ಬೆಳಗಾವಿ: ವೀರರಾಣಿ ಕಿತ್ತೂರು ಚನ್ನಮ್ಮ ಉತ್ಸವ ಬುಧವಾರ ನಡೆಯಲಿದೆ. ಆದರೆ ರಾಣಿ ಚನ್ನಮ್ಮ ಅವರ ವಂಶದವರಿಗೆ ಜಿಲ್ಲಾಡಳಿತ ಅಪಮಾನ ಮಾಡಿದೆ. ಈ ಹಿನ್ನೆಲೆಯಲ್ಲಿ ಉತ್ಸವ ಬಹಿಷ್ಕರಿಸಲು ಮುಂದಾಗಿರುವುದಾಗಿ ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮಳ ವಂಶದ ಉದಯ ದೇಸಾಯಿ ಅವರು ಜಿಲ್ಲಾಡಳಿತದ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2014 ರಿಂದ ನಮಗೆ ಕಿತ್ತೂರು ಉತ್ಸವದ ಅಹ್ವಾನ ಬರುತ್ತಿತ್ತು. ಅಮಂತ್ರಣ ಪತ್ರಿಕೆಯಲ್ಲಿ ನಮ್ಮ ಹೆಸರನ್ನು ಮುದ್ರಿಸಿ, ಮೊದಲ ದಿನ ನಮಗೆ ಸತ್ಕರಿಸುತ್ತಿದ್ದರು. ಇದುವರೆಗೆ ನಮಗೆ ಯಾವುದೇ ಆಮಂತ್ರಣ ಬಂದಿಲ್ಲ. ಅಷ್ಟೇ ಅಲ್ಲ ಸಮಾರೋಪ ಸಮಾರಂಭದಲ್ಲಿ ಚೆನ್ನಮ್ಮಾಜಿ ವಂಶಜರು ಅಂತ ಅಮಂತ್ರಣ ಮುದ್ರಣ ಮಾಡಿದ್ದಾರೆ. ಯಾರ ಹೆಸರು ಉಲ್ಲೇಖಿಸಿಲ್ಲ. ಈ ಮೂಲಕ ರಾಣಿ ಚನ್ನಮ್ಮರ ವಂಶಜರನ್ನು ಜಿಲ್ಲಾಡಳಿತ ಅವಮಾನಿಸಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆ ಸೇರಿದಂತೆ ಕಿತ್ತೂರು ರಾಣಿ ಚೆನ್ನಮ್ಮ ಅವರ 11 ತಲೆಮಾರಿನ ವಂಶದರಿದ್ದೇವೆ ಆಮಂತ್ರಣ ನೀಡದೆ ಇರುವ ಬಗ್ಗೆ ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರ ಗಮನಕ್ಕೆ ತರಲಾಗಿದೆ.
ಪ್ರತಿವರ್ಷದಂತೆ ಹೆಸರು ಕೊಟ್ಟು ಮನವಿ ಕೊಟ್ಟು ಬಂದಿದ್ದೇವೆ. ಆದರೆ ಇದುವರೆಗೆ ಆಮಂತ್ರಣ ಬಂದಿಲ್ಲ. ಇನ್ನು ಮುಂದೆ ಜಿಲ್ಲಾಡಳಿತ ಆಮಂತ್ರಣ ಕೊಟ್ಟರೂ ನಾವು ಯಾರು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲ್ಲ. ಸಮಾರೋಪ ನಡೆಯುವ ಅಕ್ಟೋಬರ್ 25ರಂದು ಕಿತ್ತೂರು ಉತ್ಸವಕ್ಕೆ ಹೋಗದೆ ಉತ್ಸವ ಬಹಿಷ್ಕರಿಸಲು ಮುಂದಾಗಿದ್ದೇವೆ. ದಸರಾ ಉತ್ಸವದಲ್ಲಿ ಮೈಸೂರು ಒಡೆಯರಿಗೆ ಸಿಗುವ ಎಳ್ಳಷ್ಟು ಗೌರವ ನಮಗೆ ಗೌರವ ಸಿಗುತ್ತಿಲ್ಲ. ಇದು ನಮಗಷ್ಟೇ ಅಲ್ಲ. ರಾಜ್ಯದ 6 ಕೋಟಿ ಜನರಿಗೆ ಮಾಡಿರುವ ಅಪಮಾನ ಎಂದು ಅವರು ಬೇಸರ ವ್ಯಕ್ತಪಡಿಸಿದರು.