ವಿಜಯಪುರ : ಜಿಲ್ಲೆಯಲ್ಲಿ ಅದರಲ್ಲೂ ಮಹಾರಾಷ್ಟ್ರ ಗಡಿಭಾಗದ ಗ್ರಾಮಗಳ ರೈತರ ಸಾವಿರಾರು ಎಕರೆ ಜಮೀನನ್ನು ವಕ್ಫ್ ಆಸ್ತಿಯೆಂದು ಮಂಡಳಿಗೆ ವರ್ಗಾಯಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ರೈತಪರ ಸಂಘಟನೆಗಳು ಹೋರಾಟಕ್ಕಿಳಿದಿವೆ. ಕಂದಾಯ ಇಲಾಖೆಯಿಂದ ಹಲವು ರೈತರಿಗೆ ಜಮೀನಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಿರುವುದು ಗಂಭೀರ ಸ್ವರೂಪ ಪಡೆದುಕೊಂಡಿದೆ. ವಕ್ಫ್ ಖಾತೆ ಸಚಿವ ಜಮೀರ್‌ ಅಹ್ಮದ್‌ಖಾನ್‌ ತಿಂಗಳ ಹಿಂದೆ ಜಿಲ್ಲೆಗಾಗಮಿಸಿ ವಕ್ಫ್ ಅದಾಲತ್‌ ಹಾಗೂ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಸಭೆ ನಡೆಸಿದ ನಂತರ, ಅನೇಕ ರೈತರಿಗೆ ನೋಟಿಸ್‌ ನೀಡಲಾಗಿದೆ ಎಂಬ ಆರೋಪಗಳಿವೆ.

ಆದರೆ, ಎಷ್ಟು ಜಮೀನು, ಎಷ್ಟು ರೈತರಿಗೆ ನೋಟಿಸ್‌ ನೀಡಲಾಗಿದೆ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಿಲ್ಲ.ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ 1500 ಎಕರೆ ಜಮೀನು ವಕ್ಪ್‌ ಆಸ್ತಿ ಎಂದು 89 ರೈತರಿಗೆ ನೋಟಿಸ್‌ ನೀಡಿದ್ದಾರೆ. ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ, ಇಂಗಳೇಶ್ವರ ಗ್ರಾಮದ ಕೆಲ ರೈತರಿಗೆ ನಿಮ್ಮದು ವಕ್ಫ್ ಆಸ್ತಿ ಎಂದು ಹೇಳುತ್ತಿದ್ದಾರಲ್ಲದೆ ನೋಟಿಸ್‌ ನೀಡಲಾಗಿದೆ ಎಂದು ಆರೋಪಿಸಿ ರೈತ ಸಂಘಟನೆಗಳು 2 ದಿನಗಳ ಹಿಂದೆ ಸರಕಾರಕ್ಕೆ ಮನವಿ ಸಲ್ಲಿಸಿವೆ.ರೈತ ಮುಖಂಡರು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿಯಾಗಿ, ವಿಜಯಪುರ ಜಿಲ್ಲೆಯಲ್ಲಿಅನೇಕ ರೈತರ ಜಮೀನನ್ನು ವಕ್ಫ್ ಮಂಡಳಿಗೆ ವರ್ಗಾಯಿಸುವ ಹುನ್ನಾರ ಸಚಿವ ಜಮೀರ್‌ ಅಹ್ಮದ್‌ ಜಿಲ್ಲೆಗೆ ಬಂದುಹೋದ ಮೇಲೆ ನಡೆದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆರೋಪ-ಪ್ರತ್ಯಾರೋಪ ಸಚಿವ ಜಮೀರ್‌ ಅಹ್ಮದ್‌ ಜಿಲ್ಲೆಗೆ ಬಂದ ಹೋದ ನಂತರ, ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಟಿ.ರವಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ವಕ್ಫ್ ವಿರುದ್ಧ ಬೃಹತ್‌ ಹೋರಾಟವನ್ನೂ ನಡೆಸಲಾಯಿತು. ವಕ್ಫ್ ಆಸ್ತಿ ನಿಮ್ಮಪ್ಪನ ಆಸ್ತಿಯಲ್ಲ, ನಮ್ಮಪ್ಪನ ಆಸ್ತಿಯೂ ಅಲ್ಲಎಂದು ಜಮೀರ್‌ ಆಹ್ಮದ್‌ ಯತ್ನಾಳಗೆ ಚಾಟಿ ಬೀಸಿದರು. ಯತ್ನಾಳ ಕೂಡ ತಿರುಗೇಟು ನೀಡಿದರು.ರೈತರ ಜಮೀನುಗಳ ಪಹಣಿ ಪತ್ರದಲ್ಲಿ ಕಾಲಂ ನಂಬರ್‌ 11 ರ ಋುಣಗಳು ಕಾಲಂನಲ್ಲಿ ಕರ್ನಾಟಕ ವಕ್ಫ್ ಬೋರ್ಡ್‌ ಎಂದು ನಮೂದಿಸಿರುವುದಾಗಿ ಜಿಲ್ಲೆಯ ರೈತರು ತಿಳಿಸಿದ್ದಾರೆ.

ನಾಡಿನ ಅನ್ನದಾತರನ್ನು ಒಕ್ಕಲೆಬ್ಬಿಸುವ ಬಗ್ಗೆ ಬಿಜಿಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಕ್ಸ್‌ ಖಾತೆಯಲ್ಲಿಪೋಸ್ಟ್‌ ಮಾಡಿದ್ದಾರೆ.

ಜಿಲ್ಲಾಧಿಕಾರಿ ಹೇಳೋದು ಏನು?ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿಯ, ಖಾಸಗಿ ಆಸ್ತಿಯನ್ನು ವಕ್ಫ್ ಮಂಡಳಿಗೆ ವರ್ಗಾಯಿಸಲಾಗುತ್ತಿಲ್ಲ. ವಕ್ಫ್ ಆಸ್ತಿ ಇಂಡೀಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ವದಂತಿಗಳಿಗೆ ರೈತರು-ಆಸ್ತಿ ಮಾಲೀಕರು ಕಿವಿಗೊಡಬಾರದೆಂದು ಜಿಲ್ಲಾಧಿಧಿಕಾರಿ ಟಿ.ಭೂಬಾಲನ್‌ ಸ್ಪಷ್ಟನೆ ನೀಡಿದ್ದಾರೆ.1974 ರಲ್ಲಿ ವಕ್ಫ್ ಮಂಡಳಿಯಿಂದ ಹೊರಡಿಸಿದ ಗೆಜೆಟ್‌ ನೋಟಿಫಿಕೇಶನ್‌ ಪ್ರಕಾರ ಇರುವ ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ಇಂಡೀಕರಣಕ್ಕಾಗಿ ಪಟ್ಟಿ ಒದಗಿಸಲಾಗಿದೆ.

ಇದರನ್ವಯ ಖಾತೆ ಬದಲಾವಣೆಗೆ ದಾಖಲೆ ಪರಿಶೀಲನೆ ನಡೆಸಿ, ಸಾಮಾನ್ಯವಾಗಿ ಯಾವುದೇ ಒಂದು ಆಸ್ತಿಯ ಹಕ್ಕು ಬದಲಾವಣೆಯಲ್ಲಿ ಕೈಗೊಳ್ಳುವ ಕ್ರಮಗಳ ಪ್ರಕಾರವೇ ಸಂಬಂಧಪಟ್ಟ ರೈತರು ಅಥವಾ ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತಿದೆ. ಯಾರು ಕೂಡ ಆತಂಕಪಡುವ ಅವಶ್ಯಕತೆ ಇಲ್ಲಎಂದು ತಿಳಿಸಿದ್ದಾರೆ.ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಹೊಂದಿಲ್ಲ. ಕೆಲವೊಂದು ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡದೆಯೇ ಆರ್‌ಟಿಸಿಯಲ್ಲಿ ಏನಾದರೂ ಬದಲಾವಣೆಯಾಗಿದ್ದಲ್ಲಿ ಸಂಬಧಿಧಿಸಿದ ರೈತರು-ಆಸ್ತಿ ಮಾಲೀಕರು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಅವಕಾಶವಿದೆ ಎಂದಿದ್ದಾರೆ.ನೋಟಿಸ್‌ ಬಂದ ತಕ್ಷಣ ತಮ್ಮ ಆಸ್ತಿಯ ಖಾತೆ ಬದಲಾವಣೆಯಾಗಿದೆ ಎಂಬ ಆತಂಕ-ಭಯ ಪಡುವ ಅವಶ್ಯಕತೆ ಇಲ್ಲ.

ನೋಟಿಸ್‌ ಬಂದಲ್ಲಿ, ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ತಹಶೀಲ್ದಾರ ಕಚೇರಿಯಲ್ಲಿಒದಗಿಸಿ ಮಾಹಿತಿ ನೀಡಬೇಕು. ದಾಖಲೆಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ1500 ಎಕರೆ ರೈತರ ಜಮೀನುಗಳನ್ನು ಈಗಾಗಲೇ ಅಧಿಕಾರಿಗಳು ವಕ್ಫ್ ಮಂಡಳಿಗೆ ವರ್ಗಾಯಿಸುವ ಹುನ್ನಾರ ನಡೆದಿದೆ ಎಂಬ ಆರೋಪಕ್ಕೆ ಸ್ಪಷ್ಟಣೆ ನೀಡಿದ ಅವರು, ಹೊನವಾಡ ಗ್ರಾಮದಲ್ಲಿನ ರೈತರಿಗೆ- ಆಸ್ತಿ ಮಾಲೀಕರಿಗೆ ಈವರೆಗೆ ಯಾವುದೇ ನೋಟಿಸ್‌ ಜಾರಿ ಮಾಡಿಲ್ಲ. ಕಳೆದ ಒಂದು ತಿಂಗಳಿನಿಂದ ಯಾವುದೇ ಆಸ್ತಿಯನ್ನು ಇಂದೀಕರಣ ಮಾಡಿ, ವಕ್ಫ್‌ಗೆ ನೀಡಿಲ್ಲ.

ಹೊನವಾಡದಲ್ಲಿ 1500 ಎಕರೆ ವಕ್ಫ್ ಆಸ್ತಿಯೂ ಇಲ್ಲ. ಗೆಜೆಟ್‌ ನೋಟಿಫಿಕೇಶನ್‌ ಪ್ರಕಾರ 10-15 ಎಕರೆ ಮಾತ್ರ ವಕ್ಫ್ ಆಸ್ತಿ ಇರುವುದು ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.ಜಿಲ್ಲೆಯಲ್ಲಿ ಹಲವು ರೈತರಿಗೆ ವಕ್ಫ್ ಎಂದು ಆಸ್ತಿ ನೋಟಿಸು ಬಂದಿದೆ ಎಂಬ ದೂರುಗಳಿದ್ದು, ವಕ್ಫ್‌ ಮಿತಿ ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ದಾಖಲೆ ಪರಿಶೀಲಿಸಲಾಗುತ್ತದೆ. ಒಂದೇ ಒಂದು ಇಂಚು ರೈತರ ಜಾಗ ಅನಗತ್ಯವಾಗಿ, ಆಧಾರ, ದಾಖಲೆಗಳಿಲ್ಲದೆ ವಕ್ಫ್ ಆಸ್ತಿ ಎಂದು ಸೇರಿಸಲಾಗುವುದಿಲ್ಲ. ಸಭೆ ನಡೆಸಿ ಗೊಂದಲಗಳಿಗೆ ಉತ್ತರ ನೀಡಲಾಗುವುದು. ಸಂಸದ ತೇಜಸ್ವಿ ಸೂರ್ಯ ಅವರಾಗಲಿ ಮತ್ತೊಬ್ಬರಾಗಲಿ ರಾಜಕಾರಣ ಮಾಡಿ ಜನಸಾಮಾನ್ಯರಲ್ಲಿಇಲ್ಲದ ಗೊಂದಲ, ಆತಂಕ ಮೂಡಿಸುವುದು ಬೇಡ.-ಎಂ.ಬಿ.ಪಾಟೀಲ, ವಿಜಯಪುರ ಜಿಲ್ಲಾಉಸ್ತುವಾರಿ ಸಚಿವ