ಶಿವಮೊಗ್ಗ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ 11ನೇ ಸೀಸನ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಶೋ ರದ್ದುಪಡಿಸುವಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸ್ಥಳೀಯ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಹಾಕಲಾಗಿದೆ.

ಬಿಗ್ ಬಾಸ್ ಶೋ ವಿರುದ್ಧ ಅನೇಕ ಆರೋಪ ಕೇಳಿಬಂದಿದ್ದು, ಕಳೆದ ವಾರ, ‘ಬಿಗ್ ಬಾಸ್’ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ವಕೀಲೆಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ತಂಡ ಎಚ್ಚತ್ತುಕೊಂಡು ಈ ಬಾರಿಯ ನರಕ- ಸ್ವರ್ಗ ಎಂಬ ಪರಿಕಲ್ಪನೆಯನ್ನು ಅರ್ಧಕ್ಕೆ ನಿಲ್ಲಿಸಿ ಎಲ್ಲಾ ಸ್ಪರ್ಧಿಗಳನ್ನು ಒಂದೇ ಮನೆಯಲ್ಲಿ ಇರುವ ಅವಕಾಶ ಕಲ್ಪಿಸಲಾಗಿದೆ.

ಹೀಗಿರುವಾಗಲೇ ಬಿಗ್ ಬಾಸ್ 11ನೇ ಸೀಸನ್ ಪ್ರಸಾರವನ್ನು ಖಾಯಂ ಆಗಿ ರದ್ದುಪಡಿಸುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿದೆ. ಸಾಗರದ ವಕೀಲ ಕೆ.ಎಲ್ ಭೋಜರಾಜ್ ಎಂಬವರು ವ್ಯವಹಾರ ಪ್ರಕ್ರಿಯಾ ಸಂಹಿತೆ ಆದೇಶ 39 ನಿಯಮ 1 ಮತ್ತು 2ರ ಸೆಕ್ಷನ್ 151ರ ಪ್ರಕಾರ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಧೀಶೆ ಚಾಂದಿನಿ ಜಿ.ಯು. ಅವರು ವಕೀಲ ಕೆ.ಎಲ್ ಭೋಜರಾಜ್ ಅವರ ಅರ್ಜಿ ಕೈಗೆತ್ತಿಕೊಂಡಿದ್ದಾರೆ.