ಹಾವೇರಿ: ವಿಜಯಪುರ, ಕಲಬುರಗಿ, ಮಂಡ್ಯ ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ನೋಟಿಸ್‌ ವಿಚಾರ ಇದೀಗ ಹಾವೇರಿ ಜಿಲ್ಲೆಗೂ ಕಾಲಿಟ್ಟಿದೆ. ಹಾವೇರಿಯಲ್ಲಿ ಒಂದು ಹಂತ ಮುಂದಕ್ಕೆ ಹೋಗಿದ್ದು, ಬುಧವಾರ ರಾತ್ರಿ ಕಲ್ಲು ತೂರಾಟ ನಡೆದಿದೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಖಾತೆ ಮಾಡಲಾಗುತ್ತಿದೆ ಎಂಬ ಭಯ ವ್ಯಕ್ತವಾಗಿದೆ. ವಾಸವಿದ್ದ ಮನೆಗಳನ್ನು ಖಾಲಿ ಮಾಡಿಸಬಹುದು ಎಂಬ ಭೀತಿಯಿಂದ ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ.

ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡ ಮೊಹಮ್ಮದ್ ರಫಿ ಎಂಬುವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ. ಮನೆ ಮುಂದಿದ್ದ ಬೈಕ್ ಅನ್ನು ಜಖಂ ಮಾಡಲಾಗಿದೆ.

ಕಲ್ಲು ತೂರಾಟ ಹಾಗೂ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ, ರಾತ್ರೋರಾತ್ರಿ ಹಾವೇರಿ ಡಿಸಿ, ಎಸ್ ಪಿ, ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಎಸ್‌ಪಿ ಅಂಶುಕುಮಾರ್ ಕಡಕೋಳ ಗ್ರಾಮಕ್ಕೆ ದೌಡಾಯಿಸಿದರು. ಮತ್ತೆ ಅಹಿತಕರ ಘಟನೆ ನಡೆಯದಂತೆ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಗಲಾಟೆಗೆ ಕಾರಣರಾದವರನ್ನು ಬಂಧಿಸಲು ಮುಂದಾದ ಪೊಲೀಸರು, ಗಲಾಟೆಗೆ ಪ್ರಚೋದನೆ ನೀಡಿದರನ್ನೂ ಪತ್ತೆ ಮಾಡಲು ಮುಂದಾಗಿದ್ದಾರೆ. ಸದ್ಯ ಸವಣೂರು ತಾಲೂಕಿನ ಕಡಕೋಳ ಗ್ರಾಮ ಬೂದಿಮುಚ್ಚಿದ ಕೆಂಡದಂತಿದೆ.