ಬೆಳಗಾವಿ : ಅಥಣಿಯಲ್ಲಿ ನಡೆದಿರುವ ಇಬ್ಬರು ಮಕ್ಕಳ ಅಪಹರಣ ಪ್ರಕರಣ ಹಣಕಾಸಿನ ವ್ಯವಹಾರಕ್ಕಾಗಿ ನಡೆದಿದ್ದು, ಈ ಪ್ರಕರಣ ಅಪಹರಣಕಾರರು ಪೊಲೀಸರ ಮೇಲೆ ಹಲ್ಲೆ‌ ಮಾಡಿದ ಹಿನ್ನೆಲೆಯಲ್ಲಿ ಅವರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಮಕ್ಕಳನ್ನು ಪಾಲಕರ ವಶಕ್ಕೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದರು.

ಮಕ್ಕಳ ಅಪಹರಣ ಪ್ರಕರಣದಲ್ಲಿ ಅಪಹರಣಕಾರರಿಂದ ಹಲ್ಲೆಗೆ ಒಳಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಪೊಲೀಸರ ಯೋಗ ಕ್ಷೇಮ ವಿಚಾರಿಸಿದ ಬಳಿಕ ಶುಕ್ರವಾರ ಮಾಧ್ಯಮದವರ ಜೊತೆಗೆ ಮಾತನಾಡಿದ ಗುಳೇದ ಅವರು, ಅಥಣಿಯಲ್ಲಿ ನಡೆದಿರುವ ಇಬ್ಬರು ಮಕ್ಕಳ ಅಪಹರಣ ಪ್ರಕರಣದಲ್ಲಿ ಮಕ್ಕಳ ತಂದೆಯ ಜೊತೆಗಿನ ಹಣಕಾಸಿನ ವ್ಯವಹಾರ ಮತ್ತು ತಂದೆಗೆ ಕರೆ ಮಾಡಿ ಮಕ್ಕಳ ಬಿಡುಗಡೆಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಮೊನ್ನೆ ರಾತ್ರಿ 4 ಹಾಗೂ 2 ವರ್ಷದ ಇಬ್ಬರು ಮಕ್ಕಳನ್ನು ಅಪಹರಣಕಾರರಿಬ್ಬರು ಕಾರಿನಲ್ಲಿ ಬಂದು ಅಪಹರಣ ಮಾಡಿದ್ದರು. ಅಪಹರಣ ಮಾಡಿದ ಮೂವರನ್ನು ಬಂಧಿಸಲು ಅಥಣಿ ಮತ್ತು ಐಗಳಿ ಪೊಲೀಸರು ಬೆನ್ನಟ್ಟಿದಾಗ ಪೊಲೀಸರ ಮೇಲೆ ಈ ಅಪಹರಣಕಾರರು ಹಲ್ಲೆ ಮಾಡಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಬಳಿಕ ಆರೋಪಿತರನ್ನು ಬಂಧಿಸಲು ಅವರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅದರಲ್ಲಿ ಇಬ್ಬರು ಅಪಹರಣಕಾರರು ಸಹ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಜಮೀರ್ ಢಾಂಗೆ, ರಮೇಶ ಹಾದಿಮನಿ ಈ ಇಬ್ಬರು ಪೊಲೀಸರನ್ನು ಆಸ್ಪತ್ರೆಗೆ ದಾಖಲು‌ ಮಾಡಲಾಗಿದೆ ಎಂದು ಎಸ್ ಪಿ ಭೀಮಾಶಂಕರ ಗುಳೇದ ತಿಳಿಸಿದರು.