ನವದೆಹಲಿ : ಸಂಬಳಕ್ಕಾಗಿ ದುಡಿಯುವುದು ಬಿಟ್ಟ ಸ್ವಂತ ಉದ್ಯೋಗ ಆರಂಭಿಸಬೇಕು, ಲಾಭ ಪಡೆಯಬೇಕು, ಇತರರಿಗೆ ಉದ್ಯೋಗ ನೀಡಬೇಕು ಅನ್ನೋದು ಬಹುತೇಕರ ಕನಸು. ಆದರೆ ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಈ ಕನಸು ಹಾಗೇ ಉಳಿದು ಬಿಡುತ್ತದೆ. ಇದೀಗ ಸ್ವಂತ ಉದ್ಯಮ, ಸಣ್ಣ ಉದ್ಯಮ ಅಥವಾ ಇರುವ ಉದ್ಯಮವನ್ನು ವಿಸ್ತರಿಸಲು ಇಚ್ಚಿಸುವವರಿಗೆ ಪ್ರಧಾನಿ ಮೋದಿ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಹೌದು, ಮುದ್ರಾ ಲೋನ್ ಮೂಲಕ ಉದ್ಯಮದ ಕನಸು ನನಸು ಮಾಡಲು ಇದೀಗ ಈ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೊಸ ಕೊಡುಗೆ ಘೋಷಣೆ ಮಾಡಲಾಗಿದೆ.
ಪ್ರಧಾನಿ ಮೋದಿ ಆರಂಭಿಸಿದ ಮುದ್ರಾ ಲೋನ್ ಯೋಜನೆ ಮೂಲಕ ಹಲವು ಯುವ ಉದ್ಯಮಿಗಳು ಸೇರಿದಂತೆ ಹಲವರು ಸ್ವಂತ ಉದ್ಯೋಗ ಕಂಡುಕೊಂಡಿದ್ದಾರೆ. ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೋದಿ ಸರ್ಕಾರ ಮುದ್ರಾ ಲೋನ್ ಮೊತ್ತ ಡಬಲ್ ಮಾಡಿದೆ. ಗರಿಷ್ಠ 10 ಲಕ್ಷ ರೂಪಾಯಿ ಇದ್ದ ಮುದ್ರಾ ಲೋನ್ ಇದೀಗ 20 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇಷ್ಟೇ ಅಲ್ಲ ಸ್ವಂತ ಉದ್ಯಮ ಆರಂಭಿಸುವವರಿಗೆ ಲೋನ್ ಮಂಜೂರು ಪ್ರಕ್ರಿಯೆ ಮತ್ತಷ್ಟು ಸುಲಭಗೊಳಿಸಿದೆ.
2024-25ರ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಮುದ್ರಾ ಲೋನ್ ಮೊತ್ತ ಹೆಚ್ಚಿಸುವುದಾಗಿ ಘೋಷಿಸಿದ್ದರು. ಇದೀಗ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಸಣ್ಣ ಉದ್ಯಮಿದಾರರಿಗೆ ಮತ್ತಷ್ಟು ನರೆವು ನೀಡಲು ಮೋದಿ ಸರ್ಕಾರ ಮುಂದಾಗಿದೆ. ಮುದ್ರಾ ಲೋನ್ ಮೊತ್ತ ಹೆಚ್ಚಿಸುವುದರಿಂದ ಸಣ್ಣ ಮಟ್ಟದಲ್ಲಿ ಆರಂಭಿಸಿರುವ ಉದ್ಯಮ ವಿಸ್ತರಿಸಲು ಸಾಧ್ಯವಾಗಲಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಯಾರಿಗೆಲ್ಲಾ ಸಿಗಲಿದೆ 20 ಲಕ್ಷ ರೂಪಾಯಿ ಸಾಲ:
ಮುದ್ರಾ ಸಾಲ ಗರಿಷ್ಠ 10 ಲಕ್ಷ ರೂಪಾಯಿ. ಆದರೆ ಇದೀಗ ಮೋದಿ ಸರ್ಕಾರ 20 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ. ಈ ಮೊತ್ತ ಪಡೆಯಲು ಕೆಲ ಮಾನದಂಡಗಳಿವೆ. ಯಾರೆಲ್ಲಾ ಈಗಾಗಲೇ ಮುದ್ರಾ ಲೋನ್ ಪಡೆದು ಸರಿಯಾಗಿ ಪಾವತಿ ಮಾಡಿದ್ದಾರೋ ಅವರು 20 ಲಕ್ಷ ರೂಪಾಯಿ ವರೆಗೆ ಮುದ್ರಾ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಮುದ್ರಾ ಸಾಲ ಪಡೆದು ಸೂಕ್ತ ಸಮಯದಲ್ಲಿ ಮರುಪಾವತಿ ಮಾಡಿದ ಎಲ್ಲರೂ ಗರಿಷ್ಠ 20 ಲಕ್ಷ ರೂಪಾಯಿವರೆಗೆ ಸಾಲ ಪಡೆಯಲು ಅರ್ಹರಾಗಿದ್ದಾರೆ. ತರುಣ್ ವಿಭಾಗದಲ್ಲಿ ಮುದ್ರಾ ಲೋನ್ ಪಡೆದು ಮರುಪಾವತಿ ಮಾಡಿದವರು ಸುಲಭವಾಗಿ 20 ಲಕ್ಷ ರೂಪಾಯಿ ವರೆಗೆ ಲೋನ್ ಪಡೆಯಲು ಅರ್ಹರಾಗಿರುತ್ತಾರೆ.ಕ್ರೆಡಿಟ್ ಗ್ಯಾರೆಂಟಿ ಫಂಡ್ ಫಾರ್ ಮೈಕ್ರೋ ಯುನಿಟ್ ಅಡಿಯಲ್ಲಿ ಈ ಸಾಲ ಸೌಲಭ್ಯ ಸಿಗಲಿದೆ.ಮುದ್ರಾ ಸಾಲ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 8, 2015ರಂದು ಆರಂಭಿಸಿದ್ದರು. ಮಹತ್ವಾಕಾಂಕ್ಷಿ ಈ ಯೋಜನೆಯಿಂದ ಲಕ್ಷಾಂತರ ಮಂದಿ ಲಾಭ ಪಡೆದುಕೊಂಡಿದ್ದಾರೆ. ಸ್ವಂತ ಉದ್ಯಮ ಆರಂಭಿಸಿ ಬದುಕು ಕಟ್ಟಿಕೊಂಡಿದ್ದಾರೆ. ಹಲವರಿಗೆ ಉದ್ಯೋಗ ನೀಡಿದ್ದಾರೆ. ಮುದ್ರಾ ಲೋನ್ ಭಾರತದ ಸಣ್ಣ ಉದ್ಯಮ, ವ್ಯಾಪಾರ ವಹಿವಾಟು ನಡೆಸಲು ಇಚ್ಚಿಸುವವರಿಗೆ ಹೊಸ ಶಕ್ತಿ ನೀಡಿದ ಯೋಜನೆಯಾಗಿದೆ. ಅತೀ ಹೆಚ್ಚಿನ ಯುವ ಸಮೂಹ ಈ ಯೋಜನೆಯ ಲಾಭ ಪಡೆದಿದೆ. ಮುದ್ರಾ ಸಾಲ ಪಡೆದು ಸಣ್ಣ ಉದ್ದಿಮೆ ಆರಂಭಿಸಿ ಇದೀಗ ಬಹುದೊಡ್ಡ ಕಂಪನಿಯಾಗಿ ಬೆಳೆದು ನಿಂತ ಹಲವು ಉದಾಹರಣೆಗಳಿವೆ. ದೇಶಾದ್ಯಂತ ಈ ಯೋಜನೆ ಸೌಲಭ್ಯ ಪಡೆಯಬಹುದಾಗಿದೆ.