ಬೆಲ್ಫಾಸ್ಟ್ (ಯುನೈಟೆಡ್ ಕಿಂಗ್ಡಂ): ಜಾಗತಿಕ ಆನ್ಲೈನ್ ಬ್ಲ್ಯಾಕ್ಮೇಲ್ನ ಕ್ರೂರ ಅಭಿಯಾನದ “ಕ್ಯಾಟ್ಫಿಶ್” ಅಪರಾಧಿ ಹಾಗೂ ಸಾವಿರಾರು ಹುಡುಗಿಯರನ್ನು ಟಾರ್ಗೆಟ್ ಮಾಡಿದ ಹಾಗೂ 12 ವರ್ಷದ ಅಮೆರಿಕದ ಹುಡುಗಿಯನ್ನು ಆತ್ಮಹತ್ಯೆಗೆ ತಳ್ಳಿದ ವ್ಯಕ್ತಿಗೆ ನ್ಯಯಾಲಯವು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಪಂಚದಾದ್ಯಂತದ ಹುಡುಗಿಯರನ್ನು ಬ್ಲ್ಯಾಕ್ಮೇಲ್ ಮಾಡಿದ ಉತ್ತರ ಐರ್ಲೆಂಡ್ನ ನ್ಯೂರಿಯ 26 ವರ್ಷದ ಅಲೆಕ್ಸಾಂಡರ್ ಮೆಕ್ಕಾರ್ಟ್ನಿಗೆ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಹದಿಹರೆಯದ ಹುಡುಗಿಯಂತೆ ನಟಿಸಿ ಸ್ನ್ಯಾಪ್ಚಾಟ್ ಸೇರಿದಂತೆ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಸಂಪರ್ಕಿಸಿದ 3,500 ಹುಡುಗಿಯರ ಮೇಲೆ ಕ್ಯಾಟ್ಫಿಶಿಂಗ್ ದಾಳಿಯನ್ನು ನಡೆಸಿದ್ದಾನೆ ಎಂದು ಪ್ರಾಸಿಕ್ಯೂಟರ್ಗಳು ಹೇಳಿದ್ದಾರೆ.ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಅಮೆರಿಕ ಸೇರಿದಂತೆ 30 ದೇಶಗಳಲ್ಲಿ ಈತನಿಂದ ಆನ್ಲೈನ್ ಕ್ಯಾಟ್ಫಿಶಿಂಗ್ ದಾಳಿಗೊಳಗಾದ ಹುಡುಗಿಯರನ್ನು ಪೊಲೀಸರು ಗುರುತಿಸಿದ್ದಾರೆ.
ಕ್ಯಾಟ್ಫಿಶಿಂಗ್ ತನ್ನ ಬಲಿಪಶುಗಳನ್ನು ಮೋಸಗೊಳಿಸಲು ನಕಲಿ ಆನ್ಲೈನ್ ಗುರುತನ್ನು ಬಳಸುತ್ತದೆ. ಮೆಕ್ಕರ್ಟ್ನಿ ತನ್ನ ಬಲಿಪಶುಗಳಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಲು ಒತ್ತಾಯಿಸುತ್ತಿದ್ದ, ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ, ನಂತರ ಆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುವ ಮೂಲಕ ಅವರನ್ನು ಸುಲಿಗೆ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಐರ್ಲೆಂಡ್ನ ಪೊಲೀಸ್ ಸೇವೆಯ ಡಿಟೆಕ್ಟಿವ್ ಚೀಫ್ ಸೂಪರಿಂಟೆಂಡೆಂಟ್ ಎಮನ್ ಕೊರಿಗನ್ ಅವರು, ಮೆಕ್ಕಾರ್ಟ್ನಿಯು “ಅಸಹ್ಯಕರ ಮಕ್ಕಳ ಪರಭಕ್ಷಕ” ಎಂದು ಹೇಳಿದ್ದಾರೆ, ಆತನ ಅಪರಾಧವು “ಒಂದು ಉದ್ಯಮದ ಪ್ರಮಾಣದಲ್ಲಿ” ಇತ್ತು ಎಂದು ಹೇಳಿದ್ದಾರೆ.“ನ್ಯೂರಿಯಲ್ಲಿ (ಉತ್ತರ ಐರ್ಲೆಂಡ್ನಲ್ಲಿ) ತನ್ನ ಬಾಲ್ಯದ ಮಲಗುವ ಕೋಣೆಯಲ್ಲಿ ಕುಳಿತು, ಆತ ಹದಿಹರೆಯದವನಿದ್ದಾಗ ತನ್ನ ಅಪರಾಧ ಚಟುವಟಿಕೆಯನ್ನು ಪ್ರಾರಂಭಿಸಿದನು ಮತ್ತು ಅದನ್ನು ಶಿಶುಕಾಮಿ ಉದ್ಯಮವೆಂದು ಮಾತ್ರ ವಿವರಿಸಬಹುದಾದಂತಹ ರೀತಿಯಲ್ಲಿ ಅದನ್ನು ಅಪರಾಧಿಕರಿಸಿದನು” ಎಂದು ಅವರು ನ್ಯಾಯಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು. “ಮೆಕ್ಕರ್ಟ್ನಿ ಅಪಾಯಕಾರಿ, ಕ್ರೂರ ಶಿಶುಕಾಮಿ” ಎಂದು ಅವರು ಹೇಳಿದರು.
ವೆಸ್ಟ್ ವರ್ಜೀನಿಯಾದಲ್ಲಿ 12 ವರ್ಷದ ಬಾಲಕಿಯೊಬ್ಬಳು ಮೇ 2018 ರಲ್ಲಿ ಮ್ಯಾಕ್ಕಾರ್ಟ್ನಿಯೊಂದಿಗೆ ಆನ್ಲೈನ್ ಚಾಟ್ ಮಾಡುವಾಗ ಲೈಂಗಿಕ ಕ್ರಿಯೆಗಳಿಗೆ ಒತ್ತಾಯಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಳು. ಮೃತ ಬಾಲಕಿಯ ತಂದೆ 18 ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡರು.ಸಂತ್ರಸ್ತೆ ಮತ್ತು ಅಪರಾಧಿ ಎಂದಿಗೂ ಭೇಟಿಯಾಗದ ಪ್ರಕರಣದಲ್ಲಿ ನರಹತ್ಯೆಗೆ ಶಿಕ್ಷೆ ವಿಧಿಸಿರುವುದು ಇದೇ ಮೊದಲು ಎಂದು ನಂಬುವುದಾಗಿ ಪ್ರಾಸಿಕ್ಯೂಟರ್ಗಳು ಹೇಳಿದ್ದಾರೆ.
ತನ್ನ ಬಾಲ್ಯದ ಮನೆಯ ಮಲಗುವ ಕೋಣೆಯಿಂದ ತನ್ನ ಅಪರಾಧಗಳನ್ನು ಎಸಗಿದ ಮೆಕ್ಕಾರ್ಟ್ನಿ, ನರಹತ್ಯೆ ಆರೋಪ ಸೇರಿದಂತೆ 70 ಮಕ್ಕಳನ್ನು ಒಳಗೊಂಡ 185 ಆರೋಪಗಳಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಬೆಲ್ಫಾಸ್ಟ್ ಕ್ರೌನ್ ಕೋರ್ಟ್ನಲ್ಲಿ, ನ್ಯಾಯಾಧೀಶ ಜಾನ್ ಒ’ಹರಾ ಅವರಿಗೆ 20 ವರ್ಷಗಳವರೆಗೆ ಪೆರೋಲ್ಗೆ ಅವಕಾಶವಿಲ್ಲದ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
‘ಲೈಂಗಿಕ ವಿಕೃತ’
ಮೆಕ್ಕಾರ್ಟ್ನಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶ ಜಾನ್ ಒ’ಹಾರಾ ಅವರು, ಅಪರಾಧಿಯೊಬ್ಬ “12 ವರ್ಷದ ಬಾಲಕಿಯ ಸಾವು ಸೇರಿದಂತೆ ಯುವತಿಯರಿಗೆ ಇಂತಹ ಭಯಾನಕ ಮತ್ತು ದುರಂತ ಹಾನಿಯನ್ನುಂಟುಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸಿದ ಯಾವುದೇ ಪ್ರಕರಣದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರು. “ಈ ಆರೋಪಿಗಿಂತ ಹೆಚ್ಚಿನ ಅಪಾಯವನ್ನುಂಟುಮಾಡುವ ಲೈಂಗಿಕ ವಿಕೃತಿ ಬಗ್ಗೆ ಯೋಚಿಸುವುದು ನಿಜವಾಗಿಯೂ ಕಷ್ಟ” ಎಂದು ಅವರು ಹೇಳಿದರು. ಮೆಕ್ಕಾರ್ಟ್ನಿಗೆ ತನ್ನ ಅಪರಾಧದ ಬಗ್ಗೆ ಯಾವುದೇ “ಪಶ್ಚಾತ್ತಾಪವಿಲ್ಲ” ಎಂದು ಓ’ಹಾರಾ ಹೇಳಿದ್ದಾರೆ. ಮೂರನೇ ಬಂಧಿಸಿದ ನಂತರವೂ, ಮಾಜಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯು “ಇನ್ನೂ ಹೆಚ್ಚು ಕೆಟ್ಟದಾಗಿ, ನಾಟಕೀಯವಾಗಿ ಮತ್ತು ಭಯಾನಕ ರೀತಿಯಲ್ಲಿ” ಅಪರಾಧ ಮಾಡಿದ್ದಾನೆ ಎಂದು ಅವರು ಹೇಳಿದರು.