ಬೆಳಗಾವಿ : 2024 ರಲ್ಲಿ ಕಿತ್ತೂರಿನಲ್ಲಿ ಬ್ರಿಟಿಷರ ವಿರುದ್ಧ ರಾಣಿ ಚನ್ನಮ್ಮನ ಜಯದ 200ನೇ ವರ್ಷಾಚರಣೆಯನ್ನು ರಾಜ್ಯ ಸರಕಾರ ಈ ವರ್ಷ ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಿದೆ. ಐತಿಹಾಸಿಕ ಕೋಟೆಯಲ್ಲಿ ಕಿತ್ತೂರು ಉತ್ಸವಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ.
ಎಲ್ಲಾ ಭಾರತೀಯರು ದಿನಾಂಕ ಅಕ್ಟೋಬರ್ 23, 1824 ನೆನಪಿಡುವ ಅಗತ್ಯವಿದೆ. ಇದು ರಾಣಿ ಚನ್ನಮ್ಮನ ಸೈನ್ಯ ಕಿತ್ತೂರು ಕೋಟೆಯ ಹೊರಗೆ ಆಕ್ರಮಣಕಾರಿ ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಸೋಲಿಸಿದ ದಿನವಾಗಿತ್ತು. ಇದನ್ನು ಆಚರಿಸಲು ನಾವು ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
90 ರ ದಶಕದಲ್ಲಿ ಕಿತ್ತೂರಿನಲ್ಲಿ ಕಿತ್ತೂರು ವಿಜಯೋತ್ಸವದ ಸಂಸ್ಮರಣೆಯಲ್ಲಿ ಕಿತ್ತೂರು ಉತ್ಸವ ಆರಂಭವಾಯಿತು. ಅಂದಿನಿಂದ ರಾಜ್ಯ ಸರಕಾರ ಪ್ರತಿ ವರ್ಷ ಅಕ್ಟೋಬರ್ 23 ರಂದು ಕಿತ್ತೂರು ಉತ್ಸವವನ್ನು ಮೂರು ದಿನಗಳ ಕಾಲ ಅತ್ಯಂತ ವೈಭವದಿಂದ ನಡೆಸಿಕೊಂಡು ಬರುತ್ತಿದೆ.
ಮೂರು ದಿನಗಳ ಕಾಲ ಇಡೀ ಕಿತ್ತೂರು ಪರಿಸರದ ಜನ ಕಿತ್ತೆದ್ದು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿ ವರ್ಷವೂ ಕಿತ್ತೂರು ಜನರಿಗೆ ಉತ್ಸವದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿ ಅನುಭವಿಸುವುದೇ ಒಂದು ಹೊಸ ಅನುಭವ. ಕಿತ್ತೂರು ಉತ್ಸವದ ಕಾಲಕ್ಕೆ ಮಲೆನಾಡ ಸೆರಗಿನಲ್ಲಿ ಇರುವ ಕಿತ್ತೂರಿನಲ್ಲಿ ಸದಾ ಕಾಲವೂ ಜೋರು ಮಳೆ. ಆದರೆ, ಮಳೆಯ ಅಬ್ಬರಕ್ಕೆ ಜನ ಬೆದರದೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುವುದು ವಿಶೇಷವಾಗಿದೆ. ದಶಕಗಳ ಹಿಂದೆ ಕಿತ್ತೂರು ಉತ್ಸವ ಕಾಲಕ್ಕೆ ಕೋಟೆ ಆವರಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಮಳೆ ಬಂದರೆ ಇಡೀ ಕಾರ್ಯಕ್ರಮವೇ ಅಲ್ಲೋಲಕಲ್ಲೋಲವಾಗುತ್ತಿತ್ತು.. ಇಡೀ ಪರಿಸರವೇ ಮಳೆಯ ನೀರಿನಿಂದ ರಾಡಿಯಾಗುತ್ತಿರುವುದು ಸರ್ವೇಸಾಮಾನ್ಯ. ಆದರೆ, ಇದೀಗ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟು ರೀತಿಯಲ್ಲಿ ನಡೆಸಲು ಆಸಕ್ತಿ ತೋರಿಸುವುದು ಪ್ರಸಂಶನೀಯ. ಜನರು ಸಹ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಕಿತ್ತೂರು ಉತ್ಸವ ಇನ್ನಷ್ಟು ವೈಭವವಾಗಿ ನಡೆಯಲು ಕಾರಣೀಕರ್ತರಾಗಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರಿಗೆ ಅಗ್ರಸ್ಥಾನವಿದೆ. ಸೂರ್ಯ ಮುಳುಗದ ನಾಡು ಎಂಬ ಜಗತ್ತಿನ ಅಗ್ರಗಣ್ಯ ಬ್ರಿಟಿಷ್ ಸಾಮ್ರಾಜ್ಯವನ್ನೇ ಎದುರು ಹಾಕಿಕೊಂಡ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಧೈರ್ಯ ಹಾಗೂ ಸಾಹಸಗಳು ಎಂಥವರನ್ನು ನಿಬ್ಬೆರಗುಗೊಳಿಸುತ್ತದೆ. ಅಷ್ಟೊಂದು ರೀತಿಯಲ್ಲಿ ಅವರ ಹೋರಾಟ ಇಂದಿನ ಯುವಜನತೆಗೆ ಉತ್ಸಾಹ ಹಾಗೂ ರೋಮಾಂಚನ ಉಂಟುಮಾಡುತ್ತದೆ.
ವೀರರಾಣಿ ಕಿತ್ತೂರು ಚನ್ನಮ್ಮ ಅವರು ಬೆಳಗಾವಿಗೆ ಸನಿಹದಲ್ಲಿರುವ ಕಾಕತಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇಂದಿಗೂ ಕಾಕತಿ ಗ್ರಾಮದಲ್ಲಿ ಹಳೆಯ ಕೋಟೆ ಶಿಥಿಲವಾದ ಸ್ಥಿತಿಯಲ್ಲಿ ಇರುವುದನ್ನು ಕಾಣಬಹುದು. ಜಿಲ್ಲಾಡಳಿತ ಪ್ರತಿವರ್ಷ ಕಿತ್ತೂರು ವಿಜಯೋತ್ಸವದ ದಿನವಾದ ಅಕ್ಟೋಬರ್ 23 ರಂದು ಕಾಕತಿ ಗ್ರಾಮದಲ್ಲಿ ಕಿತ್ತೂರು ಉತ್ಸವದ ನೆನಪಿನಲ್ಲಿ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ. ಈ ಮೂಲಕ ಚನ್ನಮ್ಮಳ ಅವರ ತವರೂರಿನಲ್ಲಿ ಅವರ ನೆನಪನ್ನು ಚಿರಸ್ಥಾಯಿಯಾಗಿಸುವ ಕೆಲಸವನ್ನು ಸಣ್ಣ ಮಟ್ಟದಲ್ಲಿ ಮಾಡುತ್ತಿದೆ. ವೀರರಾಣಿ ಕಿತ್ತೂರು ಚನ್ನಮ್ಮ ಅವರು ಅಕ್ಟೋಬರ್ 23 ರಂದು ಬ್ರಿಟಿಷರ ವಿರುದ್ಧ ಸಾಧಿಸಿದ ಬಹುದೊಡ್ಡ ಜಯ ಭಾರತೀಯ ಇತಿಹಾಸದಲ್ಲೇ ಅಚ್ಚಳಿಯದ ಕ್ಷಣವಾಗಿ ದಾಖಲಾಗಿದೆ. ಇಂತಹ ವೀರರಾಣಿ ಚನ್ನಮ್ಮ ಅವರು ನವೆಂಬರ್ 13ರಂದು ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಲಿಂಗಾಯತ ಸಮುದಾಯಕ್ಕೆ ಸೇರಿದ ಅವರು ಅತ್ಯಂತ ಸಣ್ಣ ವಯಸ್ಸಿನಿಂದಲೇ ಕುದುರೆ ಸವಾರಿ, ಕತ್ತಿ ವರಸೆ, ಬಿಲ್ಲುಗಾರಿಕೆ ಮುಂತಾದ ತರಬೇತಿ ಪಡೆದು ನೈಪುಣ್ಯತೆ ಸಾಧಿಸಿದರು. ಜೊತೆಗೆ ಅಪ್ರತಿಮ ಧೈರ್ಯ ಮತ್ತು ಸಾಹಸದಿಂದ ಭವಿಷ್ಯದಲ್ಲಿ ಬ್ರಿಟಿಷ್ ಅಧಿಕಾರಿಗಳ ರುಂಡ ಚೆಂಡಾಡಿದ ಇತಿಹಾಸವಿದೆ. ತನ್ನ 15 ನೇ ವಯಸ್ಸಿನಲ್ಲೇ ದೇಸಾಯಿ ಮನೆತನದ ಮಲ್ಲಸರ್ಜ ಅವರನ್ನು ವಿವಾಹವಾದರು. 1824ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಸಶಸ್ತ್ರ ಪ್ರತಿರೋಧವನ್ನು ಮುನ್ನಡೆಸಿದರು. ತನ್ನ ಪ್ರಭುತ್ವದ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಮೊದಲ ದಂಗೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೋಲಿಸಿದರು ಆದರೆ ಎರಡನೇ ದಂಗೆಯಲ್ಲಿ ಯುದ್ಧ ಕೈದಿಯಾಗಿ ಬೈಲಹೊಂಗಲದಲ್ಲಿ ನಿಧನರಾದರು. ಬ್ರಿಟಿಷ್ ವಿರುದ್ಧ ಬಂಡಾಯ ಶಾಹಿಯಾಗಿ ಆಡಳಿತ ನಡೆಸಿದ ವೀರರಾಣಿ ಕಿತ್ತೂರು ಚನ್ನಮ್ಮ ಅವರು ಭಾರತದ ಕೆಲವೇ ಕೆಲವು ಅಪ್ರತಿಮ ಹೋರಾಟಗಾರರಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ. ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಬಂಡಾಯ ಪಡೆಗಳನ್ನು ಮುನ್ನಡೆಸಿದ ಮೊದಲ ಹಾಗೂ ಕೆಲವೇ ಕೆಲವು ಮಹಿಳಾ ಆಡಳಿತಗಾರರಲ್ಲಿ ಒಬ್ಬರಾಗಿ ರಾರಾಜಿಸಿರುವ ವೀರರಾಣಿ ಚನ್ನಮ್ಮ ಅವರು ಕರ್ನಾಟಕದಲ್ಲಿ ಜಾನಪದ ನಾಯಕಿಯಾಗಿ ಗುರುತಿಸಿಕೊಳ್ಳುತ್ತಾರೆ. ಲಾವಣಿಕಾರರು ಚನ್ನಮ್ಮ ಹಾಗೂ ಅವರ ಬಂಟ ಸಂಗೊಳ್ಳಿ ರಾಯಣ್ಣ ಅವರ ಹೋರಾಟವನ್ನು ತಮ್ಮ ಲಾವಣಿಗಳಲ್ಲಿ ಕಟ್ಟಿಕೊಟ್ಟು ಸ್ಪೂರ್ತಿ ನೀಡಿದ್ದಾರೆ. ಅವರು ಸ್ವಾತಂತ್ರ್ಯ ಚಳವಳಿಯ ಪ್ರಮುಖ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿ ಸ್ಥಾನ ಪಡೆದಿರುವುದು ಇಡೀ ಕನ್ನಡ ನಾಡಿನ ಜನತೆ ಹೆಮ್ಮೆಪಡುವ ಸಂಗತಿಯಾಗಿದೆ.
ಈಗ ಮತ್ತೊಂದು ಕಿತ್ತೂರು ವಿಜಯೋತ್ಸವ ಬಂದಿದೆ. ಉತ್ಸವ ಕೇವಲ ಆಯಾ ದಿನಕ್ಕೆ ಮಾತ್ರ ಸೀಮಿತವಾಗಿರದೆ ನಾಡು-ನುಡಿ ಹೋರಾಟ ಮನೋಭಾವ ಬೆಳೆಯುವಲ್ಲಿ ನಡೆದರೆ ಮಾತ್ರ ಉತ್ಸವ ಒಂದು ಅರ್ಥ ಪಡೆಯಬಹುದು. ಈ ನಿಟ್ಟಿನಲ್ಲಿ ಕಿತ್ತೂರು ಉತ್ಸವ ಮಾದರಿ ಉತ್ಸವವಾಗಿ ರಾಣಿ ಚನ್ನಮ್ಮ ಅವರ ಹೋರಾಟ ಸ್ಪೂರ್ತಿಯ ಸೆಲೆಯಾಗಿ ಗುರುತಿಸಿಕೊಳ್ಳಲಿ ಎನ್ನುವುದು ಎಲ್ಲರ ಒತ್ತಾಸೆಯಾಗಿದೆ.