ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪುರಾತನ ಐತಿಹಾಸಿಕ ದೇವಾಲಯಗಳಲ್ಲಿ ನೆಲ್ಲಿತೀರ್ಥ ಸೋಮನಾಥೇಶ್ವರ ದೇವಸ್ಥಾನವು ಒಂದಾಗಿದ್ದು, ಈ ದೇವಸ್ಥಾನವು ಕಟೀಲಿನಿಂದ ಸುಮಾರು 8 ಕಿ.ಮೀ ದೂರವಿರುವ ಹಚ್ಚಹಸುರಿನ ಪ್ರಕೃತಿ ಮಡಿಲ್ಲಲಿದೆ. ನೆಲ್ಲಿತೀರ್ಥ ಗುಹೆಯು ಭಕ್ತರ ದರ್ಶನಕ್ಕೆ ಈ ವರ್ಷ ಅಕ್ಟೋಬರ್ 17ರ ತುಲಾಸಂಕ್ರಮಣದಂದು ತೆರೆದುಕೊಂಡಿದೆ.
ಗುಹೆಯ ವೈಶಿಷ್ಟ್ಯ:
ನೆಲ್ಲಿತೀರ್ಥ ಸೋಮನಾಥೇಶ್ವರ ದೇವಾಲಯದ ಪ್ರಮುಖ ಆಕರ್ಷಣೆ ಇಲ್ಲಿರುವ ಗುಹೆ. ದೇವಸ್ಥಾನದ ಪ್ರವೇಶದ್ವಾರದ ಬಲಬದಿಯಲ್ಲಿ ಗುಹೆಯಿದ್ದು ಸುಂದರವಾಗಿದೆ. ಸುಮಾರು 2೦೦ ಮೀಟರ್‌ನಷ್ಟು ಉದ್ದವಾಗಿರುವ ಈ ಗುಹೆಯಲ್ಲಿ ಜಾಬಾಲಿ ಮಹರ್ಷಿಗಳು ಶ್ರೀ ದುರ್ಗಾಪರಮೇಶ್ವರಿಯನ್ನು ಒಲಿಸಿಕೊಳ್ಳಲು ತಪಸ್ಸನಾಚರಿಸಿದ್ದರು ಎಂಬುದು ಶ್ರೀ ಕ್ಷೇತ್ರದ ಇತಿಹಾಸದಿಂದ ತಿಳಿದು ಬರುತ್ತದೆ. ಗುಹೆಯ ಮೇಲ್ಬಾಗದ ಕಲ್ಲುಗಳಲ್ಲಿರುವ ನೆಲ್ಲಿಯ ಸಸ್ಯಗಳಿಂದ ತೊಟ್ಟಿಕ್ಕುವ ನೀರಿನಿಂದಾಗಿ ನೆಲ್ಲಿತೀರ್ಥ ಎಂಬ ಹೆಸರು ಈ ಕ್ಷೇತ್ರಕ್ಕೆ ಬಂದಿದೆ. ಗುಹೆಯ ಒಳಗಡೆ ಸಂಪೂರ್ಣ ಕತ್ತಲಿದ್ದು ಬೆಳಕಿಗಾಗಿ ಅಲ್ಲಲ್ಲಿ ದೀಪಗಳನ್ನು ಹಚ್ಚಿಡಲಾಗುತ್ತದೆ. ಕೆಲವೊಂದು ಕಡೆ ಬಾಗಿಕೊಂಡು ನಂತರ ತೆವಳಿಕೊಂಡು ಸಾಗಿದಂತೆ ಗುಹೆಯೊಳಗೆ ತಲುಪಬಹುದು.ಗುಹೆಯೊಳಗೆ ವಿಶಾಲವಾದ ಪ್ರದೇಶವಿದ್ದು ತುಸು ಎತ್ತರದಲ್ಲಿ ಸುಂದರವಾದ ಭೂಲಿಂಗವಿದೆ. ಲಿಂಗದ ಪಕ್ಕದಲ್ಲಿ ವಿಪುಲ ಜಲರಾಶಿಯು ಹರಿಯುತ್ತಿದ್ದು ಈ ಜಲವನ್ನು ಭಕ್ತರು ಶಿವನಿಗೆ ಅಭಿಷೇಕ ಮಾಡಿ ಧನ್ಯರಾಗುತ್ತಾರೆ.ಗುಹೆಯು ಔಷಧಿ ಗುಣವುಳ್ಳ ಮಣ್ಣು ಹೊಂದಿದ್ದು ಭಕ್ತರು ತಮ್ಮ ಚರ್ಮ ಸಂಬಂಧಿ ಸಮಸ್ಯೆಗಳಿಗೆ ದೇಹಕ್ಕೆ ಲೇಪಿಸಿಕೊಳ್ಳುತ್ತಾರೆ.
ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮುಖ್ಯ ದೇವರು. ದೇವಸ್ಥಾನದ ಪಕ್ಕದಲ್ಲಿ ಮಹಾಗಣಪತಿ ಮತ್ತು ಜಾಬಾಲಿ ಮಹಿರ್ಷಿ ಗುಡಿಗಳಿವೆ. ಅಲ್ಲದೆ ತುಳುನಾಡಿನ ಭೂತರಾಧನೆಯ ಪ್ರಮುಖ ದೈವಗಳಾದ ಪಿಲಿಚಾಮುಂಡಿ, ಕ್ಷೇತ್ರಪಾಲ, ರಕ್ತೇಶ್ವರಿ ಮತ್ತು ಧೂಮಾವತಿ ಇಲ್ಲಿವೆ. ದೇವಸ್ಥಾನದ ಉತ್ತರಕ್ಕೆ ನಾಗಪ್ಪ ಕೆರೆ ಎಂಬ ಹೆಸರಿನ ನೈಸರ್ಗಿಕ ಕೆರೆಯಿದೆ. ಗುಹೆಯನ್ನು ಪ್ರವೇಶಿಸ ಬಯಸುವ ಭಕ್ತರು ಮೊದಲು ಈ ಕೆರೆಯಲ್ಲಿ ಸ್ನಾನ ಮಾಡಬೇಕು.
ಮಾರ್ಗ ಸೂಚಿ :
1. ಮಂಗಳೂರು-ಮೂಡಬಿದಿರೆ ಮಾರ್ಗವಾಗಿ ಸಾಗಿ ಎಡಪದವು ಸ್ಥಳದಲ್ಲಿ ಇಳಿದು ನಂತರ 8 ಕಿ.ಮೀ ಪ್ರಯಾಣ ಮಾಡಿ ದೇವಸ್ಥಾನ ತಲುಪಬಹುದು.
2. ಬಜ್ಪೆಯಿಂದ ಪ್ರಯಾಣ ಬಯಸುವವರು ಕತ್ತಲ್‌ಸಾರ್ ಮಾರ್ಗದಲ್ಲಿ ಪ್ರಯಾಣ ಮಾಡಿ ತಲುಪಬಹುದು.
3. ಶ್ರೀಕ್ಷೇತ್ರ ಕಟೀಲಿನಿಂದ 8 ಕಿ.ಮೀ ದೂರವಿದ್ದು ಎಕ್ಕಾರು ಸಮೀಪದ ಮಾರ್ಗದ ಮೂಲಕ ನೆಲ್ಲಿತೀರ್ಥ ಕ್ಷೇತ್ರಕ್ಕೆ ಹೋಗಬಹುದಾಗಿದೆ.Sri Somanatheshwara Cave Temple Sri Kshetra Nellitheertha
Neerude Post, Kompadavu Village Mangalore Taluk, South Kanara District
Karnataka, India