ಬೆಂಗಳೂರು: ಆರ್‌ಸಿಬಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕರಾಗುವ ಸಾಧ್ಯತೆ ಇದೆ.

ಸದ್ಯ ಫಾಫ್ ಡುಪ್ಲೆಸಿಸ್ ನಾಯಕರು. ಅವರಿಗೆ ಈಗ 40 ವರ್ಷ. ಹೀಗಾಗಿ ಮುಂದಿನ ವರ್ಷ ಆರ್‌ಸಿಬಿ ಪರ ಅವರು ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ.

ಈಗಾಗಲೇ ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವುದರಿಂದ ಅವರು ಈಗ ಆರ್‌ಸಿಬಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. 2008ರಿಂದ ವಿರಾಟ್ ಕೊಹ್ಲಿ ಅವರು ಒಂದೇ ತಂಡದ ಪರವಾಗಿ ಆಡುತ್ತಿದ್ದಾರೆ. ಸುಮಾರು 16 ವರ್ಷಗಳ ಕಾಲ ಅವರು ಆರ್‌ಸಿಬಿ ಪರ ಅಡುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಆರ್‌ಸಿಬಿ ಪರ 143 ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ ಅವರು 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಕೊಹ್ಲಿ ಅವರ ನಾಯಕತ್ವದಲ್ಲಿ 2016ರಲ್ಲಿ ಆರ್‌ಸಿಬಿ ಫೈನಲ್ ಪ್ರವೇಶ ಮಾಡಿತ್ತು. ನಂತರ ಮೂರು ಸಲ ಪ್ಲೇ ಆಫ್ ಆಡಿತ್ತು. ಆದ್ದರಿಂದ ಈ ಬಾರಿ ಮತ್ತೆ ಕೊಹ್ಲಿ ಅವರಿಗೆ ನಾಯಕ ಪಟ್ಟ ನೀಡುವ ಸಾಧ್ಯತೆ ಹೆಚ್ಚಾಗಿದೆ. ಆರ್‌ಸಿಬಿ ಫೈನಲ್ ಪ್ರವೇಶ ಮಾಡದೆ ಬರೋಬ್ಬರಿ ಎಂಟು ವರ್ಷ ಕಳೆದಿದೆ. ಕಳೆದ ಸೀಸನ್ ನಲ್ಲಿ ಆರ್‌ಸಿಬಿ 14 ಪಂದ್ಯಗಳಲ್ಲಿ ಏಳು ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶ ಮಾಡಿತ್ತು. ಆರ್‌ಸಿಬಿ ಪಾಲಿಗೆ ಕಿರೀಟ ಧರಿಸಲು ಈಗ ವಿರಾಟ್ ಕೊಹ್ಲಿ ನಾಯಕತ್ವ ವಹಿಸಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.