ಬೆಳಗಾವಿ: ದೀಪಗಳ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಎಲ್ಲೆಲ್ಲೂ ದೀಪಾವಳಿಯ ಸಂಭ್ರಮ, ಸಡಗರ ಮೇರೆ ಮೀರಿದೆ.

ಅಬಾಲ ವೃದ್ಧರಾಗಿ ಪ್ರತಿಯೊಬ್ಬರಲ್ಲೂ ಹಬ್ಬದ ಉತ್ಸಾಹ ಎದ್ದು ಕಾಣುತ್ತಿದೆ. ಭಾರತೀಯ ಹಬ್ಬಗಳಲ್ಲೇ ದೀಪಾವಳಿ ಅತ್ಯಂತ ದೊಡ್ಡ ಹಬ್ಬ ಎಂಬ ಹಿರಿಮೆಗೆ ಪಾತ್ರವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಾರುಕಟ್ಟೆಯಲ್ಲಿ ಭಾರೀ ಜನಜಂಗುಳಿ ಕಂಡುಬಂದಿದೆ. ಬೆಳಗಾವಿಯ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಗಣಪತಿಗಲ್ಲಿ, ಖಡೇ ಬಜಾರ್, ರವಿವಾರ ಪೇಟೆ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಶಹಾಪುರ ಪ್ರದೇಶಗಳಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ದೊಡ್ಡ ಪ್ರಮಾಣದಲ್ಲಿ ಆಗಮಿಸಿರುವುದು ಕಂಡು ಬಂದಿದೆ.

ಅಗತ್ಯ ವಸ್ತುಗಳ ಬೆಲೆ ಹಬ್ಬದ ಸಂದರ್ಭದಲ್ಲಿ ಏರುವುದು ಸಹಜ. ಆದರೆ, ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಏರಿಕೆಯ ಬಿಸಿ ಗ್ರಾಹಕರನ್ನು ತಟ್ಟಿದೆ. ಹೆಸರೇ ಹೇಳಿದಂತೆ ದೀಪಾವಳಿ ದೀಪಗಳ ಹಬ್ಬ. ಹೀಗಾಗಿ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಮಣ್ಣಿನ ವಿವಿಧ ವಿನ್ಯಾಸಗಳ ಹಣತೆಗಳ ಮಾರಾಟ ಭರ್ಜರಿಯಾಗಿ ಸಾಗಿದೆ. ಜೊತೆಗೆ ಅತ್ಯಾವಶ್ಯಕ ದೀಪಾಲಂಕಾರಗಳ ವಿದ್ಯುತ್ ಸಾಮಗ್ರಿಗಳು ಮುಂತಾದವುಗಳ ವ್ಯಾಪಾರ ಜೋರಾಗಿದೆ. ಬಣ್ಣ ಬಣ್ಣದ ರಂಗೋಲಿ ಹಾಕಲು ಜನ ಕಾತರರಾಗಿರುವುದರಿಂದ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಬಣ್ಣಗಳ ರಂಗೋಲಿ ಪುಡಿ ಮಾರಾಟಕ್ಕಿದೆ. ಜೊತೆಗೆ ಆಕಾಶಬುಟ್ಟಿಗಳ ರಂಗು ದೀಪಾವಳಿಗೆ ಮತ್ತಷ್ಟು ಸೊಗಸು ನೀಡುತ್ತದೆ. ಇವೆಲ್ಲವೂ ಬೆಳಗಾವಿಯ ಮಾರುಕಟ್ಟೆಯಲ್ಲಿ ಇದೀಗ ಮೋಡಿ ಮಾಡುತ್ತಿವೆ.

ಒಟ್ಟಾರೆ, ಹಲವು ಕಷ್ಟ- ಸುಖಗಳ ನಡುವೆಯೂ ಬೆಳಗಾವಿ ಮಾರುಕಟ್ಟೆಯಲ್ಲಿ ಹಬ್ಬದ ಭರಾಟೆ ಎದ್ದು ಕಂಡಿದೆ.