ಶ್ರೀ ಧರ್ಮಸ್ಥಳ ಮೇಳ
*******************

1.ಮೊದಲ ಮಾತು
•••••••••••••••••••••

ಕರಾವಳಿ ಕರ್ನಾಟಕದ ಯಕ್ಷಗಾನ ಮೇಳಗಳಲ್ಲಿ ಅತ್ಯಂತ ಸುಪ್ರಸಿದ್ಧವಾದುದು ಧರ್ಮಸ್ಥಳ ಮೇಳ, ಸಂಪ್ರದಾಯಬದ್ಧವಾಗಿ ಪೌರಾಣಿಕ ಪ್ರಸಂಗ ಗಳನ್ನಾಡುವುದರಲ್ಲಿ ಧರ್ಮಸ್ಥಳ ಮೇಳಕ್ಕೊಂದು ದೊಡ್ಡ ಪರಂಪರೆಯೇ ಇದೆ.

ಕರ್ನಾಟಕದ ಪ್ರಖ್ಯಾತ ಪುಣ್ಯಕ್ಷೇತ್ರ ಧರ್ಮಸ್ಥಳ. ಇಲ್ಲಿನ ಮಂಜುನಾಥೇಶ್ವರ ದೇವಸ್ಥಾನ ಅನೇಕ ದೃಷ್ಟಿಗಳಿಂದ ಮಹತ್ವ ಪಡೆದಿದೆ. ಕಲಾದೃಷ್ಟಿಯಿಂದ ಯಕ್ಷಗಾನ ಮೇಳ ದೇವಸ್ಥಾನದ ದೊಡ್ಡ ಕೊಡುಗೆ. ದೇವಸ್ಥಾನದ ಕುರಿತು ಜನರಲ್ಲಿ ಪವಿತ್ರ ಭಾವನೆಯಿರುವಂತೆ ಯಕ್ಷಗಾನ ಮೇಳದಲ್ಲಿಯೂ ಕಲಾರಸಿಕರ ಭಕ್ತಿಭಾವ ಅಡಗಿದೆ. ಕರ್ನಾಟಕದ ಉಳಿದ ವ್ಯವಸಾಯಿ ಮೇಳಗಳಿಗಿಂತ ಧರ್ಮಸ್ಥಳ ಮೇಳ ಈ ದೃಷ್ಟಿಯಲ್ಲಿ ವಿಶಿಷ್ಟತೆ ಪಡೆದಿದೆಯೆಂಬುದು ಗಮನಾರ್ಹ ಅಂಶ.

ತೆಂಕುತಿಟ್ಟಿನ ಕೂಡ್ಲು, ಇಚಿಲಂಪಾಡಿ ಮುಂತಾದ ಮೇಳಗಳು ಯಕ್ಷಗಾನ ಪ್ರಪಂಚದಲ್ಲಿ ಕೀರ್ತಿ ವೈಭವದಿಂದ ಮೆರೆಯುತ್ತಿದ್ದಾಗ ಧರ್ಮಸ್ಥಳ ಮೇಳ ಇನ್ನೂ ಪ್ರಸಿದ್ದಿಯ ಹಾದಿಯತ್ತ ಸಾಗುತಿತ್ತು. ಆದರೆ ದೇವಸ್ಥಾನದಿಂದ ಒಮ್ಮಿಂದೊಮ್ಮೆಗೆ ಸಿಕ್ಕಿದ ವಿಶೇಷ ಪ್ರೋತ್ಸಾಹ ಮೇಳ ಪ್ರಖ್ಯಾತಿಗೆ ಬರಲು ಕಾರಣವಾಯಿತು. ಕೆಲವು ಕಲಾವಿದರ ಅವಿರತ ಶ್ರದ್ಧೆ ಉತ್ಸಾಹಗಳು ಧರ್ಮಸ್ಥಳ ಮೇಳಕ್ಕೆ ವರವಾಗಿ ಪರಿಣಮಿಸಿತು. ಧರ್ಮಸ್ಥಳ ಮೇಳ ಕೆಲವೇ ದಶಕಗಳಲ್ಲಿ ಉಳಿದೆಲ್ಲ ಮೇಳಗಳಿಗಿಂತ ಮುಂದುವರಿದು ಯಕ್ಷಲೋಕದಲ್ಲಿ ಭದ್ರಸ್ಥಾನ ಗಳಿಸಿತು.

ಧರ್ಮಸ್ಥಳ ಮೇಳ ಉಳಿದೆಲ್ಲ ಮೇಳಗಳಿಗಿಂತ ಹೆಚ್ಚು ವ್ಯವಸ್ಥಿತವಾಗಿ ಮುನ್ನಡೆಯುತ್ತಿದೆ. ಈ ಮೇಳದ ಇತಿಹಾಸ ಇಂತಹ ಮುನ್ನಡೆಗೆ ಹೇಗೆ ಕಾರಣ ವಾಯಿತೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

2. ಧರ್ಮಸ್ಥಳದ ಹಿನ್ನೆಲೆ
••••••••••••••••••••••••••
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಧರ್ವಸ್ಥಳ ಪ್ರಾಕೃತಿಕ ಸೌಂದರ್ಯದ ಪ್ರಸಿದ್ಧ ಪ್ರಣ್ಯ ಕ್ಷೇತ್ರ ಧರ್ಮಸ್ಥಳ ಸರ್ವಧರ್ಮಗಳ ತವರೂರು. ಇಲ್ಲಿನ ಮಂಜುನಾಥ ಸ್ವಾಮಿ ಶೈವ ದೇವತೆ, ಚಂದ್ರನಾಥ ಸ್ವಾಮಿ ಜೈನ ತೀರ್ಥಂಕರ, ಹಾಗೆಯೇ ಧರ್ಮದೇವತೆಗಳು ಕಾಳರಾಹು, ಕಾಳರ್ಕಾಯಿ, ಕುಮಾರ ಸ್ವಾಮಿ, ಕನ್ಯಾಕುಮಾರಿ ಮತ್ತು ಅಣ್ಣಪ್ಪ ಸ್ವಾಮಿ, ಇಲ್ಲಿನ ದೇವಸ್ಥಾನದ ಆರ್ಚಕರು ವೈಷ್ಣವರು, ಧರ್ಮಾಧಿಕಾರಿಗಳು ಜೈನರು, ಹೀಗೆ ಪರಮತ ಸಹಿಷ್ಣುತೆಗೆ ಧರ್ಮಸ್ಥಳ ಪ್ರಖ್ಯಾತಿ.
ಧರ್ಮಸ್ಥಳಕ್ಕೆ ಸುಮಾರು ಎಂಟು ಶತಮಾನಗಳ ಇತಿಹಾಸವಿದೆ ಇಲ್ಲಿನ ಐತಿಹ್ಯದಂತೆ ಕುಡುಮ ಎಂದು ಕರೆಯುತ್ತಿದ್ದ ಈ ಸ್ಥಳದಲ್ಲಿ ಬಿರ್ಮಣ್ಣ ಬಲ್ಲಾಳ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಜೈನ ದಂಪತಿಗಳ ಕಾಲದಲ್ಲಿ ದೇವಸ್ಥಾನದ ಸ್ಥಾಪನೆ ಯಾಯಿತು. ಧರ್ಮಸ್ಥಳ ಪ್ರಸಿದ್ಧಿಗೆ ಬರಲು ಹೆಗ್ಗಡೆಯವರೇ ಮುಖ್ಯ ಕಾರಣ ಹೆಗ್ಗಡೆ ಮನೆತನದಲ್ಲಿ ಧರ್ಮಾಡಳಿತ ನಡೆಸಿದವರು ಇವರು: ಬರ್ಮಣ್ಣ ಹೆಗ್ಗಡೆ,ಪದ್ಮಯ್ಯ ಹೆಗ್ಗಡೆ (1432) ಚಂದಯ್ಯ ಹೆಗ್ಗಡೆ (1432-1505) ದೇವರಾಜ ಹೆಗ್ಗಡೆ (1505), ಮಂಜಯ್ಯ ಹೆಗ್ಗಡೆ, ಜಿನ್ನಪ್ಪ ಹೆಗ್ಗಡೆ, ಚಂದಯ್ಯ ಹೆಗ್ಗಡೆ, ದೇವಪ್ಪ ರಾಜ ಹೆಗ್ಗಡೆ, ಅನಂತಯ್ಯ ಹೆಗ್ಗಡೆ, ಕೃಷ್ಣಯ್ಯ ಹೆಗ್ಗಡೆ, ಗುಮ್ಮಣ್ಣ ಹೆಗ್ಗಡೆ, ವರ್ಧಯ್ಯ ಹೆಗ್ಗಡೆ, ಚಂದಯ್ಯಹೆಗ್ಗಡೆ, ಕುಮಾರಯ್ಯ ಹೆಗ್ಗಡೆ. (1830 ರವರೆಗೆ), ನಾಲ್ಮಡಿ ಚಂದಯ್ಯ ಹೆಗ್ಗಡೆ (1830-1849) ಇಮ್ಮಡಿ ಮಂಜಯ್ಯ ಹೆಗ್ಗಡೆ (1849-1895) ಧರ್ಮಪಾಲ ಹೆಗ್ಗಡೆ (1895-97) ಐದನೆಯ ಚಂದಯ್ಯ ಹೆಗ್ಗಡೆ (1897-1918), ಮಂಜಯ್ಯ ಹೆಗ್ಗಡೆ (1918 – 55), ರತ್ನವರ್ಮ ಹೆಗ್ಗಡೆ (1955 – 68), 1968ರಿಂದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವರು.

3. ಯಕ್ಷಗಾನ ಮೇಳ
•••••••••••••••••••••••

ಕರಾವಳಿ ಕರ್ನಾಟಕದ ವಿಶಿಷ್ಟ ಜಾನಪದ ಕಲೆ ಯಕ್ಷಗಾನ, ದೇವಸ್ಥಾನಗಳು ಯಕ್ಷಗಾನಕ್ಕೆ ಅಶ್ರಯ ಸ್ಥಾನವಾಗಿದ್ದರು. ಯಕ್ಷಗಾನ ಮೊದಲು ಧರ್ಮ ಪ್ರಸಾರ ಕಲೆಯಾದ್ದರಿಂದ ದೇವಸ್ಥಾನದ ಉದ್ದೇಶ ಸಾರ್ಥಕ್ಯಕ್ಕೆ ಯಕ್ಷಗಾನ ಸಹಾಯಕವಾಗುತ್ತಿತ್ತು. ಪ್ರಸಿದ್ಧ ಯಕ್ಷಗಾನ ಮೇಳಗಳೆಲ್ಲ ದೇವಸ್ಥಾನಕ್ಕೆ ಸಂಬಂಧಿಸಿದವುಗಳೇ.
ಧರ್ಮಸ್ಥಳ ದೇವಸ್ಥಾನದಲ್ಲಿ ಯಕ್ಷಗಾನ ಮೇಳ ಎಂದಿನಿಂದ ಪ್ರಾರಂಭ ವಾಯಿತೆಂಬುದಕ್ಕೆ ಲಿಖಿತ ಆಧಾರಗಳೇನೂ ಇಲ್ಲ.ಆದರೆ ಧರ್ಮಸ್ಥಳ ದೇವಸ್ಥಾನದ ಜನಪ್ರಿಯತೆಯೊಂದಿಗೆ ಮೇಳದ ಸ್ಥಾಪನೆಯು ಸೇರಿರಬೇಕು. ಸುಮಾರು ಹದಿನೇಳು, ಹದಿನೆಂಟನೇ ಶತಮಾನಗಳಲ್ಲಿ ಯಕ್ಷಗಾನವು ಕರಾವಳಿ ಕರ್ನಾಟಕದ ತುಂಬ ಪ್ರಚಾರಕ್ಕೆ ಬಂದಾಗ ಧರ್ಮಸ್ಥಳ ಮೇಳವೂ ಹುಟ್ಟಿ ಕೊಂಡಿರಬಹುದು. ಆದರೆ ಆಗ ಯಾವ ಮೇಳವೂ ಪೂರ್ಣಪ್ರಮಾಣದ ಇತರ ವ್ಯವಸಾಯ ಮೇಳಗಳಂತಿರಲಿಲ್ಲ. ಮೊದಲ ಧರ್ಮಸ್ಥಳ ಮೇಳದ ರೂಪುರೇಷೆಗಳನ್ನು ಹೀಗೆ ಗುರುತಿಸಬಹುದು.

(1) ದೇವಸ್ಥಾನದಲ್ಲಿ ಮೇಳಕ್ಕೆ ಬೇಕಾದ, ವೇಷ ಭೂಷಣ ಇತ್ಯಾದಿ ಸಾಮಾಗ್ರಿಗಳಿದ್ದವು
(2), ಅಗತ್ಯ ಸಂದರ್ಭಗಳಲ್ಲಿ ಮಾತ್ರವೇ ಕಲಾವಿದರು ಆಟವಾಡುತ್ತಿದ್ದರು, ಜಾತ್ರೆ
ಉತ್ಸವ ಸಮಾರಂಭಗಳಲ್ಲಿ ಮೇಳದ ಆಟ ನಡೆಯುತಿತ್ತು,

(3) ಮೇಳವನ್ನು ಪೂರ್ಣ ನಂಬಿಕೊಂಡ ಕಲಾವಿದರಿರಲಿಲ್ಲ. ಆಗ ಯಕ್ಷಗಾನ “ಹವ್ಯಾಸಿ”ಯಾಗಿ ಸ್ವೀಕರಿಸಿದವರು ಮೇಳದಲ್ಲಿ ಪಾತ್ರ ಮಾಡುತ್ತಿದ್ದರು.
(4) ವಿಶೇಷ ಆಟಗಳಲ್ಲಿ ಪ್ರಸಿದ್ಧ ಕಲಾವಿದರನ್ನೂ ಆಹ್ವಾನಿಸಿ ಮೇಳದಲ್ಲಿ ವೇಷ ಮಾಡಿಸುವ ಕ್ರಮವಿತ್ತು

(5) ಮೇಳದಲ್ಲಿ ಪಾತ್ರ ಮಾಡಿದ ಕಲಾವಿದರಿಗೆ ಗೌರವ ಸಹಾಯ ಸಲ್ಲುತಿತ್ತು.

(6) ರಾಮಾಯಣ ಮಹಾಭಾರತದ ಪೌರಾಣಿಕ ಪ್ರಸಂಗಗಳನ್ನು ಮಾತ್ರವೇ ಆಡಲಾಗುತಿತ್ತು,

(7) ಮೇಳ ಜನರಂಜನೆಯೊಂದಿಗೆ ಧರ್ಮಪ್ರಚಾರವನ್ನೂ ಮಾಡುತಿತ್ತು.

(8) ಮೇಳ ‘ವ್ಯವಸಾಯ ಮೇಳ’ವಾಗದ್ದರಿಂದ ಒಂದು ರೀತಿಯ ಗೌರವ ಆದರಗಳೇ ಮೇಳಕ್ಕೆ ಹೆಚ್ಚಿಗೆ ಸಲ್ಲುತ್ತಿತ್ತೆಂಬುದನ್ನು ಗಮನಿಸಬೇಕು. ಯಕ್ಷಗಾನದ ಬೆಳವಣಿಗೆಯನ್ನು ಗಮನಿಸುವಾಗ ಮೊದಲು ಮೇಳಗಳ ಕುರಿತು ಜನರಿಗೆ ಗೌರವ ಹೆಚ್ಚಿಗಿರಲಿಲ್ಲ. ಹೆಂಗಸರು, ವಿದ್ಯಾವಂತರು ಮೇಳಗಳ ಆಟ ನೋಡು ತ್ತಿರಲಿಲ್ಲ. ಮೇಳದ ಕಲಾವಿದರು ಸಮಾಜದಲ್ಲಿ ಕೀಳಾಗಿ ಪರಿಗಣಿಸಲ್ಪಟ್ಟಿದ್ದರು. ಇಂತಹ ಸ್ಥಿತಿಯಲ್ಲಿ ಧರ್ಮಸ್ಥಳ ಮೇಳ ಪೂರ್ಣ ಪ್ರಮಾಣದ ವ್ಯವಸಾಯ ಮೇಳವಾಗದಿರುವುದು ದೇವಸ್ಥಾನಕ್ಕೆ ದೊಡ್ಡ ಕೊರತೆಯೆನಿಸಿರಲಿಲ್ಲ. ಅಲ್ಲದೆ ಮೇಳದ “ಅಪರೂಪದ ಆಟಗಳು” ವಿಶೇಷ ಪ್ರೋತ್ಸಾಹಕ್ಕೆ ಕಾರಣವಾಗಿದ್ದವು.

4. ಕುಮಾರಯ್ಯ ಹೆಗ್ಗಡೆಯವರ ಕಾಲದಲ್ಲಿ
••••••••••••••••••••••••••••••••••••••••••••••••••

ಕ್ರಿ.ಶ. 1790ರಲ್ಲಿ ಧರ್ವಸ್ಥಳದ ಪಟ್ಟಕ್ಕೆ ಬಂದ ಕುಮಾರಯ್ಯ ಹೆಗ್ಗಡೆಯವರ ಕಲಾಪ್ರೇಮ ಮೇಳದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗಲು ಕಾರಣವಾಯಿತು. ಕುಮಾರಯ್ಯ ಹೆಗ್ಗಡೆಯವರ ನಾನಾ ಚಟುವಟಿಕೆಗಳು ಧರ್ಮಸ್ಥಳವನ್ನು ಪ್ರಖ್ಯಾತಗೊಳಿಸಿತು.

ಯಕ್ಷಗಾನ ಕಲೆಗೆ ಮನಸೋತ ಕುಮಾರಯ್ಯ ಹೆಗ್ಗಡೆಯವರು ಮೇಳವನ್ನು ಸರಿಯಾಗಿ ಸಂಘಟಿಸಲು ಯೋಜಿಸಿದರು. ವೇಷಭೂಷಣ ಇತ್ಯಾದಿ ಸಾಮಾಗ್ರಿಗಳನ್ನು ಪರಿಷ್ಕರಿಸಿ ಕಲಾವಿದರಿಗೆ ಸೌಲಭ್ಯಗಳನ್ನು ಕಲ್ಪಿಸಿದರು. ಈ ಕಾಲದಲ್ಲಿ ಮೇಳ ವ್ಯವಸಾಯಿ ಮೇಳವಾಗಿರದಿದ್ದರೂ ವ್ಯವಸಾಯ ಮೇಳಕ್ಕಿರಬೇಕಾದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿತ್ತು. ಕುಮಾರಯ್ಯ ಹೆಗ್ಗಡೆಯವರ ಯಕ್ಷಗಾನ ಪ್ರೇಮ ಎಷ್ಠಿ ಎಂದರೆ ತಮ್ಮ ಸಂದರ್ಶನದ ಕಾಲದಲ್ಲಿ ಮೇಳವನ್ನೂ ಜೊತೆಯಲ್ಲಿ ಕರೆದೊಯುತ್ತಿದ್ದರು.

ಅಗ ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು (1811-1868) ಮತ್ತು ಕುಮಾರಯ್ಯ ಹೆಗ್ಗಡೆಯವರ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಕೃಷ್ಣರಾಯ ಒಡೆಯರ ಕಾಲದಲ್ಲಿ ಕನ್ನಡ ರಂಗಭೂಮಿ ವಿಶೇಷ ಪ್ರೋತ್ಸಾಹ ಪಡೆಯಿತು. ಒಡೆಯರು ಕವಿಗಳಿಗೆ ನಾಟಕಕಾರರಿಗೆ ಸಂಗೀತ ಗಾರರಿಗೆ ಆಶ್ರಯವಿತ್ತಿದ್ದರು. ಒಡೆಯರಿಗೆ ಯಕ್ಷಗಾನದಲ್ಲಿ ಆಸಕ್ತಿಯಿತ್ತು. ಇವರ ಅಳಿಯ ಲಿಂಗರಾಜನು ಒಡೆಯರ ಯಕ್ಷಗಾನಾಸಕ್ತಿಯನ್ನು ಗಮನಿಸಿ ಮೂವತ್ತು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದನು.ಕೃಷ್ಣರಾಜ ಒಡೆಯರ ಯಕ್ಷಗಾನಾಸಕ್ತಿಗೆ ಸರಿಯಾಗಿ ಕುಮಾರಯ್ಯ ಹೆಗ್ಗಡೆಯವರ ಸ್ನೇಹ ಬೆಳೆಯಿತು.

1812ರಲ್ಲಿ ಕುಮಾರಯ್ಯ ಹೆಗ್ಗಡೆಯವರು ಧರ್ಮಸ್ಥಳ ಮೇಳವನ್ನು ಮೈಸೂರಿಗೆ ಕರೆದೊಯ್ದರು. ಒಡೆಯರ ಸಮ್ಮುಖದಲ್ಲಿ ಮೇಳದವರ ಆಟ ನಡೆಯಿತು, ಮೇಳದ ಆಟಕ್ಕೆ ಒಡೆಯರು ಮನಸೋತರು, ಮೇಳದವರಿಂದ ವಿವಿಧ ಪ್ರಸಂಗಗಳನ್ನು ಅಭಿನಯಿಸಲು ಹೇಳಿದರು. ಕೊನೆಗೆ ಮೈಸೂರಿನಲ್ಲೇ ಮೇಳದವರನ್ನು ಉಳಿಸಿಕೊಳ್ಳಲು ಹೆಗ್ಗಡೆಯವರೊಂದಿಗೆ ಸಮಾಲೋಚಿಸಿದರು. ಕರಾವಳಿ ಕಲೆ ಮೈಸೂರಲ್ಲಿ ಮೆರೆಯುವುದೆಂದರೆ ಹೆಗ್ಗಡೆಯವರಿಗೆ ಸಂತೋಷವೇ ಹಾಗಾಗಿ ಧರ್ಮಸ್ಥಳ ಮೇಳ ಮೈಸೂರರಮನೆಯಲ್ಲುಳಿಯಲು ಹೆಗ್ಗಡೆಯವರು ಒಪ್ಪಿದರು. ಒಡೆಯರು ಇದರ ಜ್ಞಾಪಕಾರ್ಥವಾಗಿ ಶ್ರವಣಬೆಳಗೊಳಕ್ಕೆ ಭೂಮಿಯನ್ನೇ ದಾನ ನೀಡಿದರು. ಮೇಳದ ಕಲಾವಿದರು ಬಳಿಕ ಅಳಿಯ ಲಿಂಗರಾಜ ಬರೆದ ಪ್ರಸಂಗಗಳನ್ನಭಿನಯಿಸಿದುದಾಗಿಯೂ ತಿಳಿದು ಬರುತ್ತದೆ. ಹೀಗೆ ಮೈಸೂರು ಅರಸರಿಂದ ಪ್ರೋತ್ಸಾಹ ಪಡೆದ ಮೇಳದಿಂದಾಗಿ ಹೆಗ್ಗಡೆಯವರು ಸ್ಫೂರ್ತಿಗೊಂಡು ಧರ್ಮಸ್ಥಳದಲ್ಲಿ ಸ್ವಂತ ಮೇಳಕ್ಕೆ ಮತ್ತಷ್ಟು ಬೆಂಬಲ ನೀಡಿದರು.

5. ಇಮ್ಮಡಿ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ
••••••••••••••••••••••••••••••••••••••••••••••••••

ಕ್ರಿ. ಶ. 1849ರಲ್ಲಿ ಪಟ್ಟಕ್ಕೆ ಬಂದ ಇಮ್ಮಡಿ ಮಂಜಯ್ಯ ಹೆಗ್ಗಡೆಯವರು ಕಲಾ ಪ್ರೇಮಿಗಳಾಗಿದ್ದುದರಿಂದ ಮೇಳಕ್ಕೆ ಪ್ರೋತ್ಸಾಹ ಕೊಡುವುದನ್ನೇ ಹೆಚ್ಚಿಸಿದರು, ಇವರ ಕಾಲದಲ್ಲೂ ಮೇಳ ಮತ್ತೊಮ್ಮೆ ಮೈಸೂರಿಗೆ ಭೇಟಿ ಕೊಡುವ ಪ್ರಸಂಗ ಬಂತು. 12-11-1867ರಲ್ಲಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಮಂಜಯ್ಯ ಹೆಗ್ಗಡೆಯವರಿಗೆ ಮೇಳ ಕಳುಹಿಸುವಂತೆ ಈ ರೀತಿ ಪತ್ರ ಬರೆದರು;

6.ಕೃಷ್ಣರಾಜ ಒಡೆಯರವರು
••••••••••••••••••••••••••••••

ಪ್ರಭವ ಸಂವತ್ಸರದ ಕಾರ್ತಿಕ ಬ| ೧ ಬುಧವಾರದಲ್ಲು ಶ್ರೀಮತು|| ಧರ್ಮಸ್ಥಳದ ಮಂಜೆ ಹೆಗ್ಗಡಿಗಳಿಗೆ ಬರೆಸಿ ಕಳಯಿಸಿದ ನಿರೂಪ ಅದಾಗಿ ಯಿ ನಿದ್ದುಕ್ಕೆ ಯಲ್ಲಿ ಸಪರಿವಾರವಾಗಿ ನಾವು ಕ್ಷೇಮದಲ್ಲಿ ಯಿದ್ದೇವೆ. ಅಲ್ಲಿ ರವಂಥಾ ಸರ್ವರು ಸಹಾ ನಿಂದ ಕ್ಷೇಮಕ್ಕೆ ಆಗಿಂದಾಗ್ಗೆ ಅರ್ಜಿ ಬರೆದು ಕಳಯಿಸುತ್ತಾ ಬರುವದು. ಸಾಂಪ್ರತಾ ನಿಂವರಿ ತಂದೆ ಕುಮಾರ ಹೆಗ್ಗಡೀರು ಇದ್ದಾಗ ಅವರು ಇಲ್ಲಿಗೆ ಬಂದು ನಂದು ಭೇಟಿ ತೆಗೆದುಕೊಂಡು ಅಲ್ಲಿಂದಾ ಮಾನ ಮರ್ಯಾದೆ ಯಂನ ಪಡೆದವರಾದ್ದರಿಂದ ನೀವು ಯಾವಾಗಲೂ ನಂಮ ಸಂಸ್ಥಾನಕ್ಕೆ ಸೇರಿದಂಥಾ ವರೆ ಸರಿ – ನೀವು ನಿಂವರ ಯಜಮಾನರ ಹಾಗೆ ನಿರಂತರದಲ್ಲು ಮಂಜುನಾಥ ದೇವರ ಪೂಜೆಯಲ್ಲ ದೇವ ಬ್ರಾಹ್ಮಣ ಸೇವೆಯಲ್ಲೂ ಆಸಕ್ಷರಾಗಿ ವಿಹಿತ ವೃತ್ತಿಯಲ್ಲಿ ರುವದನು ವೇದ ಏಕಾಂತಾಚಾರ ಕಥೆಯಿಂದಾ ಕೇಳಿ ನಮಿಗೆ ಬಹಳ ಸಂತೋಷ ವಾಯಿತಂ, ನಿವಿಂಗೆ ಉಡುಗೊರೆಯಾಗಿ ವಂದು ಕಲಾಬತಶಾಲ ಜೋಡಿಯನು ಎಕಾಂತಾಚಾರ್ರ, ಕೈಲಿ, ಅಪ್ಪಣೆಕೊಟ್ಟು ಕಳಶಿಯದೆ. ನೀವು ಅದನ್ನು ಸ್ವೀಕರಿಸಬೇಕು. ನಮಿಗೆ ನಿಂಮಂನು ನೊಡಬೇಕೆಂಬ ಕುತೂಹಲ ಯಿರುವದ್ದರಿಂದ ಅವಶ್ಯಕವಾಗಿ ವಂದಾವರ್ತಿ ನೀವು ಯಲ್ಲಿಗೆ ಬಂದು ನಮಿಗೆ ಭೇಟಿ ಕೊಟ್ಟು ಸಂತೋಷ ಪಡಿಸಬೇಕು. ಅಂಗೀರಸ ಸಂವತ್ಸರದಲ್ಲಿ ನಿಂದ ಯಜಮಾನರ ಕಡೆಯಿಂದಾ ದಶಾವತಾರದ ಆಟದವರು ಕೆಲವರು ಯಿಲ್ಲಿಗೆ ಬಂದು ಯಲ್ಲಿ ನಿಂತು ಸಂಸಾರಿಗಳಾಗಿ ಅವರೆಲ್ಲರಿಗೂ ನಂಮಲ್ಲಿ ಸಂಬಳ ಯಿನಾಮು ಮುಂತಾದ್ದು ಸಲ್ಲುತ್ತಾ ಭಾಗವತದ
ಆಟ ನಡೆಯುತ್ತಾ ಇತ್ತು. ಯೋಗ ಆ ಪೈಕಿ ಬಹಂ ಜನಗಳು ನಷ್ಟರಾಗಿ ಆಟ ಜನ ಸಾಲದೆ ಯಿರವುದರಿಂದಾ ಆ ಬಗ್ಗೆ ಯಲ್ಲಿ ದಶಾವತಾರ ಆಟದ ಗೊತ್ತುಗನಾದ ಶೇಷಪ್ಪನು ಅಲ್ಲಿಗೆ ಕಳುಯಿಶಿಯಿದೆ. ಆ ಪ್ರಾಂತದಲ್ಲಿ ನೀವು ವಿಚಾರಿಸಿ ಭಾಗವತ ಮುಂತಾದ್ದನು ವೋದಿ ಕಥಾಪ್ರಸಂಗವನ್ನು ಹೇಳತಕ್ಕದ್ದಕ್ಕೆ ಬುದ್ದಿವಂತ ನಾದವನು ವಬ್ಬ – ರಾಕ್ಷಸವೇಷ ಮುಂತಾದ್ದಂಹನು ಹಾಕತಕ್ಕಂತವರು ನಾಲ್ಕು ಜನ ಉಭಯಂ ಐದು ಜನವಂನು ಕಳುಹಿಶಿ ಕೊಟ್ಟಲ್ಲಿ, ಅವರಿಗೆ ಸಂಬಳ ಮುಂತಾದ್ದಂನು ಮಾಡಿಸಿ ಕೊಡುತ್ತಾ ಇದೆ. ನಿಮಿಗೆ ಯೀ ನಿರೂಪವು ಕಲಾಬತಶಾ, ಜೋಡಿ ಸಹಾ ಬಂದು ತಲಪಿದ್ದಕ್ಕೂ ನೀವು ಕ್ಷೇಮದಲ್ಲಿಯಿರೋ ಬಗ್ಗೆ ಸಹಾ ಅರ್ಜಿ ಬರೆದು ಕಳುಹಿಸುವದು, ವರಕುಂಸಾನ್ ೧೮೬೭ನೇ ನವಂಬರ್ ತಾರಿಖು ೧೨ರಲ್ಲೂ ಬಿತ್ತು ನಂಜಪ್ಪ ಶಪಾ ಹಜೂರು ಪುರನೂರು
ರುಜು: ಶ್ರೀ ಕೃಷ್ಣ

ಹೆಗ್ಗಡೆಯವರು ಇದಕ್ಕೆ ತಕ್ಕ ಏರ್ಪಾಡು ಮಾಡಿದರು. ಹೀಗೆ ಧರ್ಮಸ್ಥಳ ಮೇಳದ ಖ್ಯಾತಿ ಮೈಸೂರಿನಲ್ಲಿ ಶಾಶ್ವತವಾಗಿ ಉಳಿದುದು ಕಂಡು ಬರುತ್ತದೆ. ಮೇಳದ ಆಟ ಅನೇಕ ಕಡೆಗಳಲ್ಲಿ ನಡೆಯಲು ಹೆಗ್ಗಡೆಯವರು ಏರ್ಪಾಟು ಮಾಡಿದರು, ಮೇಳದ ಕಲಾವಿದರಿಗೆ ಗೌರವ ಸನ್ಮಾನಗಳನ್ನಿತ್ತುದಾಗಿಯೂ ತಿಳಿದು ಬರುತ್ತದೆ.

ಚಂದಯ್ಯ ಹೆಗ್ಗಡೆಯವರು (1897-1918) ಯಕ್ಷಗಾನಕ್ಕೆ ಪ್ರೋತ್ಸಾಹ ವನ್ನಿತ್ತು ಮೇಳದ ಆಟಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಇವರ ಕಾಲದಲ್ಲಿ ಮೇಳದ ಬೆಳವಣಿಗೆಯ ದೃಷ್ಟಿಯಿಂದ ಅಂತಹ ಮಹತ್ವದ ಬದಲಾವಣೆಗಳೇನೂ ಕಂಡು ಬರುವುದಿಲ್ಲ.

7. ಮಂಜಯ್ಯ ಹೆಗ್ಗಡೆಯವರ ಪ್ರೋತ್ಸಾಹ
••••••••••••••••••••••••••••••••••••••••••••••

ಧರ್ಮಸ್ಥಳದ ಇತಿಹಾಸದಲ್ಲಿ ಇಷ್ಟು ಸುಧಾರಣೆಗಳನ್ನು ಮಾಡಿ ಪ್ರಸಿದ್ದರಾದ ಡಿ. ಮಂಜಯ್ಯ ಹೆಗ್ಗಡೆಯವರು ಕ್ರಿ. ಶ. 1918ರಲ್ಲಿ ಪಟ್ಟವೇರಿದರು. ಚಿತ್ರಕಲೆ, ಸಾಹಿತ್ಯ ಸಂಗೀತಗಳಲ್ಲಿ ಆಸಕ್ತಿ ಹೊಂದಿದ ಮಂಜಯ್ಯ ಹೆಗ್ಗಡೆಯವರು ಧರ್ಮಸ್ಥಳ ಯಕ್ಷಗಾನ ಮೇಳದ ಬದಲಾವಣೆಗೆ ಕಾರಣರಾದರು. ಇವರ ಆಸಕ್ತಿಯಿಂದಾಗಿ ಮೇಳ ಪೂರ್ಣ ಪ್ರಮಾಣದ ವ್ಯವಸಾಯಿ ಮೇಳವಾಗಿ ತಿರುಗಾಟ ಪ್ರಾರಂಭಿಸಿತು.

ಹೀಗೆ ಮೇಳದ ತಿರುಗಾಟ ಪ್ರಾರಂಭಕ್ಕೆ ಸಂಬಂಧಿಸಿದಂತೆ ಜನಜನಿತ ಕಥೆಯೊಂದಿದೆ. ಮೇಳದಲ್ಲಿ ‘ಗಣಪತಿ’ ವಿಗ್ರಹಕ್ಕೆ ಪೂಜೆಯೊಂದು ಸದಾ ಸಲ್ಲುತ್ತಿತ್ತು.
ಮೇಳ ಮೈಸೂರಿಗೆ ಭೇಟಿ ನೀಡಿದಾಗ ‘ಗಣಪತಿ’ಯು ಅಲ್ಲಿಯೇ ಉಳಿಯಿತು. ಮೇಳದಿಂದ ಕೈತಪ್ಪಿದ ಗಣಪತಿಗೆ ಮೈಸೂರಿನಲ್ಲಿ ಸರಿಯಾಗಲಿಲ್ಲ. ಆತ ಕೂಡಲೇ ತನ್ನ ಪ್ರಭಾವ ತೋರಿಸತೊಡಗಿದ. ವಂಂಜಯ್ಯ ಹೆಗ್ಗಡೆಯವರಿಗೆ ಕನಸಿನಲ್ಲಿ ಬಂದು ಕಾಡ ತೊಡಗಿದ. ಕೊನೆಗೆ ಹೆಗ್ಗಡೆಯವರು ಮೇಳ ಪ್ರಾರಂಭಿಸಿ ಗಣಪತಿಗೆ ಪೂಜೆ ಸಲ್ಲಿಸುವುದಾಗಿ ನಿರ್ಧರಿಸಿದರು. ಮತ್ತೊಂದು ಗಣಪತಿ ವಿಗ್ರಹ ಮಾಡಿಸಿ ‘ನೆನೆಯಿರೋ ಜನರೆಲ್ಲ ಗಜಮುಖನ’ ಎಂದು ಭಾಗವತರಿಂದ ಹಾಡಿಸಿ ಮೇಳ ತಿರುಗಾಟ ಮಾಡಿಸಿದ ಈ ಕಥೆಯ ಸತ್ಯಾ ಸತ್ಯತೆಗಳೇನೇ ಇದ್ದರೂ ಮಂಜಯ್ಯ ಹೆಗ್ಗಡೆಯವರು ಮೇಳ ಮಾಡಲು ತೀವ್ರಾ ಸಕ್ತರಾಗಿದ್ದರೆಂಬುದು ಸ್ಪಷ್ಟ.

8. ಮೇಳ ತಿರುಗಾಟ
•••••••••••••••••••••

1930ರಲ್ಲಿ ಧರ್ಮಸ್ಥಳ ಮೇಳ ತನ್ನ ಮೊದಲ ತಿರುಗಾಟ ಪ್ರಾರಂಭಿಸಿತು. ತೆಂಕುತಿಟ್ಟಿನಲ್ಲಿ ಆಗ ಕೂಡ್ಲು, ಇಚ್ಲಂಪಾಡಿ ಮುಂತಾದ ಮೇಳಗಳು ಜನಪ್ರಿಯ ವಾಗಿದ್ದವು. ಹೊಸ ಮೇಳವೊಂದರ ತಿರುಗಾಟ ಮಾಡಿಸುವುದು ಸಾಮಾನ್ಯ ಮಾತಲ್ಲ. ಎಲ್ಲಾ ಬಯಲಾಟ ನಡೆಯುತ್ತಿದ್ದ ಆ ಕಾಲದಲ್ಲಿ ಊರ ಜನರ ಪ್ರೋತ್ಸಾಹದಿಂದ ಆಟ ಪಡೆಯಬೇಕಾಗಿದ್ದರೆ ಮೇಳವನ್ನು ನಡೆಸುವವ ಸಾಕಷ್ಟು ಕಷ್ಟ ಪಡಬೇಕಾಗಿತ್ತು. ಜಾರಿಗೆ ಬೈಲು ದೇವರಾಜ ಹೆಗ್ಡೆಯವರು ಮೇಳದ ತಿರುಗಾಟವನ್ನು ವಹಿಸಿಕೊಂಡರು. ಅಗರಿ ಶ್ರೀನಿವಾಸ ಭಾಗವತರು, ರಾಮಕೃಷ್ಣ ಭಟ್, ಗೋಪಾಲಕೃಷ್ಣ ಜೋಶಿ ಮುಂತಾದ ಕಲಾವಿದರು ಮೇಳದಲ್ಲಿದ್ದರು. ಮಹಾಭಾರತ, ರಾಮಾಯಣ ಮುಂತಾದ ಪ್ರಸಂಗಗಳನ್ನೇ ಮೇಳದವರು ಆಟವಾಡುತ್ತಿದ್ದರು.
ಹೊಸ ಮೇಳವನ್ನು ಜನರು ಸ್ವಾಗತಿಸಬೇಕಾಗಿದ್ದರೆ ಕಲಾವಿದರ ಪ್ರತಿಭೆಯು ಮಿಂಚಬೇಕಾಗಿತ್ತು. ಆಗರಿಯವರಂತಹ ಸಮರ್ಥ ಭಾಗವತರ ಪ್ರಸಂಗ ಪ್ರದರ್ಶನದಲ್ಲಿ ವಿಶೇಷ ತಂತ್ರಗಳನ್ನಳವಡಿಸಿದ್ದರು. ಗೋಪಾಲಕೃಷ್ಣ ಜೋಶಿಯವರಂತ ಯುವ ಹಾಸ್ಯಗಾರರು ಹೊಸ ರೀತಿಯ ಕಾಲ್ಪನಿಕ ಹಾಸ್ಯಗಳನ್ನು ಯಕ್ಷಗಾನ ರಂಗಕ್ಕೆ ತಂದರು; ಮಂಜಯ್ಯ ಹೆಗ್ಗಡೆಯವರು ಮೇಳ ತಿರುಗಾಟಕ್ಕೆ ಆರ್ಥಿಕ ಸಹಾಯ ಮಾಡಿದರು.
ನಂತರ ಅನೇಕರು ಮೇಳ ವಹಿಸಿಕೊಳ್ಳಲು ಮುಂದೆ ಬಂದರು.

*ನಿಡ್ಲೆ ಗುರಿಕಾರ್ ಕೇಶವ ಭಾಗವತರು:*

ಸ್ವತಃ ಭಾಗವತರಾದ ಕೇಶವ ಭಾಗವತರು ಸುಮಾರು ಮೂರು ವರ್ಷಗಳ ಕಾಲ ಮೇಳವನ್ನು ನಡೆಸಿದರು. ಶಂಭಟ್ಟ ಭಾಗವತರೂ ಈ ಕಾಲದಲ್ಲಿ ಸಹಾಯ
ಮಾಡಿದ್ದರು. ವಾಯಮಾಡಂಗಾಯಿ ವೆಂಕಪ್ಪ ಭಟ್ಟ, ಮಳಿಯಾಲ ಸುಬ್ಬಣ್ಣ ಭಟ್ಟ ಒಬಯ್ಯ, ಹಂದಿ ತಿಮ್ಮಪ್ಪ, ಗುಂಡ, ಚೆಲ್ಯ ಶಂಕರ, ಚೆಕ್ಕೆಮನೆ ಶಂಕರ ಭಟ್ಟ, ಅಪ್ಪಯ್ಯ, ಕುಟ್ಟಿ ಮಾಲಿಂಗ ಮುಂತಾದ ಕಲಾವಿದರು ಇವರ ಕಾಲದಲ್ಲಿದ್ದರು

*ಕುಟ್ಟಿ ಮಾಲಿಂಗ ಗಟ್ಟಿ ಮುತ್ತಯ್ಯ:*

ಆ ಕಾಲದ ಪ್ರಸಿದ್ಧ ವೇಷಧಾರಿಗಳಾದ ಕುಟ್ಟಿ ಮಾಲಿಂಗ ಮತ್ತು ಗಟ್ಟಿ ಮುತ್ತಯ್ಯ ಧರ್ಮಸ್ಥಳ ಮೇಳದ ತಿರುಗಾಟ ವಹಿಸಿಕೊಂಡು ಮೇಳದ ಪ್ರಚಾರಕ್ಕೆ ಶ್ರಮಿಸಿದರು. ಇವರ ಕಾಲದಲ್ಲಿ ದಿವಾಣ ಪುಟ್ಟಣ್ಣ, ಕಿಟ್ಟಣ್ಣ ಭಾಗವತ, ನಿಟ್ಟೆ ಕೋಟಿ ಶಂಕರ, ಸುಬ್ಬಯ್ಯ ಶೆಟ್ಟಿ, ಮಂಜಣ್ಣ, ಈಶ್ವರ ಭಟ್ ವಂಂತಾದ ಕಲಾವಿದರಿದ್ದರು. ಕಲಾವಿದರು ಸ್ವತಃ ಶ್ರದ್ಧೆಯಿಂದ ದುಡಿಯಲು ಹೆಗ್ಗಡೆಯವರು ಕಲಾವಿದರಿಗೇ ಮೇಳ ವಹಿಸಿ ಕೊಡಲು ಮುಂದಾಗಿದ್ದರು.

9. ಪುತ್ತಿಗೆ ರಾಮಕೃಷ್ಣ ಜೋಯಿಸರು
•••••••••••••••••••••••••••••••••••••

ಯಕ್ಷಗಾನದ ಪ್ರಸಿದ್ಧ ಭಾಗವತರುಗಳಲ್ಲಿ ಪುತ್ತಿಗೆ ರಾಮಕೃಷ್ಣ ಜೋಯಿಸರಿಗೆ ಅಗ್ರಸ್ಥಾನ.ಕೂಡ್ಲು ದಿ. ಸುಬ್ರಾಯ ಶ್ಯಾನುಭೋಗರಲ್ಲಿ ಭಾಗವತಿಕೆಯನ್ನು ಕಲಿತ ಜೋಯಿಸರು ಕೂಡ ಮೇಳವನ್ನು ಕೆಲವು ವರ್ಷಗಳ ಕಾಲ ನಡೆಸಿ ಅನುಭವ ಪಡೆದರು. ಮಂಜಯ್ಯ ಹೆಗ್ಗಡೆಯವರು ಕಲಾವಿದರಿಗೆ ಪ್ರೋತ್ಸಾಹ ಕೊಡುವುದನ್ನರಿತ
ಜೋಯಿಸರು ಧರ್ಮಸ್ಥಳ ಮೇಳ ವಹಿಸಿಕೊಳ್ಳಲು ಮುಂದಾದರು. ಹೆಗ್ಗಡೆಯವರ ಪ್ರೋತ್ಸಾಹದಿಂದ ಮೂರು ವರ್ಷಗಳ ಕಾಲ ಮೇಳವನ್ನು ನಡೆಸಿದರು.
ಜೋಯಿಸರ ಕಾಲದಲ್ಲಿ ಧರ್ಮಸ್ಥಳ ಮೇಳ ಮತ್ತಷ್ಟು ಪ್ರಖ್ಯಾತಿಗೆ ಬಂತು. ಜೋಡಾಟಗಳು ಅಲ್ಲಲ್ಲಿ ನಡೆಯುತ್ತಿದ್ದರೂ ಮಂಜಯ್ಯ ಹೆಗ್ಗಡೆಯವರು ಜೋಡಾ ಗಳಲ್ಲಿ ಆಸಕ್ತರಾಗಿರಲಿಲ್ಲ. ಜೋಡಾಟಗಳಿಂದ ಜಗಳವಾಗುದನ್ನರಿತ ಹೆಗ್ಗಡೆಯುವರು ಜೋಡಾಟಗಳಲ್ಲಿ ಮೇಳ ಭಾಗವಹಿಸುವುದನ್ನು ಬೆಂಬಲಿಸಲಿಲ್ಲ.
ಜೋಯಿಸರು ಪುರಾಣದ ಅನೇಕ ಹೊಸ ಪ್ರಸಂಗಗಳನ್ನು ರಂಗಕ್ಕೆ ತಂದರು. ದೇವಿ ಮಹಾತ್ಮೆ ಈ ಕಾಲದಲ್ಲಿ ಜನಪ್ರಿಯವಾಯಿತು. ಕೊಂಡಕುಳಿ ರಾಮ ಭಟ್ಟ ದೊಡ್ಡ ತಿಮ್ಮಪ್ಪ, ಪುತ್ತೂರು ಕೃಷ್ಣ ಭಟ್, ಗಣಪತಿ ಭಟ್, ಮಧೂರು ನಾರಾಯಣ ಹಾಸ್ಯಗಾರ, ಕುಂಞಂಬು, ಪಡ್ರೆ ಚಂದು ಮುಂತಾದ ಕಲಾವಿದರು ಈ ಕಾಲದಲ್ಲಿ ಮೇಳದ ಖ್ಯಾತಿಗೆ ಕಾರಣರಾದವರು.
10.ಬೆಳ್ತಂಗಡಿಯ ಸೋಮನಾಥಯ್ಯ
•••••••••••••••••••••••••••••••••••••••

ಬೆಳ್ತಂಗಡಿ ಪಟೇಲ ಸೋಮನಾಥಯ್ಯನವರು ಮೇಳವನ್ನು ಎರಡು ವರ್ಷ ಗಳ ಕಾಲ ನಡೆಸಿದರು. ಇವರ ಕಾಲದಲ್ಲೂ ಜೋಯಿಸರು ಭಾಗವತರಾಗಿದ್ದರು, ಮುಂದೆ ಖ್ಯಾತಿ ಪಡೆದ, ಕುರಿಯ ವಿಠಲ ಶಾಸ್ತ್ರಿಗಳು ಈ ಕಾಲದಲ್ಲಿ ಮೇಳದಲ್ಲಿ ತರಬೇತಿ ಪಡೆಯುತ್ತಿದ್ದರು.

ಸೋಮನಾಥಯ್ಯನವರ ಕಾಲದಲ್ಲಿ ವೇಷಭೂಷಣದ ಸುಧಾರಣೆಯಾಗಿ ಮಣಿ ಸಾಮಾನುಗಳು ಮೇಳಕ್ಕೆ ಬಂದುವು. ಯಕ್ಷಗಾನ ಬೆಳವಣಿಗೆಯ ಲಕ್ಷಣವಾಗಿದ್ದ ನೂತನ ವೇಷಭೂಷಣ ಕ್ರಮಗಳು ಮೇಳವನ್ನೇ ಜನಪ್ರಿಯವಾಗಿಸಿದುವು. ಈ ಕಾಲದಲ್ಲಿ ಜೋಡಾಟಗಳಲ್ಲಿ ಮೇಳ ಜನಮೆಚ್ಚುಗೆ ಪಡೆಯಿತು.

11. ಕುರಿಯ ವಿಠಲ ಶಾಸ್ತ್ರಿಗಳು
••••••••••••••••••••••••••••••••••••

ಧರ್ಮಸ್ಥಳ ಮೇಳ ಅನೇಕ ಕಲಾವಿದರ ಪ್ರಸಿದ್ಧಿಗೆ ಕಾರಣವಾಯಿತೆಂಬುದನ್ನು ಮರೆಯುವಂತಿಲ್ಲ. ಯಕ್ಷಪ್ರಪಂಚದ ಮನೆ ಮಾತಾಗಿರುವ ಕುರಿಯ ವಿಠಲ ಶಾಸ್ತ್ರಿ ಗಳು ಧರ್ಮಸ್ಥಳ ಮೇಳದ ದೊಡ್ಡ ಕೊಡುಗೆ, ಕೆಲವು ಮೇಳಗಳಲ್ಲಿ ಅನುಭವ ಪಡೆದ ವಿಠಲ ಶಾಸ್ತ್ರಿಗಳು ಅನೇಕ ವರ್ಷಗಳ ಕಾಲ ಮೇಳವನ್ನು ವಹಿಸಿಕೊಂಡರು. ಇವರ ತಮ್ಮ ರಾಮ ಶಾಸ್ತ್ರಿಗಳು ಇವರಿಗೆ ಸಹಾಯಕರಾಗಿದ್ದರು.

ಶಾಸ್ತ್ರಿಗಳ ಕಾಲದಲ್ಲಿ ಮೇಳದಲ್ಲಿ ಅನೇಕ ಬದಲಾವಣೆಗಳಾದವು. ಅವುಗಳನ್ನು ಹೀಗೆ ಸಂಗ್ರಹಿಸಬಹುದು:

1. ಅದುವರೆಗೆ ಮೇಳ ಉದ್ಯಾವರ ಹೊಳೆಯಿಂದೀಚೆ ದಕ್ಷಿಣ ಭಾಗದಲ್ಲಿ (ತೆಂಕಿನಲ್ಲಿ) ಜನಪ್ರಿಯವಾಗಿತ್ತು, ತೆಂಕು ಬಡಗು ಪ್ರದೇಶದಲ್ಲಿ ಜನಪ್ರಿಯವಾಗಲಾರದು ಎಂಬ ಮಾತನ್ನು ಸುಳ್ಳಾಗಿಸಿ ಬಡಗು ಪ್ರದೇಶದಲ್ಲಿ ಶಾಸ್ತ್ರಿಗಳು ಮೇಳವನ್ನು ಜನಪ್ರಿಯವಾಗಿಸಿದರು.

2. ಬ್ರಹ್ಮ ಕಪಾಲ, ಭಸ್ಮಾಸುರ, ದಕ್ಷಯಜ್ಞ ಮುಂತಾದ ನೂತನ ಪ್ರಸಂಗಗಳು ಮೇಳವನ್ನು ಪ್ರಸಿದ್ದಿಗೆ ಕರೆದೊಯ್ದವು

3. ಶಾಸ್ತ್ರಿ ಹಾಗೂ ಇತರ ಕಲಾವಿದರು ಕಲಾ ಪ್ರತಿಭೆಯಿಂದ ಯಕ್ಷಗಾನ ರಂಗದಲ್ಲಿ ನಾಟಕೀಯ ಅಂಶಗಳನ್ನೂ ಸೇರಿಸಿ ಮೇಳದ ಆಟಗಳು ವಿಶೇಷ ಗುಣ ಲಕ್ಷಣಗಳಿಂದ ರಂಜನೀಯವಾಗುವಂತೆ ಮಾಡಿದರು
4.ಪ್ರಥಮವಾಗಿಮೇಳ ‘ಟೆಂಟ್’ ಮೇಳವಾಯಿತು ಈ ಕಾಲದಲ್ಲಿ
ಕುಂಡಾವು, ಕೂಡ್ಲು ಮುಂತಾದ ಟೆಂಟ್ ಮೇಳಗಳೊಂದಿಗೆ ಧರ್ಮಸ್ಥಳ ಮೇಳ ಸ್ಪರ್ಧಿಸಿ ಅರ್ಥಿಕವಾಗಿ ಯಶಸ್ವಿಯಾಯಿತು.
ಅಗರಿ ಶ್ರೀನಿವಾಸ ಭಾಗವತರು,ಕುದ್ರೆಕೋಡ್ಲು ರಾಮ ಭಟ್,ಬಲ್ಲಾಳರು ನೆಡ್ಲೆ ನರಸಿಂಹಭಟ್ಟರು ಮು೦ತಾದವರ ಹಿಮ್ಮೇಳ ಮೇಳದ ಯಶಸ್ವಿಗೆ ಕಾರಣವಾಗಿತ್ತು.

ಮಲ್ಪೆ ಶಂಕರ ನಾರಾಯಣ ಸಾಮಗ, ಕರ್ಗಲ್ಲು ಸುಬ್ಬಣ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ದೇರಣ್ಣ, ಗೋಪಾಲಕೃಷ್ಣ ಕುರುಪ್, ಬಣ್ಣದ ಮಾಲಿಂಗ ಪುತ್ತೂರು ನಾರಾಯಣ ಹಾಸ್ಯಗಾರ ಮುಂತಾದವರ ಕಲಾ ಪ್ರತಿಭೆಯು ಈ ಕಾಲದಲ್ಲಿ ಪ್ರಸಿದ್ಧಿಗೆ ಬಂತು.

ಮಂಜಯ್ಯ ಹೆಗ್ಗಡೆಯವರ ಆರ್ಥಿಕ ಸಹಾಯವಿಲ್ಲದಿದ್ದರೆ ಮೇಳ “ಟೆಂಟ್ ಮೇಳವಾಗುತ್ತಿರಲಿಲ್ಲ. ಟೆಂಟ್ ಮೇಳವಾದಾಗ ಪ್ರಸಿದ್ಧ ಕಲಾವಿದರ ಪ್ರತಿಭೆಯೂ ಕೂಡಿ ಬಂತು. ಒಟ್ಟಿನಲ್ಲಿ ಯಕ್ಷಗಾನ ರಂಗದಲ್ಲಿ ಮೇಳ ಪ್ರಸಿದ್ದಿಯ ತುತ್ತ ತುದಿಗೇರತೊಡಗಿತು

12. ರತ್ನವರ್ಮ ಹೆಗ್ಗಡೆಯವರ ಕಾಲ
••••••••••••••••••••••••••••••••••••••

1955ರಲ್ಲಿ ಪಟ್ಟಕ್ಕೆ ಬಂದ ಡಿ. ರತ್ನವರ್ಮ ಹೆಗ್ಗಡೆಯವರು ಮೇಳದಲ್ಲಿ ಮತ್ತಷ್ಟು ಆಸಕ್ತಿ ತೋರಿಸಿದರು.ಮೇಳವನ್ನು ಬೇರೆಯವರಿಗೆ ವಹಿಸಿಕೊಡುವ ಬದಲು ಸ್ವತಃ ಕ್ಷೇತ್ರದಿಂದಲೇ ಮೇಳ ನಡೆಸುವ ನಿರ್ಧಾರ ಮಾಡಿದರು. ಇದು ಮೇಳದ ಸುಧಾರಣೆಗೆ ಮತ್ತು ಭದ್ರತೆ ಕಾರಣವಾಯಿತು.

ಕಡತೋಕ ಮಂಜುನಾಥ ಭಾಗವತ, ಬಲ್ಲಾಳರು, ಶೇಣಿ ಗೋಪಾಲಕೃಷ್ಣ ಭಟ್, ಸಾಮಗರು, ಪಾತಾಳ ವೆಂಕಟ್ರಮಣ ಭಟ್ ಗೋವಿಂದ ಭಟ್, ಮಾಲಿಂಗ, ಗೋಪಾಲಕೃಷ್ಣ ಜೋಶಿ, ನಾರಾಯಣ ಭಟ್, ಶ್ರೀಧರ ಭಂಡಾರಿ ಮುಂತಾದ ಕಲಾ ವಿದರು ಮೇಳದಲ್ಲಿ ಸೇವೆ ಸಲ್ಲಿಸಿದರು. ಸ್ಟೀಲಿನ ರಂಗಮಂಟಪ, ಝಗಝಗಿಸುವ ವೇಷಭೂಷಣಗಳು ಮೇಳಕ್ಕೆ ವಿಶೇಷ ಪ್ರಚಾರ ದೊರಕಿಸಿಕೊಟ್ಟವು,

ಈ ಕಾಲದಲ್ಲಿ ಮೇಳದ ಮನೇಜರರಾದ ನಾರಾಯಣ ಕಾಮತರ ಸೇವೆಯನ್ನು ಸ್ಮರಿಸತಕ್ಕದ್ದೇ ಮೇಳ ನಡೆಸುವುದು ಒಂದು ಕಲೆ, ಕಲಾವಿದರನ್ನು ಆಟವನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದರೆ, ಕಲಾಪ್ರಜ್ಞೆ ಕಾಮತದಲ್ಲಿವೆಯೆಂಬುದನ್ನು ತೋರಿಸುತ್ತಿದೆ.

ಆರ್ಥಿಕವಾಗಿಯೂ ಮೇಳ ಲಾಭದಾಯಕವಾಗಿ ಪರಿಣಮಿಸಿದುದು ಮೇಳದ ಸುಧಾರಣೆಗೆ ರತ್ನವರ್ಮ ಹೆಗ್ಗಡೆಯವರು ಮನ ಮಾಡಲು ಕಾರಣವಾಯಿತು. ತೆಂಕುತಿಟ್ಟಿನ ಮೇಳಗಳಲ್ಲಿ ಈ ಅವಧಿಯಲ್ಲಿ ಧರ್ಮಸ್ಥಳ ಮೇಳ ಉನ್ನತ ಸ್ಥಾನ ಪಡೆಯಿತು.
13. ವೀರೇಂದ್ರ ಹೆಗ್ಗಡೆಯವರ ಆಸಕ್ತಿ
•••••••••••••••••••••••••••••••••••••••

1968ರಲ್ಲಿ ಪಟ್ಟಕ್ಕೆ ಬಂದ ವೀರೇಂದ್ರ ಹೆಗ್ಗಡೆಯವರು ಮೇಳದಲ್ಲಿ ವಿಶೇಷ
ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇವರ ಕಾಲದಲ್ಲಿ ಕಂಡು ಬಂದ ಬೆಳವಣಿಗೆಗಳನ್ನು ಹೀಗೆ ಸಂಗ್ರಹಿಸಬಹುದು

1. ಯಕ್ಷಗಾನ ಪರಂಪರೆಯನ್ನೇ ಉಳಿಸಲು ಪ್ರಯತ್ನಿಸಲಾಗಿದೆ. ಆಧುನಿಕ ವೇಷಭೂಷಣಗಳ ಬದಲಿಗೆ ಮರದ ಸಾಮಾನುಗಳನ್ನು ಬಳಸಿ ಯಕ್ಷಗಾನದ ಹಿಂದಿನ ಕಲಾಪ್ರಜ್ಞೆಯನ್ನೇ ಜನರಲ್ಲಿ ಮೂಡಿಸಲು ಪ್ರಯತ್ನಿಸಲಾಗಿದೆ
2.ಯಕ್ಷಗಾನದಲ್ಲಿ ಹೊಸ ಪ್ರಸಂಗಗಳನ್ನೇ ಬೇರೆ ಮೇಳಗಳು ಆಶ್ರಯಿಸಿರುವಾಗ ಧರ್ಮಸ್ಥಳ ಮೇಳ ಕೇವಲ ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತಿದೆ.
3. ಮೇಳದ ವ್ಯವಸ್ಥೆ ಉತ್ತಮವಾಗಿರಲು ನಾನಾ ಕಾರ್ಯಗಳನ್ನು ಮಾಡ ಲಾಗಿದೆ. ಬಸ್ಸು, ಲಾರಿಗಳ ಮೂಲಕ ಪ್ರಯಾಣ ತೊಂದರೆ ತಪ್ಪಿಸಲಾಗಿದೆ. ಕಲಾವಿದರ ಊಟ, ವಸತಿ ಸೌಕರ್ಯ ಸುಧಾರಿಸುವುದರೊಂದಿಗೆ ಕಲಾವಿದರಿಗೆ ಪ್ರಾವಿಡೆಂಟ್ ಫಂಡ್ ಮುಂತಾದ ಸೌಲಭ್ಯ ಕಲ್ಪಿಸಲಾಗಿದೆ.
4. ಆಸಕ್ತರಿಗೆ ಯಕ್ಷಗಾನ ಕಲಿಯಲು ಧರ್ಮಸ್ಥಳದಲ್ಲಿ ಯಕ್ಷಗಾನ ತರಬೇತಿ ಕೇಂದ್ರದ ವ್ಯವಸ್ಥೆಯಿದೆ. ಇದರಲ್ಲಿ ಕೆ. ಗೋವಿಂದ ಭಟ್, ನೆಡ್ಲೆ ನರಸಿಂಹ ಭಟ್ ಗುರುಗಳಾಗಿದ್ದರು.

ಈಗಿನ ಧರ್ಮಸ್ಥಳ ಮೇಳ ಪ್ರತಿಭಾವಂತ ಕಲಾವಿದರ ಕಲಾಕ್ಷೇತ್ರ, ಕಡತೋಕ ಮಂಜುನಾಥ ಭಾಗವತ, ಕಾರಂತ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ, ಬೈಪಡಿತ್ತಾಯರ ಹಿಮ್ಮೇಳವಿದೆ. ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್, ಪುತ್ತೂರು ನಾರಾಯಣ ಹೆಗ್ಡೆ, ಎಂಪೆ ಕಟ್ಟೆ ರಾಮಯ್ಯ ರೈ, ಕಡಬ ಸಾಂತಪ್ಪ, ಪಾತಾಳ ವೆಂಕಟ್ರಮಣ ಭಟ್, ಕುಂಬ್ಳೆ ಶ್ರೀಧರ ರಾವ್, ಶ್ರೀಧರ ಹೆಬ್ಬಾರ್, ಗೋಪಾಲಕೃಷ್ಣ ಜೋಶಿ, ನಯನ ಕುಮಾರ್ ಮುಂತಾದ ಕಲಾವಿದರಿದ್ದಾರೆ. ಈ
ದಶಕದಲ್ಲಿ ಪ್ರಯೋಗವಾದ ಅನೇಕ ಪ್ರಸಂಗಗಳಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ, ಮಹಾರಥಿ ಕರ್ಣ, ಮಹಾ ಬ್ರಾಹ್ಮಣ, ಉತ್ತಮ ಸೌದಾಮಿನಿ, ಅಮರೇಂದ್ರ ಪದವಿಜಯಿ, ರಾಜಾ ಪರೀಕ್ಷಿತ ಮುಂತಾದವುಗಳು ಹೆಚ್ಚು ಪ್ರಸಿದ್ಧ.

(ಈ ಲೇಖನದಲ್ಲಿ ಬಳಸಲು ಕೆಲವು ಪಡಿಯಚ್ಚುಗಳನ್ನು ನೀಡಿದ ಇವರಿಗೆ ಕೃತಜ್ಞತೆ ಗಳು: ಯುಗಪುರುಷ ಕಿನ್ನಿಗೋಳಿ , ಪೊಳಲಿ ಶಂಕರನಾರಾಯಣ ಶಾಸ್ತ್ರಿ ಸ್ಮಾರಕ ಸಮಿತಿ , ಕರ್ನೂರು ಕೊರಗಪ್ಪ ರೈ ,ಎಂ. ವೆಂಕಟರಾವ್ ,ಕು. ಶಿ. ಹರಿದಾಸ ಭಟ್ಟ )

14.ಮುಕ್ತಾಯ
•••••••••••••••••••

ಧರ್ಮಸ್ಥಳ ಮೇಳದ ಮುಂದಿನ ಭವಿಷ್ಯ ಉಜ್ವಲವಾಗಿದೆಯೆಂಬುದರಲ್ಲಿ ಸಂಶಯವಿಲ್ಲ. ಶ್ರೀ ವೀರೇಂದ್ರ ಹೆಗ್ಗಡೆಯವರ ಸ್ವತಃ ಆಸಕ್ತಿಯಿಂದ ಮೇಳದ ಮೇಲ್ವಿಚಾರಕರಾಗಿರುವುದು ಇದಕ್ಕೆ ಮುಖ್ಯ ಕಾರಣ

ಮೇಳದ ತಿರುಗಾಟ ಪೂರ್ತಿಯ ಆಟಗಳೆಲ್ಲ ಮೊದಲೇ ಕಂಟ್ರಾಕ್ಟ್’ ಆಗಿರು ವುದು ಒಂದು ವಿಶೇಷ. ಮೇಳಕ್ಕೆ ಬೇಡಿಕೆ ಎಷ್ಟಿದೆಯೆಂದರೆ “ಕಂಟ್ರಾಕ್ಟ್ ನಲ್ಲಿ ಸಾಕಷ್ಟು ಸ್ಪರ್ಧೆಯಿದೆ. ಆದರೆ ಈಗ ಒಳ್ಳೆಯ ಉದ್ದೇಶದ ಸಂಘ ಸಂಸ್ಥೆಗಳಿಗೆ ಮಾತ್ರ ಸಹಾಯಾರ್ಥ ಆಟ ನೀಡಲಾಗುತ್ತಿದೆ.
ಕಲಾದೃಷ್ಟಿಯೊಂದಿಗೆ ಭಕ್ತಿಭಾವದಿಂದ ಆಟ ನೋಡುವವರು ಸಾಕಷ್ಟಿದ್ದಾರೆ. ಮೇಳದ ‘ಆಟ’ ಮಾಡಿಸುತ್ತೇವೆಂಬ ಸೇವೆ ಹೇಳಿಕೊಳ್ಳುವವರೊಂದಿಗೆ ಮೇಳದ ಆಟ ನೋಡುತ್ತೇನೆಂಬ ಸೇವೆ ಹೇಳಿಕೊಳ್ಳುವವರು ಇದ್ದಾರೆ.

ಮೇಳದ ‘ಕಾರ್ನಿಕದ ಕಥೆಗಳೂ ಜನಜನಿತ, ಮೇಳದ ‘ಗಣಪತಿಗೆ ಪೂಜೆ ಯಲ್ಲಿ ನಿಷ್ಠೆ ಕಡಿಮೆಯಾದರೆ ಕಲಾವಿದರು ಕಷ್ಟ ಅನುಭವಿಸಬೇಕಾಗುತ್ತದೆ. ಮೇಳದ ಆಟ ಆಡಿಸಿ ತಮ್ಮ ಅನೇಕ ಬಯಕೆಗಳನ್ನು ಪೂರೈಸಿಕೊಂಡವರು ಕೆಲವರಾದರೆ ಮೇಳವನ್ನು ಬಯ್ದು ಭಂಗ ತಂದುಕೊಂಡವರು ಕೆಲವರು. ಧರ್ಮಸ್ಥಳ ದೇವಸ್ಥಾನದಷ್ಟೇ ಮೇಳವೂ ಪವಿತ್ರವಾದುದೆಂಬ ನಂಬಿಕೆ ಜನರಲ್ಲಿದೆ.

ಒಳ್ಳೆಯ ವ್ಯವಸ್ಥೆಯೊಂದಿಗೆ ಯೋಗ್ಯ ಕಲಾಪ್ರದರ್ಶನ ಮಾಡುತ್ತಿರುವ ಧರ್ಮಸ್ಥಳ ಮೇಳ ನಿಜಕ್ಕೂ ಯಕ್ಷಗಾನ ಕಲೆಯ ಬಹುದೊಡ್ಡ ಸಂಪತ್ತು.

*ಲೇಖನ: ಶ್ರೀ ಬಾ.ಸಾಮಗ*

(ಸಂಗ್ರಹ : ಶ್ರೀ ಗಿರೀಶ್ ಹೆಗ್ಡೆ ಮೇನೇಜರ್ ಧರ್ಮಸ್ಥಳ ಮೇಳ)

ಹರಿಕೆ ಸೇವೆ ಬಯಲಾಟಗಳ ಸಂಖ್ಯೆ ಹೆಚ್ಚಾದಾಗ ಖಾವಂದರು ಮೇಳವನ್ನು ಸಂಪೂರ್ಣ ಬಯಲಾಟದ ಮೇಳವಾಗಿ ಪರಿವರ್ತಿಸುತ್ತಾರೆ ಹೀಗೆ 1999 ರಿಂದ ಧರ್ಮಸ್ಥಳ ಮೇಳವು ಸಂಪೂರ್ಣ ಬಯಲಾಟ ಮೇಳವಾಗಿದೆ .ಈ ಸಂದರ್ಭದಲ್ಲೂ ಪ್ರೇಕ್ಷಕರಿಗೆ ತೊಂದರೆಯಾಗದಂತೆ ಟೆಂಟ್ ಹಾಕುವ ವ್ಯವಸ್ಥೆಯೂ ಇತ್ತು.
ಖಾವಂದರ ದೂರದರ್ಶಿತ್ವದ ಪರಿಣಾಮವಾಗಿ ಕಳೆದ ಒಂಬತ್ತು ವರ್ಷಗಳಿಂದ ಧರ್ಮಸ್ಥಳ ಮೇಳವು ಕಾಲಮಿತಿ( 7.00 ರಿಂದ 12.00) ಪ್ರದರ್ಶನ ನೀಡುತ್ತಾ ಬಂದು ಇದರಲ್ಲಿ ಯಶಸ್ವಿಯನ್ನೂ ಕಲಾವಿದರ,ಯಕ್ಷಪ್ರೇಮಿಗಳ, ಸೇವಾಕರ್ತರ ಮನಸ್ಸನ್ನೂ ಗೆದ್ದು ಪ್ರತಿ ಪ್ರದರ್ಶನದಲ್ಲೂ ಉತ್ತಮ ಪ್ರೇಕ್ಷಕರು ಸೇರುತ್ತಾರೆ.ಹೆಚ್ಚಾಗಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯನ್ನು ಸೇವಾ ರೂಪವಾಗಿ ಆಡುತ್ತಾ ಕೆಲವೊಂದು ಪುರಾಣ ಪ್ರಸಂಗಗಳನ್ನು ಕಾಲಮಿತಿಗೆ ಹೊಂದಿಸಿ ಯಾವುದೇ ಲೋಪವಾಗದಂತೆ ಪ್ರದರ್ಶನ ನೀಡುತ್ತಿದೆ.ಕಲಾವಿದರಿಗೆ ಉತ್ತಮ ವ್ಯವಸ್ಥೆ ನೀಡುತ್ತಿದೆ .
ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ,ಶ್ರೀ ಹರ್ಷೇಂದ್ರ ಹೆಗ್ಗಡೆಯವರ ಯಜಮಾನತ್ವದಲ್ಲಿ ಮೇಳವು ದ.ಕ,ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳಲ್ಲಿ ಸಂಚರಿಸಿ ಯಕ್ಷಗಾನ ಪ್ರದರ್ಶನ ನೀಡುತ್ತದೆ

*2024-25 ನೇ ಸಾಲಿನ ತಿರುಗಾಟವು ನವಂಬರ್ 3 ರಿಂದ ಪ್ರಾರಂಭವಾಗಲಿದೆ*

(ಅಂತರ್ಜಾಲ)