ಬೆಂಗಳೂರು : ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ೨೦೨೪-೨೫ನೇ ಸಾಲಿಗೆ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ “ಮೀಡಿಯಾ ಕಿಟ್” ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅಥವಾ ಆಯಾ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು, ಇಲಾಖೆಯ ಮಾನ್ಯತಾ ಕಾರ್ಡ್, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ (ಉಪಜಾತಿ), ಪತ್ರಿಕಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾನುಭವ, ವೇತನ ವಿವರಗಳನ್ನೊಳಗೊಂಡ ಮಾಹಿತಿಯನ್ನು ಭರ್ತಿ ಮಾಡಿ ಸ್ವ-ವಿಳಾಸವಿರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.ಅರ್ಜಿ ಸಲ್ಲಿಸಬಯಸುವವರು ಅರ್ಜಿಯೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ವಿತರಿಸಲಾಗಿರುವ ಮಾಧ್ಯಮ ಮಾನ್ಯತಾ ಕಾರ್ಡ್ ಹೊಂದಿರುವ ಬಗ್ಗೆ ದೃಢೀಕೃತ ಜೆರಾಕ್ಸ್ ಪ್ರತಿ, ಜಾತಿ ದೃಢೀಕರಣಕ್ಕಾಗಿ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರದ ದೃಢೀಕೃತ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಅರ್ಜಿಯಲ್ಲಿ ನಮೂದಿಸಲಾಗಿರುವ ಎಲ್ಲಾ ಮಾಹಿತಿಗಳಿಗೆ ಅಧಿಕೃತ ಪೂರಕ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದೊಳಗಾಗಿ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸರ್ಕಾರದ ವ್ಯಾಪ್ತಿಗೆ ಒಳಪಡುವ ನಿಗಮ, ಮಂಡಳಿಗಳಿAದ ಹಾಗೂ ಸರ್ಕಾರದ ಯಾವುದೇ ಇಲಾಖೆಗಳಿಂದ ಈ ಯೋಜನೆಯಡಿ ಮಾಧ್ಯಮ ಕಿಟ್‌ಗಳನ್ನು ಪಡೆದಿರುವುದಿಲ್ಲ ಎಂದು ರೂ. ೧೦೦ ರ ಬಾಂಡ್‌ನಲ್ಲಿ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು. ಮಾಧ್ಯಮ ಕಿಟ್ ಒದಗಿಸಲು ಪತ್ರಕರ್ತರ ಸೇವಾ ಹಿರಿತನ, ವಯೋಮಿತಿ ಹಾಗೂ ಸೇವಾನುಭವದ ಗರಿಷ್ಠತೆಯನ್ನು ಪರಿಗಣಿಸಲಾಗುವುದು. ಅರ್ಜಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ವಿವರ, ಪ್ರಸಾರ ಸಂಖ್ಯೆ, ಪತ್ರಿಕೆಯ ಮಾಧ್ಯಮ ಪಟ್ಟಿಯ ವಿವರ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ದೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ದಿನಾಂಕ: ೧೦-೧೧-೨೦೨೪ ರ ಸಂಜೆ ೫:೦೦ ಗಂಟೆಯೊಳಗೆ ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿಗಳಿಗೆ ಸಲ್ಲಿಸಬೇಕು. ಲಕೋಟೆಯ ಮೇಲ್ಬಾಗದಲ್ಲಿ “ಪ.ಜಾ ಹಾಗೂ ಪ.ಪಂ.ಮಾಧ್ಯಮ ಮಾನ್ಯತೆ ಪತ್ರಕರ್ತರಿಗೆ ಮೀಡಿಯಾ ಕಿಟ್ ಗಾಗಿ ಅರ್ಜಿ” ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.