ಬೆಳಗಾವಿ : ಬೆಳಗಾವಿಯಲ್ಲಿ ಈ ಸಲ ಸಂಭ್ರಮವೋ ಸಂಭ್ರಮ. ಅದರಲ್ಲೂ ಕನ್ನಡಿಗರ ಪಾಲಿಗೆ ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವ ಏಕಕಾಲದಲ್ಲಿ ಬಂದಿರುವುದು ಸಂತಸ ಇಮ್ಮಡಿಸಲು ಕಾರಣವಾಗಿದೆ.
ಇದೀಗ ಕನ್ನಡಿಗರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಮತ್ತೊಂದು ಇತಿಹಾಸ ರಚಿಸಲು ಮುಂದಾಗಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲು ತೀರ್ಮಾನಿಸಿದ್ದಾರೆ.
ಸರಕಾರದ ವಿವಿಧ ಕಚೇರಿಗಳು, ಪ್ರಮುಖ ಬೀದಿಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಕನ್ನಡ ಬಾವುಟಗಳು ಪ್ರಜ್ವಲಿಸುತ್ತಿವೆ. ಇದೀಗ ಇಡೀ ಬೆಳಗಾವಿ ನಗರ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಧುವಣಗಿತ್ತಿಯಂತೆ ಸುಂದರಗೊಂಡಿದೆ.
ಬೆಳಗಾವಿಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ರಾಜ್ಯೋತ್ಸವದ ಕಳೆ ಏರಲಿದೆ. ದೀಪಾವಳಿ ಹಾಗೂ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯ ಪ್ರಮುಖ ಚನ್ನಮ್ಮ ಪುತ್ತಳಿ ಇರುವ ಚನ್ನಮ್ಮ ವೃತ್ತವನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿದೆ. ಚನ್ನಮ್ಮ ವೃತ್ತದ ಸುತ್ತಲೂ ಸ್ವಾಗತ ಕಮಾನುಗಳನ್ನು ಹಾಕಲಾಗಿದೆ.
ಕನ್ನಡ ಸಂಘಟನೆಗಳು ಮತ್ತು ಜನಪ್ರತಿನಿಧಿಗಳ ಸ್ವಾಗತ ಕೋರುವ ಫಲಕಗಳು ಎಲ್ಲರ ಗಮನ ಸೆಳೆಯುತ್ತಿವೆ.ಒಟ್ಟಾರೆ, ಬೆಳಗಾವಿಯ ಕನ್ನಡ ಮನಸುಗಳು ಈ ಸಲದ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲು ಮುಂದಾಗಿರುವುದು ವಿಶೇಷವಾಗಿ ಗಮನ ಸೆಳೆದಿದೆ.