ಮುಂಬಯಿ : ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತು ಎಂದುಕೊಳ್ಳುತ್ತಿರುವಾಗಲೇ ಕಮಲ ಪಕ್ಷ ಗೆಲುವಿನ ನಗೆ ಬೀರಿತು. ಅದಕ್ಕೆ ಕಾರಣವಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ’ದ(ಆರ್‌ಎಸ್ ಎಸ್) ಕಾರ್ಯಕರ್ತರ ಪರಿಶ್ರಮ ಎಂಬ ಮಾತುಗಳಿವೆ. ಈ ನಡುವೆ ಇದೀಗ ದೇಶದ ಎರಡನೇ ಅತಿ ದೊಡ್ಡ ರಾಜ್ಯ ಗೆಲ್ಲಲು ಆರ್ ಎಸ್ ಎಸ್ ರಣತಂತ್ರ ಹೆಣದಿದೆ. ಯಾವುದೇ ಕಾರಣಕ್ಕೂ ಈ ರಾಜ್ಯವನ್ನು ಇಂಡಿಯಾ ಮೈತ್ರಿಕೂಟಕ್ಕೆ ಬಿಟ್ಟು ಕೊಡದೆ ಇರಲು ಆರ್ ಎಸ್ ಎಸ್ ತೆರೆ ಮರೆಯಲ್ಲಿ ಅಗತ್ಯವಾದ ತಂತ್ರಗಾರಿಕೆ ರೂಪಿಸುತ್ತಿದೆ.

ಹರಿಯಾಣದಂತೆ ಮಹಾರಾಷ್ಟ್ರ ಚುನಾವಣೆಯಲ್ಲೂ ಆರ್‌ಎಸ್‌ಎಸ್‌ ಅದೇ ಬಗೆಯಲ್ಲಿ ಹೊಸತಂತ್ರಗಳನ್ನು ಹೂಡಲಿದೆ ಎಂದು ಹೇಳಲಾಗಿದೆ.

ಈ ಮೊದಲು ಬಿಜೆಪಿ-ಸಂಘದ ಮಧ್ಯೆ ಅಂತರ ಉಂಟಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಕೆಲವು ಏಕಮುಖ ನಿರ್ಧಾರಗಳನ್ನು ಆರ್‌ಎಸ್‌ಎಸ್‌ ವಿರೋಧಿಸಿತ್ತು. ಈ ಬಿರುಕಿನ ಪರಿಣಾಮವೇನು
ಎಂಬುದಕ್ಕೆ ಏಪ್ರಿಲ್‌ನಲ್ಲಿ ನಡೆದ ಲೋಕಸಭೆ ಚುನಾವಣೆ ಸಾಕ್ಷಿಯಾಗಿದೆ. ಬಳಿಕ ಪರಿಸ್ಥಿತಿ ತಿಳಿಯಾಗಿದೆ. ಬಿಜೆಪಿ ಸೋಲಲಿದ್ದ ಹರಿಯಾಣದಲ್ಲಿ ಸಮೀಕ್ಷೆಗಳನ್ನೇ ತಲೆಕೆಳಗಾಗಿಸಿ ಗೆಲುವನ್ನು ಕಮಲ ಪಕ್ಷ ದಕ್ಕಿಸಿಕೊಂಡಿದೆ. ಅದಕ್ಕೆ ಕಾರಣವಾಗಿದ್ದೇ ಆರ್‌ಎಸ್ಎಸ್‌ ತಂತ್ರ ಎನ್ನಲಾಗಿದೆ. ಇದೀಗ ಮಹಾರಾಷ್ಟ್ರದಲ್ಲಿಯೂ ಮಹಾಯುತಿ ಮೈತ್ರಿ ಕೂಟದ ಪರವಾಗಿ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಆರ್ ಎಸ್ಎಸ್ ಮುಂದಾಗಿದೆ. ಅದಾಗಲೇ ಪ್ರಚಾರ ಕಾರ್ಯವನ್ನು ಬೇರುಮಟ್ಟದಲ್ಲಿ ಆರಂಭಿಸಿದೆ. 10 ಜನರ ಸಣ್ಣ ಗುಂಪುಗಳನ್ನಾಗಿ ಮಾಡಿಕೊಂಡು ಸ್ಥಳೀಯರ ಮೂಲಕ ಮತದಾರರನ್ನು ನೇರವಾಗಿ ತಲುಪುತ್ತಿದೆ ಎಂದು ಹೇಳಲಾಗುತ್ತಿದೆ. ಹಿಂದೆ ಗುಂಪಿನ ಶಿವ ಸೇನೆ ಹಾಗೂ ಬಿಜೆಪಿ ಆಡಳಿತ ನಡೆಸುತ್ತಿದ್ದಾಗ ಜನರಿಗೆ ಹೆಚ್ಚು ಅಸಮಾಧಾನ ಇರಲಿಲ್ಲ. ಆದರೆ ಅಜಿತ ಪವಾರ್ ಗುಂಪು ಬಿಜೆಪಿ ಮೈತ್ರಿಕೂಟ ಸೇರಿದ ನಂತರ ಸಾರ್ವಜನಿಕವಾಗಿ ಸರಕಾರದ ವಿರುದ್ಧ ನಕಾರಾತ್ಮಕ ಧೋರಣೆ ಹೆಚ್ಚಾಗಿದೆ. ಇದು ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿರುವುದರಿಂದ ವಿಧಾನಸಭಾ ಚುನಾವಣೆ ಬಗ್ಗೆ ಆರ್ ಎಸ್ ಎಸ್ ಈ ಸಲ ಹೆಚ್ಚು ಗಮನ ಕೇಂದ್ರೀಕರಿಸಿದೆ.