ಬೆಳಗಾವಿ : ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರಕಾರ ಈ ಕೂಡಲೇ ಅಧಿಕಾರ ತ್ಯಜಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಾಲ್ಮೀಕಿ ನಿಗಮದ ಹಣವನ್ನು ನಾಗೇಂದ್ರ ಅವರು ತಮ್ಮ ವೈಯಕ್ತಿಕ ಹಾಗೂ ಕುಟುಂಬಕ್ಕೋಸ್ಕರ
ವಿನಿಯೋಗಿಸಿದ್ದಾರೆ. ಅಂದರೆ ವಿಮಾನ ಪ್ರಯಾಣದ ಟಿಕೆಟ್, ಪೆಟ್ರೋಲ್ ಡೀಸೆಲ್ ಖರೀದಿ, ಮನೆ ವಿದ್ಯುತ್ ಶುಲ್ಕ, ಮನೆ ಕೆಲಸದವರ ವೇತನ, ಈ ಹಗರಣದ ಹಣದಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿದ್ದು ಇದನ್ನು ಸಾಕ್ಷಿ ಸಹಿತ ಇ.ಡಿ ದೃಢೀಕರಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಚೂರು ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆ ಆಗಿರುವುದು ಉಲ್ಲೇಖವಾಗಿದೆ ಎಂದು ಹೇಳಿದರು.ಬಿಜೆಪಿ ಮುಖಂಡ ಎಂ.ಬಿ.ಜಿರಲಿ ಮಾತನಾಡಿ, ಬಳ್ಳಾರಿ ಲೋಕಸಭೆ ಚುನಾವಣೆಗೆ ಒಟ್ಟು ಇಪ್ಪತ್ತು ಕೋಟಿ ವೆಚ್ಚ ರೂ. ಮಾಡಲಾಗಿದೆ. ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಒಟ್ಟು 15.82 ಕೋಟಿ, ಮದ್ಯ ಖರೀದಿಗೆ ನಾಲ್ಕು ಕೋಟಿ ಮತ್ತು ಓಡಾಟಕ್ಕೆ 50 ಲಕ್ಷ ವೆಚ್ಚ ಮಾಡಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಪಕ್ಷವಾಗಿದೆ, ಪ್ರತಿದಿನ ಒಂದೊಂದು ಹಗರಣಗಳ ಮೂಲಕ ದಿನಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತಿದೆ. ಮೈಸೂರಿನ ಮುಡಾ ಹಗರಣ, 187 ಕೋಟಿ ವಾಲ್ಮೀಕಿ ನಿಗಮ ಹಗರಣ, ಸಿದ್ದಾರ್ಥ್ ವಿಹಾರ ಟ್ರಸ್ಟ್ ಹಗರಣ, ವಕ್ಫ್ ಬೋರ್ಡ್ ಹಗರಣಗಳು ಮತ್ತು ಇನ್ನೂ ಮುಂತಾದ ಹಗರಣಗಳಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಭಿವೃದ್ಧಿಯನ್ನೇ ಮಾಡದೆ ಹಗರಣಗಳಲ್ಲಿ ಮುಳುಗಿ ಹೋಗಿದೆ ಎಂದು ಆರೋಪಿಸಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ಸರ್ಕಾರ ಮುಡಾ ಅಧ್ಯಕ್ಷ ಮರಿಗೌಡ ರಾಜೀನಾಮೆಯನ್ನು ಪಡೆದು ತಮ್ಮ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದೆ. ಈ ರಾಜ್ಯವನ್ನು ಆಳುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮುಷ್ಟಿಯಲ್ಲಿರುವ ಯಾವ ತನಿಖಾ ಸಂಸ್ಥೆಯಿಂದಲೂ ನ್ಯಾಯ ಸಿಗುವುದಿಲ್ಲ ಎನ್ನುವುದನ್ನು ಈಗಾಗಲೇ ಕಾನೂನು ಪಂಡಿತರು ಹಾಗೂ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ತೀವ್ರಗೊಳಿಸಿರುವ ಇ.ಡಿ ತನಿಖೆಯಿಂದ ಹಗರಣದ ಬಂಡವಾಳ ಬಯಲಾಗುತ್ತದೆ, ತಪ್ಪಿತಸ್ಥರಿಗೆಲ್ಲರಿಗೂ ಶಿಕ್ಷೆಯಾಗುತ್ತದೆ ಎಂಬ ನಿರೀಕ್ಷೆ ಮೂಡಿಸಿದೆ. ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕು ಮುಡಾಕ್ಕೆ ಸಂಬಂಧಿಸಿದ ಕಡತಗಳನ್ನು ಹೆಲಿಕಾಪ್ಟರ್ ನಲ್ಲಿ ತುಂಬಿಕೊಂಡು ಬಂದು ತಿದ್ದುಪಡಿ ಮಾಡಿಸಿ ಹಾಗೂ ಅವುಗಳ ನಾಶಕ್ಕೆ ಮುಂದಾದ ಸಚಿವ ಭೈರತಿ ಸುರೇಶ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ,ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಸ್ ಸಿದ್ದನಗೌಡರ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಹನುಮಂತ್ ಕೊಂಗಾಲಿ, ಸುಭಾಷ್ ಸಣ್ಣವೀರಪ್ಪನವರ, ವಿಠ್ಠಲ ಸಾಯಣ್ಣವರ, ವೀರಭದ್ರ ಪೂಜಾರಿ ಹಾಗೂ ಅನೇಕರು ಉಪಸ್ಥಿತರಿದ್ದರು