ಬೆಂಗಳೂರು : ಕೊನೆಗೂ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರ ಸುಪುತ್ರ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಪಕ್ಷ ಗುರುವಾರ ಘೋಷಣೆ ಮಾಡಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಒಮ್ಮತದ ಎನ್ ಡಿ ಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಇದೀಗ ಮೂರನೇ ಬಾರಿಗೆ ಚುನಾವಣಾ ರಣಕಣಕ್ಕೆ ಇಳಿದಿದ್ದಾರೆ.

ಹೆಸರು ಘೋಷಣೆ ಮಾಡಿದ ದೊಡ್ಡ ಗೌಡ್ರು :
ಗುರುವಾರ ನಡೆದ ಸಭೆಯ ನಂತರ ಜೆ.ಪಿ. ಭವನದಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್. ಡಿ.ದೇವೇಗೌಡ ಅವರು ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಘೋಷಣೆ ಮಾಡಿದರು. ಕಾರ್ಯಕರ್ತರ ಒತ್ತಾಯದಂತೆ ನಿಖಿಲ್ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದೇವೆ. ಶುಕ್ರವಾರ ನಾಮಪತ್ರ ಸಲ್ಲಿಸುತ್ತಾರೆ. ಚನ್ನಪಟ್ಟಣದಲ್ಲೇ ಇದ್ದು ಚುನಾವಣಾ ಪ್ರಚಾರ ಮಾಡುವೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಮೈತ್ರಿ ಧರ್ಮದ ಪರ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಮಂಡ್ಯ ಮತಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ತೆರವಾಗಿದ್ದ ಚನ್ನಪಟ್ಟಣ ವಿಧಾನಸಭೆಗೆ ಇದೀಗ ಉಪಚುನಾವಣೆ ನಡೆಯುತ್ತಿದೆ‌. ನಿಖಿಲ್ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ನಡುವೆ ಭಾರಿ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಒಟ್ಟಾರೆ ಈ ಕ್ಷೇತ್ರ ರಾಜ್ಯದಲ್ಲಿ ಗಮನ ಸೆಳೆಯಲಿದೆ. ಆಡಳಿತರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವ ಎಲ್ಲಾ ಸಾಧ್ಯತೆ ಇದ್ದು, ಕಾಂಗ್ರೆಸ್ ಈಗಾಗಲೇ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೆಸರನ್ನು ಘೋಷಣೆ ಮಾಡಿ ಅವರು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ನಟರಿಬ್ಬರ ನಡುವೆ ನೇರಾನೇರ ಸ್ಪರ್ಧೆ : ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಇದೀಗ ಸ್ಪರ್ಧಾಳುಗಳು ಯಾರು ಎನ್ನುವುದು ಬಹುತೇಕ ಖಚಿತವಾದಂತಿದೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಸ್ಪರ್ಧೆ ನಡೆಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷಗಳ ಮೂಲಕ ತಮ್ಮ ರಾಜಕೀಯ ಏಳು ಬೀಳುಗಳನ್ನು ಕಂಡಿರುವ ಯೋಗೇಶ್ವರ್ ಕನ್ನಡದ ಖ್ಯಾತ ಚಲನಚಿತ್ರ ನಟ. ಉತ್ತರ ದ್ರವದಿಂ ದಕ್ಷಿಣ ಧೃವಕೂ, ಸೈನಿಕ, ಬದ್ರಿ, ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ, ಪಾಂಚಾಲಿ, ಶಿವಪ್ಪ ನಾಯಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ ಜನಪ್ರೀತಿ ಗಳಿಸಿದ್ದರು. ಅತ್ಯಂತ ವರ್ಚಸ್ಸು ಹೊಂದಿರುವ ರಾಜಕಾರಣಿಯಾಗಿ ಅವರು ಜನಮಾನಸದಲ್ಲಿ ಗುರೂಜಿಸಿಕೊಂಡಿದ್ದಾರೆ. ಜೊತೆಗೆ ಯಾವುದೇ ಪಕ್ಷದ ನೆರವು ಇಲ್ಲದೆ ಸ್ವಂತ ಬಲದಿಂದ ಗೆಲ್ಲುವ ಪ್ರಭಾವವನ್ನು ಅವರು ಹೊಂದಿದ್ದಾರೆ.

ಅವರಿಗೆ ಎದುರಾಳಿಯಾಗಿ ಇದೀಗ ಎನ್ ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ರಣಕಣಕ್ಕೆ ಮತ್ತಷ್ಡು ಮೆರಗು ನೀಡಿದಂತಿದೆ. ಕನ್ನಡ ಮತ್ತು ತೆಲುಗು ಚಲನಚಿತ್ರದಲ್ಲಿ ನಾಯಕ ನಟನಾಗಿ ನಟಿಸಿರುವ ನಿಖಿಲ್ ಕುಮಾರಸ್ವಾಮಿ ಅವರು ಈಗ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರು. ಜಾಗ್ವಾರ್ ಎಂಬ ತೆಲುಗು, ಸೀತಾರಾಮ ಕಲ್ಯಾಣ, ಕುರುಕ್ಷೇತದರ, ಯದುವೀರ ಎಂಬ ಕನ್ನಡ ಚಲನಚಿತ್ರದಲ್ಲೂ ನಟಿಸಿದ್ದಾರೆ. ಈ ಹಿಂದೆ ಮಂಡ್ಯ ಲೋಕಸಭಾ ಮತ್ತು ರಾಮನಗರ ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದರು. ಇದೀಗ ಬಿಜೆಪಿ ಬೆಂಬಲ ಪಡೆದುಕೊಂಡಿರುವ ಅವರು ಗೆದ್ದೇ ಗೆಲ್ಲುವ ತವಕದಲ್ಲಿದ್ದಾರೆ.