ಪುತ್ತೂರು : ಬೆಂಗಳೂರು ಕಂಬಳ ವಿರುದ್ಧ ನ್ಯಾಯಾಲಯದ ಕದ ತಟ್ಟಿರುವ ಪೆಟಾ ಸಂಘಟನೆ ವಿರುದ್ಧ ಇದೀಗ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸಹ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿಂದೆ ನ್ಯಾಯಾಲಯ ಕಂಬಳ ವಿವಾದ ಕುರಿತು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜಿಲ್ಲೆಗಳಲ್ಲಿ ಕಂಬಳ ನಡೆಸಲು ಅನುಮತಿ ನೀಡಿತ್ತು. ಆದರೆ ಬೇರೆ ಕಡೆ ಕಂಬಳ ನಡೆಸುವುದು ಉಚಿತವಲ್ಲ ಎಂದು ಪೆಟಾ ಸಂಸ್ಥೆ ಇದೀಗ ತಕರಾರು ತೆಗೆದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದೆ. ಬೆಂಗಳೂರು ಕಂಬಳಕ್ಕೆ ಅವಕಾಶ ನೀಡಬಾರದು ಎಂದು ಪೆಟಾ ಸಂಘಟನೆ ಮನವಿ ಮಾಡಿದೆ. ಇದರ ವಿರುದ್ಧ ಕಂಬಳ ಪರವಾಗಿ ವೈಯಕ್ತಿಕ ನೆಲೆಯಲ್ಲಿ ನಾನು ಕಾನೂನು ಹೋರಾಟಕ್ಕೆ ಮುಂದಾಗಿದ್ದೇನೆ ಎಂದು ಬೆಂಗಳೂರು ಕಂಬಳ ಕೂಟದ ಗೌರವಾಧ್ಯಕ್ಷರು ಸಹ ಆಗಿರುವ ಅಶೋಕ್ ರೈ ಹೇಳಿದ್ದಾರೆ.

ಸಂಘಟನೆಯ ಅಧಿಕೃತ ಪ್ರತಿನಿಧಿ ಖುಷ್ಬೂ ಗುಪ್ತ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಪೆಟಾಪರ ವಕೀಲ ಧ್ಯಾನ್ ಚಿನ್ನಪ್ಪ ಮುಖ್ಯ ನ್ಯಾಯಮೂರ್ತಿ ಅಂಜಾರೀಯಾ ವಿಭಾಗಿಯ ಪೀಠಕ್ಕೆ ಮನವಿ ಮಾಡಿದರು. ವಿಚಾರಣೆಯನ್ನು ಮಂಗಳವಾರಕ್ಕೆ ನಿಗದಿಗೊಳಿಸಿತು. ಕಂಬಳ ಸ್ಪರ್ಧೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಗ್ರಾಮೀಣ ಭಾಗವನ್ನು ಹೊರತುಪಡಿಸಿ ಬೇರೆ ಎಲ್ಲೆಲ್ಲೂ ನಡೆಸಲು ಅವಕಾಶ ನೀಡಬಾರದು. ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ಕಾಯ್ದೆ 2017ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು ಕಂಬಳ ನಡೆಸಲು ಅವಕಾಶ ನೀಡಬಾರದು ಎಂದು ಕೋರಿ ಪೆಟಾ ಸಂಸ್ಥೆಯ ವತಿಯಿಂದ ರಾಜ್ಯ ಹೈಕೋರ್ಟ್‍ನಲ್ಲಿ ರಿಟ್ ಸಲ್ಲಿಸಲಾಗಿದ್ದು, ಇದರ ವಿರುದ್ಧ ನಾನು ನನ್ನ ವೈಯಕ್ತಿಕ ನೆಲೆಯಲ್ಲಿ ಹೈಕೋರ್ಟ್‍ನಲ್ಲಿ ಕಾನೂನು ಹೋರಾಟ ಮಾಡಲಿದ್ದೇನೆ ಎಂದು ಪುತ್ತೂರು ಶಾಸಕರೂ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಂಬಳದ ರೂವಾರಿಯೂ ಆದ ಅಶೋಕ್ ರೈ ಹೇಳಿದ್ದಾರೆ.

ಮಂಗಳವಾರ ಪುತ್ತೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪೆಟಾ ಸಂಸ್ಥೆಯವರು ಹೈಕೋರ್ಟ್ ಮೆಟ್ಟಿಲೇರಿದ್ದು ಗಮನಕ್ಕೆ ಬಂದಿದೆ. ಪೆಟಾ ರಿಟ್ ಸಲ್ಲಿಕೆ ಬೆನ್ನಲ್ಲೇ ನಾನು ಕೂಡಾ ನನ್ನ ವೈಯಕ್ತಿಕ ನೆಲೆಯಲ್ಲಿ ವಕೀಲರ ಮೂಲಕ ರಿಟ್ ಪಿಟಿಶನ್ ಹಾಕಿದ್ದೇನೆ. ಇದರಲ್ಲಿ ನನ್ನನ್ನೂ ಒಂದು ಪಾರ್ಟಿ ಮಾಡಬೇಕೆಂದು ಕೋರಿದ್ದೇನೆ. ಸರಕಾರಿ ವಕೀಲರಿಗೆ ನ್ಯಾಯಾಂಗ ಹೋರಾಟದಲ್ಲಿ ನೆರವಾಗಲು ನಾನು ವಕೀಲರನ್ನು ನೇಮಿಸಿ ವಾದ ಮಂಡಿಸಲಿದ್ದೇನೆ ಎಂದರು.

ಬೆಂಗಳೂರಿಗೆ ಕಂಬಳ ಕೋಣಗಳನ್ನು ಕೊಂಡೊಯ್ಯುವಾಗ ಹೊಡೆಯಲಾಗುತ್ತದೆ. ವಾಹನಗಳಲ್ಲಿ ತುಂಬಿಸಿಕೊಂಡು ಹೋಗುತ್ತಾರೆ. ಕೋಣಗಳಿಗೆ ಹಿಂಸೆ ಉಂಟು ಮಾಡಲಾಗುತ್ತದೆ. ಆದ್ದರಿಂದ ಬೆಂಗಳೂರು ಕಂಬಳಕ್ಕೆ ಅವಕಾಶ ನೀಡಬಾರದು ಎಂದು ಪೆಟಾದವರು ಕೋರಿದ್ದಾರೆ. ಹಿಂದೆ ಕಂಬಳದ ಪರ ಸರಕಾರ ಸುಗ್ರಿವಾಜ್ಞೆ ಹೊರಡಿಸುವ ಸಂದರ್ಭ ಸಲ್ಲಿಸಲಾದ ಅಫಿದಾವತ್‍ನಲ್ಲಿ ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ ಎಂದು ಬರೆಯಲಾಗಿತ್ತು. ಇದೇ ಅಂಶವನ್ನು ಇಟ್ಟುಕೊಂಡು ಪೆಟಾದವರು ದ.ಕ., ಉಡುಪಿ ಹೊರತಾದ ಬೇರೆ ಕಡೆ ಅವಕಾಶ ನೀಡಬಾರದು ಎಂದು ವಾದಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿಗಳಲ್ಲಿ ಕಂಬಳ ನಡೆಸಲಾಗುತ್ತಿದೆ ಎಂದು ಅಫಿದಾವಿತ್‍ನಲ್ಲಿ ತಿಳಿಸಿದ್ದು ನಿಜ. ಹಾಗೆಂದು ಬೇರೆಲ್ಲೂ ಕಂಬಳ ನಡೆಸುವುದಿಲ್ಲ ಎಂದು ತಿಳಿಸಿಲ್ಲ. ಹೀಗಾಗಿ ಪೆಟಾದವರ ವಾದದ ಮುಂದೆ ನಾವು ಜಯ ಗಳಿಸುತ್ತೇವೆ ಎಂಬ ವಿಶ್ವಾಸವಿದೆ.

ಕಂಬಳದ ಪರ ಸುಗ್ರಿವಾಜ್ಞೆ ಹೊರಡಿಸಿದ್ದು, ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ ಕಂಬಳದ ಪರ ತೀರ್ಪು ನೀಡಿದ್ದು ಇದೆಲ್ಲ ಚಾರಿತ್ರಿಕ ವಿದ್ಯಮಾನ. ಇದಕ್ಕಿಂತ ಮಿಗಿಲಾದ ತೀರ್ಪು ಯಾವುದೂ ಇಲ್ಲ. ಇಡೀ ದೇಶದಲ್ಲಿ ಈ ಮಾದರಿಯ ತೀರ್ಪು ಕಂಬಳಕ್ಕೆ ಬಿಟ್ಟರೆ ಬೇರಾದ ಜನಪದ ಕ್ರೀಡೆಗೂ ಬಂದಿಲ್ಲ. ಹೀಗಿರುವಾಗ ಕಂಬಳದ ವಿಚಾರದಲ್ಲಿ ಯಾವುದೇ ಆತಂಕವಿಲ್ಲ ಎಂದು ತಿಳಿಸಿದರು.

ಕಳೆದ ವರ್ಷ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ನಡೆಸಿದ್ದೇವೆ. ಅಲ್ಲಿ ಕಂಬಳ ನಡೆಸುವುದು ಕಷ್ಟ ನಿಜ. ಪೊಲೀಸ್ ಇಲಾಖೆಯೂ ಸೇರಿದಂತೆ ನಾನಾ ಇಲಾಖೆಗಳಿಂದ ಅನುಮತಿ ಬೇಕು. ಭಾರೀ ಮುಂಜಾಗರೂಕತೆ ಬೇಕು. ಈ ಬಾರಿಯೂ ದಿನ ನಿಗದಿ ಮಾಡಿ ಕಂಬಳ ನಡೆಸಲು ಆಸಕ್ತರಿರುವವರು ಮುಂದೆ ಬರಲಿ ಎಂದು ಕಾಯುತ್ತಿದ್ದೇವೆ. ಉಳಿದಂತೆ ಯೋಚಿಸುತ್ತೇವೆ ಎಂದರು.