ಮಂಗಳೂರು : ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಈಗ ಹೊಸ ಯೋಜನೆ ಕೈಗೆತ್ತಿಕೊಂಡಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಡ ಮಕ್ಕಳ ಆರೋಗ್ಯ, ನೈರ್ಮಲ್ಯ ಮತ್ತು ಹಕ್ಕು ಸಂರಕ್ಷಣೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ‘ಶೌಚಾಲಯ’ಗಳನ್ನು ಸ್ವಯಂಪ್ರೇರಿತ ಶ್ರಮದಾನದ ಮೂಲಕ ಮತ್ತು ದುರಸ್ತಿಗೊಳಿಸಿ ನವೀಕರಿಸಿ ‘ಸ್ವಚ್ಛಾಲಯ’ಗಳನ್ನಾಗಿ ಪರಿವರ್ತಿಸುವ ವಿನೂತನ ಪರಿಕಲ್ಪನೆ ಇದಾಗಿದೆ. ಯೋಜನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸುಮಾರು 1,000ಕ್ಕೂ ಹೆಚ್ಚಿನ ಸರಕಾರಿ ಶಾಲೆಗಳ ಶೌಚಾಲಯಗಳನ್ನು ‘ಸ್ವಚ್ಛಾಲಯ’ಗಳನ್ನಾಗಿ ಪರಿವರ್ತಿಸುವ ಮೂಲಕ ಬಡಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ನೆರವಾಗುವುದು ಈ ಅಭಿಯಾನದ ಉದ್ದೇಶ. ಯೋಜನೆಯಡಿ ಶೌಚಾಲಯದ ಕಟ್ಟಡಕ್ಕೆ ಬಣ್ಣ ಬಳಿಯುವುದು, ಛಾವಣಿ, ನೆಲ ದುರಸ್ತಿ, ಕಮೋಡ್ಗಳ ಸ್ವತ್ಛತೆ, ನೀರಿನ ವ್ಯವಸ್ಥೆ ಸರಿಪಡಿಸುವುದು ಮೊದಲಾದ ಕೆಲಸಗಳನ್ನು ಕೈಗೊಳ್ಳಲಾಗುವುದು.