ಶಾಲೆಯಲ್ಲಿ ಕಲಿತ ಜ್ಞಾನಕ್ಕಿಂತ ಮನೆಯಲ್ಲಿ ಕಲಿತ ಸಂಸ್ಕಾರ ಶ್ರೇಷ್ಠವಾದುದು. ಮನೆಯೇ ಸಂಸ್ಕಾರದ ತೊಟ್ಟಿಲು. ಸಂಸ್ಕಾರಯುಕ್ತ ಮನುಷ್ಯ ಸಮಾಜಕ್ಕೆ ಭಾರವಾಗುವುದಿಲ್ಲ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ ಎಂ ತ್ಯಾಗರಾಜ ಅಭಿಪ್ರಾಯಪಟ್ಟರು.

ಬೆಳಗಾವಿ : ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರದಂದು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಕುಲಪತಿ ಪ್ರೊ ಸಿ ಎಂ ತ್ಯಾಗರಾಜ ಅವರು ಮಾತನಾಡಿ, ಮನೆಯೇ ಸಂಸ್ಕಾರದ ತೊಟ್ಟಿಲು. ಸಂಸ್ಕಾರ ಮನೆಯಿಂದಲೇ ಬರಬೇಕು. ಮಗುವಿನ ಶೈಶವಾವಸ್ಥೆಯು ಈ ಹಿಂದೆ ತಾತ, ಮುತ್ತಾತ, ಅಜ್ಜಿಯ ಮಾರ್ಗದರ್ಶನದಲ್ಲಿ ಅರಳುತ್ತಿತ್ತು. ಈಗ ಮನೆಯಲ್ಲಿ ಹಿರಿಯರಿಲ್ಲದೇ ಇರುವುದು, ಹಿರಿಯರಿಂದ ದೂರವಿರುವುದರಿಂದಾಗಿ ಮಕ್ಕಳು ಉತ್ತಮವಾದ ಸಂಸ್ಕಾರದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಮಕ್ಕಳು ಸಮಾಜದಲ್ಲಿ ಉದಾತ್ತ ಚಿಂತನೆಯಿಂದ ದೂರವಾಗಿ, ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಯಾವ ಮಗು ತಾನು ಬೆಳೆದ ಪರಿಸರದ ಮಣ್ಣಿನ ಸಂವೇದನೆ ಯೊಂದಿಗೆ ಬೆರೆತು ಗಟ್ಟಿಯಾದ ಬದುಕನ್ನು ರೂಪಿಸಿಕೊಳ್ಳಬೇಕಿತ್ತೋ ಅದು ಇಂದು ಟೊಳ್ಳಾಗಿದೆ. ಯಾರು ಹಿರಿಯರ ಪರಂಪರೆ, ವಿಚಾರಗಳ ಪರಂಪರೆ, ತತ್ವಗಳ ಪರಂಪರೆಯಲ್ಲಿ ಸಾಗುತ್ತಾರೆ. ಅವರ ಬದುಕು ಸಮಾಜದಲ್ಲಿ ಗಟ್ಟಿಯಾಗಿರುತ್ತದೆ, ಸಮಾಜಕ್ಕೆ ನೆರಳಾಗುತ್ತದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎಚ್. ಎನ್ ಮುರಳೀಧರ ಅವರು ಪೋಷಕರಲ್ಲಿ ತಮ್ಮ ಮಕ್ಕಳು ಭೌತಿಕ ಸಂಪತ್ತನ್ನು ಗಳಿಸಬೇಕು ಎಂಬ ಅಭಿಲಾಷೆಯಿದೆ. ಆದರೆ ಬಹುತೇಕ ಪೋಷಕರು ತಮ್ಮ ಮಕ್ಕಳು ಉತ್ತಮ ಗುಣಗಳ ಸಂಪತ್ತನ್ನು ಗಳಿಸಬೇಕು ಎಂಬುದನ್ನೇ ಮರೆಯುತ್ತಾರೆ. ಇಂದಿನ ಶಿಕ್ಷಣ ವ್ಯವಸ್ಥೆಯು ಇನ್ವೆಸ್ಟ್ ಮತ್ತು ರಿಟರ್ನ್ ಪಾಲಿಸಿಯಿಂದ ಕೂಡಿದೆ. ಪೋಷಕರು ತಮ್ಮ ಮಕ್ಕಳನ್ನು ಲಾಭದಾಯಕ ಕೋರ್ಸ್ ಗಳಿಗೆ ಸೇರಿಸುವುದಕ್ಕಾಗಿ ಹಾತೊರೆಯುತ್ತಾರೆ. ಸಮಾಜದಲ್ಲಿ ಎಲ್ಲಾ ಜ್ಞಾನ ಶಾಖೆಗಳು ಬೇಕು. ಎಲ್ಲಾ ಜ್ಞಾನ ಶಾಖೆಗಳನ್ನು ಓದಿದವರು ಸಮಾಜದಲ್ಲಿ ಇದ್ದಾಗ ಒಂದು ಉತ್ತಮ, ಪರಿಪೂರ್ಣ ಸಮಾಜವನ್ನು ಕಾಣಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಅಂಗವೈಕಲ್ಯ ಸಮಾಜವನ್ನು ಸೃಷ್ಟಿ ಮಾಡಿದಂತಾಗುತ್ತದೆ. ಉತ್ತಮ ಶಿಕ್ಷಣ ವ್ಯವಸ್ಥೆಯಿಂದ ಉತ್ತಮ ಸಮಾಜ ಸಾಧ್ಯ. ಆದರೆ ಇಂದು ಅದರ ವಿರುದ್ಧ ಶಿಕ್ಷಣ ವ್ಯವಸ್ಥೆ ಸಾಗುತ್ತಿದೆ. ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಸಮಾಜದ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅನಕ್ಷರಸ್ಥರಿಗೆ ಬೆಳಕನ್ನು ಕೊಡಬೇಕು ಜೊತೆಗೆ ಅಕ್ಷರಸ್ಥರಿಗೆ ಇನ್ನಷ್ಟು ಹೆಚ್ಚಿನ ಬೆಳಕನ್ನು ಕೊಡಬೇಕು ಎಂಬ ಸ್ವಾಮಿ ವಿವೇಕಾನಂದರ ಮಾತುಗಳನ್ನು ವಿವರಿಸಿದರು.

ಬೆಂಗಳೂರಿನ ದೀನ ಬಂಧು ಮಕ್ಕಳ ಫೌಂಡೇಶನ್ ನ ಸಂಸ್ಥಾಪಕ, ರಾಷ್ಟ್ರಕವಿ ಜಿಎಸ್ಎಸ್ ಪುತ್ರ ಜಿ. ಎಸ್ .ಜಯದೇವ ಅವರು ನಮ್ಮ ಜ್ಞಾನ ಪರಂಪರೆ ದೊಡ್ಡದು. ನಮ್ಮಲ್ಲಿ ವಿಜ್ಞಾನದ ಬಗೆಗೆ ಅಗಾಧ ತಿಳಿವಳಿಕೆ ಇತ್ತು. ಇವೆಲ್ಲವನ್ನು ಕೆಲವೇ ಕೆಲವು ಪಂಗಡಗಳು ಮುಚ್ಚಿಟ್ಟುಕೊಂಡಿದ್ದವು. ಕೊಠಾರಿ ಆಯೋಗ ಈ ದೇಶದಲ್ಲಿ ಬಡವ- ಬಲ್ಲಿದ ಎಂಬ ಬೇಧ ಮಾಡದೇ ಎಲ್ಲರಿಗೂ ಸಮಾನ ಶಿಕ್ಷಣ ನೀಡಬೇಕು ಎಂಬುದನ್ನು ಪ್ರತಿಪಾದಿಸಿತು. ಆದರೆ ಆದು ಅನುಷ್ಠಾನದಿಂದ ದೂರ ಉಳಿಯಿತು. ಅದನ್ನು ಮತ್ತೆ ತರಬೇಕೆಂದರೆ ರಾಜಕೀಯ ಇಚ್ಛಾಶಕ್ತಿ ಬೇಕು. ಶಾಲೆಗಳು ಸಮಾನತೆಯನ್ನು ತರಬೇಕಾಗಿತ್ತು. ಆದರೆ ಅವು ಅಸಮಾನತೆಯ ತೊಟ್ಟಿಲಾಗಿವೆ. ಶಿಕ್ಷಣ ವ್ಯವಸ್ಥೆಯು ಸಮಾಜದ ಸಮಸ್ಯೆಯ ಪರಿಹಾರ ರೂಪಕವಾಗಿ ಇರಬೇಕಿತ್ತು. ಅದು ಇನ್ನಷ್ಟು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಹಿಂದೆ ಹೆಣ್ಣು ಮಕ್ಕಳಿಗೆ ಶಿಕ್ಷಣವೇ ಸಿಗಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಪಾರಮ್ಯ ಸಾಧಿಸುತ್ತಿದ್ದಾರೆ. ಇದು ಖುಷಿಯ ಸಂಗತಿ. ಅದರ ಜೊತೆಗೆ ಅವರು ಪಡೆದ ಜ್ಞಾನ ಸಾರ್ವಜನಿಕ ರಂಗದಲ್ಲಿ ಉಪಯೋಗಕ್ಕೆ ಬರಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲ
ಪ್ರೊ. ಎಂ. ಜಿ. ಹೆಗಡೆ ಅವರು ವಿದ್ಯಾರ್ಥಿಗಳು ತಾವು ಬೆಳೆದು ಬಂದ ಪರಿಸರದೊಂದಿಗೆ ಮುಖಾಮುಖಿ ಯಾಗಬೇಕು. ಸಾಮಾಜಿಕ ಜವಾಬ್ದಾರಿ ಹಾಗೂ ಉನ್ನತ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜ್ಞಾನದಾಹಿಯಾಗಬೇಕು. ಜ್ಞಾನವನ್ನು ಸಂಪಾದಿಸುವುದೇ ಪ್ರಥಮ ಗುರಿಯಾಗಬೇಕು. ಪಡೆದುಕೊಳ್ಳುವ ಜ್ಞಾನವು ನಮ್ಮ ಒಳಗಣ್ಣನ್ನು ತೆರೆಯುವಂತೆ ಇರಬೇಕು ಹಾಗಾದಾಗ ಬದುಕು ಸಾರ್ಥಕವಾಗುತ್ತದೆ. ಜಿ. ಎಸ್. ಜಯದೇವ ಅವರು ನಡೆಸುತ್ತಿರುವ ದೀನ ಬಂಧು ಎಂಬುದು ಒಂದು ಮಕ್ಕಳ ವಿಶ್ವವಿದ್ಯಾಲಯವಿದ್ದ ಹಾಗೆ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ, ಅವರ ಬದುಕನ್ನು ರೂಪಿಸಲು ಈ ಸಂಸ್ಥೆ ನಿಸ್ವಾರ್ಥವಾಗಿ ಸೇವೆ ಮಾಡುತ್ತಿದೆ ಎಂದರು.

ಸಂವಾದದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಇಬ್ಬರೂ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.