ಬೆಂಗಳೂರು: ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡಬಾರದು. ರಾಜ್ಯದ ಕಲ್ಯಾಣ ಮಂಟಪ, ಹೋಟೆಲ್‌ಗಳಲ್ಲಿ ಆಹಾರ ಪೋಲಾಗುವುದನ್ನು ತಡೆಗಟ್ಟಲು ಕಾನೂನು ರೂಪಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯ ಡಾ| ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಹಾರ ಪೋಲಾಗುವುದನ್ನು ತಡೆಗೆಟ್ಟಲು ಕಾನೂನು ರೂಪಿಸುವ ಸಂಬಂಧ ಈಗಾಗಲೇ ಹೋಟೆಲ್ ಮಾಲೀಕರ ಸಭೆ ಕರೆದು ಚರ್ಚಿಸಲಾಗಿದೆ. ಕಲ್ಯಾಣ ಮಂಟಪಗಳಲ್ಲೂ ಬಹಳಷ್ಟು ಆಹಾರ ವ್ಯರ್ಥವಾಗುತ್ತಿದ್ದು, ಈ ಸಂಬಂಧ ಕಲ್ಯಾಣ ಮಂಟಪಗಳ ಮಾಲೀಕರ ಸಭೆಯನ್ನು ಕರೆದು ಚರ್ಚಿಸಲಾಗುವುದು. ದೇಶದಲ್ಲಿ ವಾರ್ಷಿಕ 90 ಸಾವಿರ ಕೋಟಿ ಮೌಲ್ಯದ ಆಹಾರ ಪದಾರ್ಥಗಳು ಪೋಲಾಗುತ್ತಿದ್ದು, ಇದನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯದ ಹಾಸ್ಟೆಲ್ ಗಳಲ್ಲಿ ಆಹಾರ ಪೋಲಾಗುವುದನ್ನು ತಡೆಗಟ್ಟಲು ಐವರು ವಿದ್ಯಾರ್ಥಿಗಳ ಸಮಿತಿ ರಚಿಸಲಾಗುವುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಎಸ್.ವಿ.ಸುರೇಶ ಭರವಸೆ ಹೇಳಿದರು.