂಗಳೂರು – ಬೆಳಗಾವಿ ನಡುವೆ ಇಂಡಿಗೋ ಸಂಸ್ಥೆ ಪ್ರತಿನಿತ್ಯ ಬೆಳಿಗ್ಗೆ ವಿಮಾನಯಾನ ಸೇವೆಯನ್ನು ತುಂಬಾ ದಿನಗಳಿಂದ ಒದಗಿಸುತ್ತಾ ಬಂದಿದೆ, ಕಳೆದ ಒಂದು ವರ್ಷದಲ್ಲಿ 82 % ರಷ್ಟು ಅಂದರೆ ಪೂರ್ಣ ಸಾಮರ್ಥ್ಯ ಪ್ರಯಾಣಿಕರನ್ನು ವಿಮಾನದಲ್ಲಿ ಈ ಮಾರ್ಗದಲ್ಲಿ ಕರೆದೊಯುತ್ತಿದೆ. ಆದರೆ, ಇಂಡಿಗೋ ಏರ್ ಲೈನ್ಸ್ ಬರುವ ದಿನಾಂಕ 27-10-2024 ರಿಂದ ಈ ಸೇವೆಯನ್ನು ರದ್ದುಗೊಳಿಸಲಿದೆ. ಇದು ಅತ್ಯಂತ ಖೇದಕರ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುವುದು, ಇದನ್ನು ಯಾವುದೇ ಕಾರಣಕ್ಕೆ ರದ್ದು ಮಾಡದಂತೆ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸುವಂತೆ ಜಗದೀಶ್ ಶೆಟ್ಟರ್ ಅವರು ಕೇಂದ್ರ ಸಚಿವರಲ್ಲಿ ವಿನಂತಿಸಿದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸಚಿವರು ಈ ಬಗ್ಗೆ ಸಂಬಂಧಿಸಿದ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸುವ ಭರವಸೆಯನ್ನು ನೀಡಿದ್ದಾಗಿ ಸಂಸದರು ತಿಳಿಸಿದ್ದಾರೆ. ಇದೇ ರೀತಿಯಾಗಿ ಬೆಳಗಾವಿ ವಿಮಾನ ನಿಲ್ದಾಣದಿಂದ ಇತರ ನಗರಗಳಿಗೂ ಸಹ ಅಂದರೆ ಪುಣೆ, ಚೆನ್ನೈ ಕೊಚ್ಚಿನ್, ಲಖನೌ, ಮೈಸೂರು, ಸೂರತ್, ಮುಂಬಯಿ (ಏರ್ ಬಸ್) ಬೆಂಗಳೂರು (ಏರ್ ಬಸ್)
ಗಳಿಗೂ ಸಹ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಇತರೆ ವಿಮಾನ ಸಂಸ್ಥೆಗಳೊಂದಿಗೆ ಸಮಾಲೋಚಿಸುವಂತೆ ವಿಷಯ ಪ್ರಸ್ತಾಪಿಸಿದಾಗ ಆ ವಿಷಯವನ್ನು ಸಹ ಅವಶ್ಯವಾಗಿ ಪರಿಗಣಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾಗಿ ಹೇಳಿದರು.ಅದರಂತೆ ಇನ್ನೂ ಉಡಾನ್ -3/0 ಯೋಜನೆಯನ್ನು ಸಹ 10 ವರ್ಷಗಳ ಕಾಲಾವಧಿಗೆ ವಿಸ್ತರಿಸಿ, ಇದಕ್ಕೆ ಬೆಳಗಾವಿ ವಿಮಾನ ನಿಲ್ದಾಣವನ್ನು ಸೇರ್ಪಡೆ ಮಾಡಿ ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಲು ವಿನಂತಿಸಿ ಮನವಿಯನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ಸಂಸದರು ಅರ್ಪಿಸಿದರು.
ಪ್ರಸ್ತಾಪಿತ ವಿಷಯವಾಗಿಯೇ ನವದೆಹಲಿಯ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಪ್ರಸ್ತಾಪಿತ ವಿಮಾನಯಾನ ಸೇವೆಯ ಲೀಸ್ ಅವಧಿ ಪೂರ್ಣಗೊಂಡಿರುವ ಪ್ರಯುಕ್ತ ಈ ಸೇವೆಯನ್ನು ರದ್ದುಪಡಿಸುವುದು ಅನಿವಾರ್ಯ. ಆದರೆ ಬರುವ ಡಿಸೆಂಬರ್ ನಲ್ಲಿ ಹೊಸ ವಿಮಾನಗಳು ಸಂಸ್ಥೆಗೆ ಪೂರೈಕೆ ಯಾಗಲಿರುವ ಹಿನ್ನೆಲೆಯಲ್ಲಿ ಆವಾಗ ಖಂಡಿತವಾಗಿ ಪ್ರಸ್ತಾಪಿತ ಮಾರ್ಗದಲ್ಲಿ ಈ ಸೇವೆಯನ್ನು ಪುನಃ ಆರಂಭಿಸುವ ಭರವಸೆಯನ್ನು ಅವರು ನೀಡಿರುವುದಾಗಿ ಹಾಗೂ ಇದೇ ಸಂದರ್ಭದಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ, ಇನ್ನಿತರ ನಗರಗಳಿಗೂ ಸೇವೆಯನ್ನು ಒದಗಿಸುವ ಬಗ್ಗೆ ಅವರೊಡನೆ ಚರ್ಚಿಸಿರುವ ಅಂಶವನ್ನು ಪ್ರಸ್ತಾಪಿಸಿದ್ದಾಗಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.