ಬೆಳಗಾವಿ: ದೀಪಾವಳಿ ಹಬ್ಬದ ಪ್ರಯುಕ್ತ ಇದೀಗ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಬೆಳಗಾವಿಯ ಪ್ರಮುಖ ರಸ್ತೆಯಾಗಿರುವ ಗಣಪತಿಗಲ್ಲಿ ಪೊಲೀಸರು ಹೊರಡಿಸಿರುವ ಫರ್ಮಾನ್ ಇದು. ದೀಪಾವಳಿ ಹಬ್ಬದ ಪ್ರಯುಕ್ತ ಗಣಪತಿ ಗಲ್ಲಿಯಲ್ಲಿ ಇದೀಗ ಎಲ್ಲಿಲ್ಲದ ಜನ ಜಂಗುಳಿ ಏರ್ಪಟ್ಟಿದೆ. ಹೀಗಾಗಿ, ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಲು ಮೈಕ್ ಮೂಲಕ ಎಚ್ಚರಿಸುತ್ತಿದ್ದಾರೆ. ಗಣಪತಿಗಲ್ಲಿ, ಖಡೇ ಬಜಾರ್, ಮಾರುತಿ ಗಲ್ಲಿ, ರವಿವಾರ ಪೇಟೆ, ರಾಮದೇವ ಗಲ್ಲಿ, ಸಮಾದೇವಿಗಲ್ಲಿ ಮುಂತಾದ ಪ್ರದೇಶಗಳು ಬೆಳಗಾವಿಯಲ್ಲಿ ಜನದಟ್ಟಣೆ ಪ್ರದೇಶಗಳಾಗಿವೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಈ ಪ್ರದೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ವಿವಿಧ ವಸ್ತುಗಳ ಖರೀದಿಗೆ ಆಗಮಿಸುತ್ತಾರೆ. ಪೂಜಾ ಸಾಮಾನುಗಳು, ಎಲೆಕ್ಟ್ರಿಕ್ ಸಾಮಗ್ರಿಗಳು, ಬಟ್ಟೆ ಸೇರಿದಂತೆ ನಾನಾ ವಸ್ತುಗಳು ಇಲ್ಲಿ ದೊರೆಯುತ್ತವೆ. ಹೀಗಾಗಿ ಇಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರುತ್ತಾರೆ. ಆದ ಕಾರಣ ಕಳ್ಳರು ಇದೇ ಪ್ರದೇಶದಲ್ಲಿ ಹೆಚ್ಚಾಗಿ ಜನರ ಕಿಸೆ ಕಳ್ಳತನ ಹಾಗೂ ಪರ್ಸ್ ಕಳ್ಳತನಗಳನ್ನು ಅವ್ಯಾಹತವಾಗಿ ನಡೆಸುತ್ತಾರೆ. ಪೊಲೀಸರು ಎಷ್ಟೇ ನಿಗಾ ವಹಿಸಿದರೂ ಕಳ್ಳರು ಮಾತ್ರ ತಮ್ಮ ಕೈಚಳಕ ಮೆರೆಯುತ್ತಾರೆ. ಆದ್ದರಿಂದ ಪೊಲೀಸರು ಇದೀಗ ಮುಂಜಾಗೃತಾ ಕ್ರಮವಾಗಿ ಜನರಲ್ಲಿ ಜಾಗತಿ ಮೂಡಿಸಲು ಮುಂದಾಗಿರುವುದು ಕಂಡು ಬಂದಿದೆ.