ಹುಬ್ಬಳ್ಳಿ: ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಪಿ. ಯೋಗೇಶ್ವರ ಅವರು ಸೋಮವಾರ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು, ಸೋಮವಾರ ಸಂಜೆ ಹುಬ್ಬಳ್ಳಿಗೆ ತೆರಳಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಅವರು, ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಒಂದು ಸಾಲಿನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರವನ್ನು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಗೆ ಸ್ಪರ್ಧಿಸಬೇಕಾದರೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಆದ್ದರಿಂದ ರಾಜೀನಾಮೆ ನೀಡಿದ್ದೇನೆ. ನಾನು ಯಾವುದೇ ಪಕ್ಷ ಸೇರುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ವಿಧಾನ ಪರಿಷತ್ ಸದಸ್ಯತ್ವಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ಅಂಗೀಕರಿಸಿದ್ದಾರೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ಸಿ.ಪಿ. ಯೋಗೇಶ್ವರ ವಿಧಾನ ಪರಿಷತ್ನ ನಾಮನಿರ್ದೇಶಿತ ಬಿಜೆಪಿ ಸದಸ್ಯರಾಗಿದ್ದು, ಈ ಬಾರಿ ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ಕ್ಷೇತ್ರವನ್ನು ಬಿಟ್ಟುಕೊಡದಿರಲು ನಿರ್ಧರಿಸಿದೆ. ಅಲ್ಲದೇ ಹೈಕಮಾಂಡ್ ಸಹ ಜೆಡಿಎಸ್ ಕ್ಷೇತ್ರವಾಗಿದ್ದರಿಂದ ಅವರಿಗೆ ಬಿಟ್ಟುಕೊಟ್ಟಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಯೋಗೇಶ್ವರ ಬಿಜೆಪಿಯ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.