ಮುಂಬೈ: ಭಾರತದ ರಾಷ್ಟ್ರೀಯ ಐಕಾನ್ ಕೈಗಾರಿಕೋದ್ಯಮಿ ರತನ್ ಟಾಟಾ ತಮ್ಮ ಉಯಿಲಿನಲ್ಲಿ ತಮ್ಮ ಪ್ರೀತಿಯ ನಾಯಿ ಟಿಟೊಗೂ ಪಾಲು ನೀಡಿದ್ದಾರೆ…!ಲೋಕೋಪಕಾರಿ ರತನ್ ಟಾಟಾ ಅವರ ಆಸ್ತಿ ಸುಮಾರು 10,000 ಕೋಟಿ ಎಂದು ಅಂದಾಜಿಸಲಾಗಿದೆ, ಅವರು ಹೆಚ್ಚಿನ ಪಾಲನ್ನು ಟಾಟಾ ಫೌಂಡೇಶನ್ಗೆ ನೀಡಿದ್ದರೆ, ತಮ್ಮ ಸಹೋದರ-ಸಹೋದರಿಯರಿಗೆ, ನಿಷ್ಠಾವಂತ ಮನೆಯ ಸಿಬ್ಬಂದಿಗೆ ಪಾಲನ್ನು ನೀಡಿದ್ದಾರೆ. ಜೊತೆಗೆ ತಮ್ಮ ಬಟ್ಲರ್ , ಅಡಿಗೆಯಾತ, ಶಂತನು ನಾಯ್ಡು ಮತ್ತು ತಮ್ಮ ಪ್ರೀತಿಯ ಜರ್ಮನ್ ಶೆಫರ್ಡ್ ನಾಯಿ ಟಿಟೊಗೂ ಸಹ ಪಾಲು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ರತನ್ ಟಾಟಾ ಅವರು ತಮ್ಮ ಉಯಿಲಿನಲ್ಲಿ ನಾಯಿ ಟಿಟೊ “ಆರೈಕೆ” ಗಾಗಿ ಹಣವನ್ನು ನಿಗದಿಪಡಿಸಿದ್ದು, ದೀರ್ಘಕಾಲದಿಂದ ತಮ್ಮ ಅಡುಗೆಯವರಾಗಿದ್ದ ರಾಜನ್ ಶಾ ಅವರಿಗೆ ಇದನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿದ್ದಾರೆ. ಅವರ ಬಟ್ಲರ್ ಸುಬ್ಬಯ್ಯ ಮತ್ತು ಕಾರ್ಯನಿರ್ವಾಹಕ ಸಹಾಯಕ ಶಾಂತನು ನಾಯ್ಡು ಅವರಿಗೂ ಪಾಲನ್ನು ಹಂಚಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.
ಟಾಟಾ ಗ್ರೂಪ್ ಕಂಪನಿಗಳ ಮೂಲ ಕಂಪನಿಯಾದ ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಅಕ್ಟೋಬರ್ 9 ರಂದು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, “ಅವರು ಟಾಟಾ ಫೌಂಡೇಶನ್, ಸಹೋದರ ಜಿಮ್ಮಿ ಟಾಟಾ, ಮಲ-ಸಹೋದರಿಯರಾದ ಶಿರೀನ್ ಮತ್ತು ಡೀನಾ ಜೀಜಾಭೋಯ್, ಮನೆ ಸಿಬ್ಬಂದಿ ಮತ್ತು ಇತರರಿಗೆ ಆಸ್ತಿಯನ್ನು ಉಯಿಲು ಮಾಡಿದ್ದಾರೆ”.
ಟಾಟಾ ಅವರ ಆಸ್ತಿಗಳಲ್ಲಿ ಅಲಿಬಾಗ್ನಲ್ಲಿ 2,000 ಚದರ ಅಡಿ ಬೀಚ್ ಬಂಗಲೆ, ಮುಂಬೈನ ಜುಹು ತಾರಾ ರಸ್ತೆಯಲ್ಲಿರುವ ಎರಡು ಅಂತಸ್ತಿನ ಮನೆ ಸೇರಿವೆ. ಅವರ ಸ್ಥಿರ ಠೇವಣಿಗಳು 350 ಕೋಟಿ ರೂಪಾಯಿಗಳನ್ನು ಮೀರಿದೆ ಮತ್ತು ಟಾಟಾ ಸಮೂಹದ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್ನಲ್ಲಿ 0.83% ಪಾಲನ್ನು ಹೊಂದಿದೆ ಎಂದು ವರದಿ ಹೇಳಿದೆ.ಟಾಟಾ ಸನ್ಸ್ನಲ್ಲಿನ ಅವರ ಪಾಲ(ಶೇರ್)ನ್ನು ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ (ಆರ್ಟಿಇಎಫ್) ಗೆ ವರ್ಗಾಯಿಸಲಾಗುತ್ತದೆ. ಟಾಟಾದ ವಿವಿಧ ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ಟಾಟಾ ಸೆಂಟ್ರಲ್ ಆರ್ಕೈವ್ಸ್ಗೆ ನೀಡಲಾಗುತ್ತದೆ. ಇದು ಮುಂದಿನ ಪೀಳಿಗೆಗೆ ಅವರ ಪರಂಪರೆಯನ್ನು ಸಂರಕ್ಷಿಸುವುದನ್ನು ಖಚಿತಪಡಿಸುತ್ತದೆ.
ಅವರ ಬಟ್ಲರ್ ಸುಬ್ಬಯ್ಯನವರ ಬಗ್ಗೆ ಹೇಳುವುದಾದರೆ, ಅವರು ಟಾಟಾ ಅವರೊಂದಿಗೆ ಮೂರು ದಶಕಗಳ ಕಾಲ ಕೆಲಸ ಮಾಡಿದರು ಮತ್ತು ಟಾಟಾ ಅವರ ಹೃದಯಕ್ಕೆ ಹತ್ತಿರವಾಗಿದ್ದರು. ಟಾಟಾ ಅವರು ತಮ್ಮ ಅಡುಗೆಯವರಾದ ರಾಜನ್ ಶಾ ಮತ್ತು ಬಟ್ಲರ್ ಸುಬ್ಬಯ್ಯ ಅವರೊಂದಿಗೆ ವಿದೇಶ ಪ್ರವಾಸಕ್ಕೆ ಹೋದಾಗ ಅವರಿಬ್ಬರಿಗೂ ಡಿಸೈನರ್ ಬಟ್ಟೆಗಳನ್ನು ಖರೀದಿಸುತ್ತಿದ್ದರು.
ರತನ್ ಟಾಟಾ ಅವರು ತಮ್ಮ ಕಾರ್ಯನಿರ್ವಾಹಕ ಸಹಾಯಕ, ಶಾಂತನು ನಾಯ್ಡು ಅವರ ಒಡನಾಟದ ಉದ್ಯಮವಾದ ಗುಡ್ಫೆಲೋಸ್ನಲ್ಲಿ ಹೂಡಿಕೆ ಮಾಡಿದ್ದರು. ಅವರ ಉಯಿಲಿನಲ್ಲಿ, ಟಾಟಾ ಅವರು ಗುಡ್ಫೆಲೋಸ್ನಲ್ಲಿನ ತಮ್ಮ ಪಾಲನ್ನು ಅದಕ್ಕೆ ನೀಡಿದ್ದಾರೆ ಮತ್ತು ನಾಯ್ಡು ಅವರು ವಿದೇಶದಲ್ಲಿ ಅಧ್ಯಯನಕ್ಕಾಗಿ ತೆಗೆದುಕೊಂಡ ಸಾಲವನ್ನು ಮನ್ನಾ ಮಾಡಿದ್ದಾರೆ.ನಾಯಿ ಟಿಟೊಗೆ ಸಂಬಂಧಿಸಿದಂತೆ, ಆರು ವರ್ಷಗಳ ಹಿಂದೆ ರತನ್ ಟಾಟಾ ಅವರ ಬಳಿ ಇದ್ದ ಅದೇ ಹೆಸರಿನ ಸಾಕುಪ್ರಾಣಿ ಸತ್ತ ನಂತರ ಜರ್ಮನ್ ಶೆಫರ್ಡ್ ಅನ್ನು ದತ್ತು ಪಡೆಯಲಾಗಿತ್ತು. ರತನ್ ಟಾಟಾ ಅವರ ನಾಯಿಗಳ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿದೆ.
ಜುಲೈ 2023 ರಲ್ಲಿ, ಟಾಟಾ ಮುಂಬೈನ ಮಹಾಲಕ್ಷ್ಮಿಯಲ್ಲಿ ಭಾರತದ ಮೊದಲ ಸಣ್ಣ ಪ್ರಾಣಿ ಆಸ್ಪತ್ರೆ (first Small Animal Hospital)ಯನ್ನು ತೆರೆದರು.. ಇದು ಐಸಿಯುಗಳು, ಎಚ್ಡಿಯುಗಳು, ಸಿಟಿ ಸ್ಕ್ಯಾನ್ಗಳು, ಎಕ್ಸ್-ರೇಗಳು ಮತ್ತು ಎಂಆರ್ಐಗಳನ್ನು ಹೊಂದಿದೆ. ಇದು ಸಾಕುಪ್ರಾಣಿಗಳಿಗೆ ಹಲವಾರು ರೀತಿಯ ಚಿಕಿತ್ಸೆಯನ್ನು ನೀಡುತ್ತದೆ.2018 ರಲ್ಲಿ ಎರಡು ಸಾಕು ನಾಯಿಗಳಲ್ಲಿ ಒಂದು ಅಸ್ವಸ್ಥವಾಗಿದ್ದ ಕಾರಣಕ್ಕೆ ಅವರು ʼಜೀವಮಾನದ ಲೋಕೋಪಕಾರʼಕ್ಕಾಗಿ ತಮಗೆ ನೀಡಲಾಗುತ್ತಿದ್ದ ಪ್ರಿನ್ಸ್ ಚಾರ್ಲ್ಸ್ ಪ್ರಶಸ್ತಿ ಸಮಾರಂಭಕ್ಕೆ ಹೋಗಿರಲಿಲ್ಲ.