ಬೆಂಗಳೂರು : ಉಪನಗರ ರೈಲು ಯೋಜನೆಯ (ಬಿಎಸ್ ಆರ್ ಪಿ) ಮಲ್ಲಿಗೆ ಕಾರಿಡಾರ್ ಕಾಮಗಾರಿಯನ್ನು ಮಂಗಳವಾರದಂದು ಪರಿಶೀಲನೆ ನಡೆಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ಕಾಮಗಾರಿಯಲ್ಲಿ ವಿಳಂಬ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಬಿ ಎಸ್ ಆರ್ ಪಿ ಕಾಮಗಾರಿ ನಡೆಯುತ್ತಿರುವ ಕನಕ ನಗರ ಲೆವಿಲ್ ಕ್ರಾಸಿಂಗ್ ಕಾಮಗಾರಿ ವೀಕ್ಷಣೆ ನಡೆಸಿದ ಅವರು ಕಾಮಗಾರಿ ವಿಳಂಬಕ್ಕೆ ಕಾರಣವೇನು ? ಏನಾದರೂ ಸಮಸ್ಯೆ ಆಗುತ್ತಿದೆಯೇ ಎಂದು ಗುತ್ತಿಗೆದಾರರಾಗಿರುವ ಇಂಜಿನಿಯರ್ ಗಳು ಮತ್ತು ಕರ್ನಾಟಕ ರೈಲು ಮೂಲ ಸೌಲಭ್ಯ ಅಭಿವೃದ್ಧಿ ನಿಯಮಿತದ ಅಧಿಕಾರಿಗಳನ್ನು ಪ್ರಶ್ನಿಸಿದರು.

ಆದರೆ, ಇದಕ್ಕೆ ಅಧಿಕಾರಿಗಳು ಮತ್ತು ಎಂಜಿನಿಯರ್ ಗಳಿಂದ ಸಮರ್ಪಕ ಉತ್ತರ ಬರಲಿಲ್ಲ. ನಾವು ಇಲ್ಲಿಗೆ ಬಂದಿರುವುದು ನಿಮ್ಮ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು. ಆದರೆ, ನೀವು ಸಮರ್ಪಕ ಉತ್ತರ ಕೊಡದಿದ್ದರೆ ಹೇಗೆ ? ಸಮಸ್ಯೆ ಬಗೆಹರಿಯುವುದಾದರೂ ಹೇಗೆ ಎಂದು ಶಾಲಿನಿ ರಜನೀಶ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.