ಬೆಂಗಳೂರು : ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ಕನ್ನಡಿಗರಾಗಿ, ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸುವ ಮೂಲಕ ಕನ್ನಡ ವಾತಾವರಣವನ್ನು ನಿರ್ಮಿಸಿ ಎಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಅವರು ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 69 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ -2024 ದಲ್ಲಿ ಭಾಗವಹಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಏಕೀಕರಣಗೊಂಡು 68 ವರ್ಷಗಳು ಕಳೆದಿವೆ. 1953 ರಲ್ಲಿ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆಯಾಯಿತು. ಆಯೋಗದ ವರದಿಯನ್ನು ಆಧರಿಸಿ ರಾಜ್ಯಗಳ ಭಾಷಾವಾರು ವಿಂಗಡನೆಯಾಧರಿಸಿ, 1956ರ ನವೆಂಬರ್ 1 ರಂದು ರಾಜ್ಯ ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಯಿತು. ಮಾಜಿ ಮುಖ್ಯಮಂತ್ರಿ, ದಿ.ದೇವರಾಜ ಅರಸು ಅವರ ಅವಧಿಯಲ್ಲಿ 1973ರ ನವೆಂಬರ್ 1 ರಂದು ಮೈಸೂರು ರಾಜ್ಯ , ಇಡೀ ರಾಜ್ಯವನ್ನು ಪ್ರತಿನಿಧಿಸುವ ಹೆಸರಾದ ಕರ್ನಾಟಕ ವೆಂದು ಮರುನಾಮಕರಣಗೊಂಡಿತು. ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷಗಳು ಸಂದಿವೆ. ಈ ಸುವರ್ಣ ಸಂಭ್ರಮವನ್ನು ಬಿಜೆಪಿಸರ್ಕಾರ ಸಂಭ್ರಮಿಸಲಿಲ್ಲ. ಆದರೆ 2023ರ ನವೆಂಬರ್ 1 ರಂದು 51 ನೇ ವರ್ಷ ಎಂದು ಕರ್ನಾಟಕ ನಾಮಕರಣಗೊಂಡ ದಿನವೆಂದು ವರ್ಷಪೂರ್ತಿ ಆಚರಿಸಬೇಕೆಂದು ನಿರ್ಧರಿಸಲಾಯಿತು. ಕನ್ನಡ ನಾಡು, ನುಡಿ, ನೆಲ, ಜಲದ ಮಹತ್ವ ಪ್ರಚುರಪಡಿಸಲು ‘ಹೆಸರಾಯಿತು ಕರ್ನಾಟಕ , ಉಸಿರಾಯಿತು ಕನ್ನಡ’ ಎಂಬ ಘೋಷವಾಕ್ಯದಡಿ ಇಡೀ ವರ್ಷ ಕನ್ನಡವನ್ನು ಸಂಭ್ರಮಿಸಲಾಯಿತು ಎಂದರು.

*ಭಾಷೆಯ ಬಗ್ಗೆ ದುರಭಿಮಾನ ಬೇಡ, ಅಭಿಮಾನಿಗಳಾಗಿ

ಮಾತೃಭಾಷೆ ಕನ್ನಡವನ್ನು ವ್ಯವಹಾರಿಕವಾಗಿ ಬಳಸುವ ಜೊತೆಗೆ ,ಇತರರೊಂದಿಗೆ ಕನ್ನಡದಲ್ಲಿಯೇ ಮಾತನಾಡುವಂತೆ ಶಪಥ ಮಾಡಬೇಕು. ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸಬೇಕು. ಕನ್ನಡ ರಾಜ್ಯದ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ , ಯಾವುದೇ ಜಾತಿ, ಧರ್ಮ, ಭಾಷೆಯವರೂ ಕೂಡ ಕನ್ನಡಿಗರೇ ಆಗುತ್ತಾರೆ. ಕನ್ನಡ ಭಾಷೆಗೆ ಎರಡು ಸಾವಿರ ಇತಿಹಾಸವಿದ್ದು, ಬಹಳ ಪ್ರಾಚೀನ ಭಾಷೆಯಾಗಿದೆ. ಆದ್ದರಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಭಾಷೆಯನ್ನು ಬಲಿಕೊಟ್ಟು ಉದಾರಿಗಳಾಗಬಾರದು. ಭಾಷೆಯ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೇ, ಅಭಿಮಾನಗಳಾಗಬೇಕು. ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ಕನ್ನಡಿಗರಾಗಿ . ಬೇರೆ ಭಾಷೆಯನ್ನು ಕಲಿಯಬೇಡಿ ಎಂದು ಹೇಳುವುದಿಲ್ಲ. ಬೇರೆ ಭಾಷಾ ಸಂಪತ್ತುನ್ನು ಬೆಳೆಸಿಕೊಳ್ಳಿ , ಆದರೆ ಕನ್ನಡದಲ್ಲಿ ಮಾತನಾಡುವುದನ್ನು ಮರೆಯಬೇಡಿ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಉತ್ತಮವಾದುದು ಎಂದು ಮಹಾತ್ಮಾ ಗಾಂಧೀಯವರು ಹೇಳಿದ್ದಾರೆ ಎಂದರು.

*ಕನ್ನಡ ಹಿಯ್ಯಾಳಿಸುವುದು ನಾಡದ್ರೋಹ – ಸರ್ಕಾರದಿಂದ ಕಠಿಣ ಕ್ರಮದ ಎಚ್ಚರಿಕೆ

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ , ಕನ್ನಡಿಗರನ್ನು ಹಿಯ್ಯಾಳಿಸುವ ಪ್ರವೃತ್ತಿಯು ಕಂಡುಬರುತ್ತಿದೆ. ಇದು ನಾಡದ್ರೋಹ ಎಂದು ಪರಿಗಣಿಸಿ, ಅಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

*ಕೇಂದ್ರದ ಅನ್ಯಾಯದ ನಡುವೆಯೂ , ಕರ್ನಾಟಕದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

ಕರ್ನಾಟಕ ರಾಜ್ಯ , ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯವಾಗಿದೆ. 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ನೀಡಿದರೂ, ಕೇಂದ್ರದಿಂದ ದೊರೆಯುವ ತೆರಿಗೆ ಪಾಲು ಕೇವಲ 50-60 ಸಾವಿರ ಕೋಟಿ ಮಾತ್ರ. ಕನ್ನಡ ನಾಡು ಮುಂದುವರೆದಿದೆ ಎಂದು ಕೇಂದ್ರ ಸರ್ಕಾರ ನಮಗೆ ಅನ್ಯಾಯವೆಸಗಬಾರದು. ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ನೀಡಿ ಎಂದು ಕೇಂದ್ರಕ್ಕೆ ನಮ್ಮ ಬೇಡಿಕೆಗೆ ರಾಜಕೀಯ ಬಣ್ಣವನ್ನು ಬಳಿಯಲಾಗುತ್ತಿದೆ. ನಮ್ಮ ಹಕ್ಕಿಗೆ ಹೋರಾಡಬೇಕಾಗಿದೆ. ರಾಜ್ಯದ ಸಂಸದರು ಕೇಂದ್ರಕ್ಕೆ ಹೋಗಿದ್ದು, ಕೇಂದ್ರದಲ್ಲಿ ಕನ್ನಡಪರ ಧ್ವನಿ ಎತ್ತಬೇಕು. ಈ ಶಕ್ತಿಯನ್ನು ಆಯ್ಕೆಯಾಗಿ ಹೋದವರು ಬೆಳೆಸಿಕೊಂಡರೆ ರಾಜ್ಯಕ್ಕೆ ನ್ಯಾಯ ದೊರೆಯುತ್ತದೆ. ಕೇಂದ್ರದ ಅನ್ಯಾಯದ ನಡುವೆಯೂ , ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

*ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು

ರಾಜ್ಯದಲ್ಲಿ ಪ್ರತಿ ದಿನ 57 ಲಕ್ಷ ಶಾಲಾ ಮಕ್ಕಳಿಗೆ ವಾರದ ಆರೂ ದಿನಗಳು ಮೊಟ್ಟೆ ಹಾಗೂ ಚಿಕ್ಕಿಯನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಹಾಲಿನ ಜೊತೆ ಸಾಯಿಅನ್ನಪೂರ್ಣ ಅವರ ಸಹಯೋಗದೊಂದಿಗೆ ರಾಗಿಮಾಲ್ಟ್ ನ್ನೂ ನೀಡಲಾಗುತ್ತಿದೆ. ಬಡವರ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು, ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ಸರ್ಕಾರದ ಉದ್ದೇಶ. ಇಂದು ಕನ್ನಡ ದೀವಿಗೆ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಬಿಡುವುದಿಲ್ಲ

ಕನ್ನಡ ಕಲಿಯುವ ವಾತಾವರಣ ನಿರ್ಮಿಸಿದಾಗ ಭಾಷೆ ಬೆಳೆಯಲು ಸಾಧ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಕನ್ನಡೇತರರು ಕನ್ನಡವನ್ನು ಕಲಿಯುವ ವಾತಾವರಣವನ್ನು ನಾವು ನಿರ್ಮಿಸಿದಾಗ ಮಾತ್ರ , ನಮ್ಮ ಭಾಷೆ ಎತ್ತರಕ್ಕೆ ಬೆಳೆಯಲು ಸಾಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕರ್ನಾಟಕ ರಾಜ್ಯೋತ್ಸವ ಸಮಿತಿ ನೃಪತುಂಗ ಮಂಟಪ ಬೆಂಗಳೂರು ಇವರ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

100 ಕನ್ನಡ ಸಾಧಕರಿಗೆ ಪ್ರಶಸ್ತಿ

1956ರ ನವೆಂಬರ್ 1 ರಂದು ರಾಜ್ಯ ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಯಿತು. ಮಾಜಿ ಮುಖ್ಯಮಂತ್ರಿ, ದಿ.ದೇವರಾಜ ಅರಸು ಅವರ ಅವಧಿಯಲ್ಲಿ 1973ರ ನವೆಂಬರ್ 1 ರಂದು ಮೈಸೂರು ರಾಜ್ಯ , ಇಡೀ ರಾಜ್ಯವನ್ನು ಪ್ರತಿನಿಧಿಸುವ ಹೆಸರಾದ ಕರ್ನಾಟಕ ವೆಂದು ಮರುನಾಮಕರಣಗೊಂಡಿತು.. ಈ ಸುವರ್ಣ ಸಂಭ್ರಮವನ್ನು 2023ರ ನವೆಂಬರ್ 1 ರಂದು 51 ನೇ ವರ್ಷ ಎಂದು ಕರ್ನಾಟಕ ನಾಮಕರಣಗೊಂಡ ದಿನವೆಂದು ವರ್ಷಪೂರ್ತಿ ಆಚರಿಸಬೇಕೆಂದು ನಿರ್ಧರಿಸಲಾಯಿತು. ಇಡೀ ರಾಜ್ಯದಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಮಹತ್ವ ಪ್ರಚುರಪಡಿಸಲು ‘ಹೆಸರಾಯಿತು ಕರ್ನಾಟಕ , ಉಸಿರಾಯಿತು ಕನ್ನಡ’ ಎಂಬ ಘೋಷವಾಕ್ಯದಡಿ ಇಡೀ ವರ್ಷ ಕನ್ನಡವನ್ನು ಸಂಭ್ರಮಿಸಲಾಯಿತು ಎಂದರು. ಕನ್ನಡ ನಾಡಿನ ಏಕೀಕರಣಕ್ಕೆ, ಏಳಿಗೆಗೆ 100 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ
ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಬಿಡುವುದಿಲ್ಲ. 1983ರ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿದ್ದೆ. ಕನ್ನಡವನ್ನು ಕಾಯಲು ಸಮಿತಿ ಬೇಕೆನ್ನುವ ಪರಿಸ್ಥಿತಿ ಕರ್ನಾಟಕದಲ್ಲಿ ಉಂಟಾಗಿದೆ. ಇಂದಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಈ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ವಿಷಯದಲ್ಲಿ ಉದಾರತನವಿರಬೇಕೇ ಹೊರತು ಭಾಷೆ ಸಂಸ್ಕೃತಿಯ ಬಗ್ಗೆ ಅಭಿಮಾನವಿರಬೇಕು. ಬೇರೆ ಭಾಷೆ ಕಲಿತರೂ, ಕನ್ನಡ ತಾಯಿಭಾಷೆಯನ್ನು ಮರೆಯಬಾರದು. ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನ ದೊರೆತಿದೆ. ಕನ್ನಡಕ್ಕೆ ಸೂಕ್ತ ಗೌರವ ಸಿಗುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ತಾಯಿಯ ಪ್ರತಿಮೆಯನ್ನು ಸಧ್ಯದಲ್ಲಿಯೇ ಸ್ಥಾಪಿಸಲಾಗುವುದು ಎಂದರು.

ವಾಟಾಳ್ ನಾಗರಾಜ್ ರವರು ಎಂದಿಗೂ ಅಧಿಕಾರಕ್ಕೆ ಹಪಹಪಿಸಿದವರಲ್ಲ

ಪ್ರತಿ ವರ್ಷದ ನವೆಂಬರ್ 1 ಕನ್ನಡ ಹಬ್ಬದ ದಿನ. ವಾಟಾಳ್ ನಾಗರಾಜ್ ಅವರು ಇದೇ ರೀತಿ 100 ರಾಜ್ಯೋತ್ಸವಗಳನ್ನು ಆಚರಿಸುವಂತಾಗಲಿ ಎಂದು ಶುಭ ಕೋರಿದರು. ಕನ್ನಡಪರ ಹೋರಾಟಗಾರರಾದ ಇವರು ದೀರ್ಘ ಕಾಲದಿಂದ ಕನ್ನಡ ನಾಡು, ನುಡಿ, ನೆಲ,ಜಲಗಳ ಸಂರಕ್ಷಣೆಗೆ ಶ್ರಮಿಸಿದ್ದಾರೆ. ರಾಜಕೀಯವಾಗಿ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದ್ದರೂ, ಕನ್ನಡ ಚಳವಳಿ ಪಕ್ಷ ಬಿಟ್ಟು ಬೇರೆಡೆಗೆ ಅವರು ಮುಖ ಮಾಡಲಿಲ್ಲ. ನನ್ನನ್ನೂ ಸೇರಿದಂತೆ, ಕೆಂಗಲ್ ಹನುಮಂತಯ್ಯ , ವೀರೇಂದ್ರ ಪಾಟೀಲ್, ದೇವರಾಜ ಅರಸು , ಗುಂಡೂರಾಯರು ಸೇರಿದಂತೆ ಹಲವು ರಾಜಕೀಯ ಧುರೀಣರಿಗೆ ಆಪ್ತರಾಗಿದ್ದರೂ, ಎಂದಿಗೂ ಅಧಿಕಾರಕ್ಕೆ ಹಪಹಪಿಸಿದವರಲ್ಲ. ಮಾತೃಭಾಷೆ, ನೆಲ ಜಲದ ಬಗ್ಗೆ ಬದ್ಧತೆಯಿರುವ ವಾಟಾಳ್ ನಾಗರಾಜ್ ಅವರ ಬಗ್ಗೆ ಅಪಾರ ಗೌರವಾದರವಿದೆ. ನನ್ನ ವಿದ್ಯಾರ್ಥಿದೆಸೆಯಿಂದಲೂ ಅವರ ಭಾಷೆಯನ್ನು ಕೇಳುತ್ತಾ ಬಂದಿದ್ದೇನೆ ಎಂದು ಸ್ಮರಿಸಿದರು. ವಾಟಾಳ್ ನಾಗರಾಜ್ ಅವರನ್ನು ‘ನಾಯಕರು’ ಎಂದು ತಾನು ಸಂಭೋದಿಸುತ್ತಿದ್ದು, ಜನ ಅವರನ್ನು ನಾಯಕರಾಗಿ ಕಂಡಿದ್ದಾರೆ ಎಂದರು.