ಮಂಗಳೂರು : ಪತ್ರಕರ್ತರು ಮತ್ತು ಪೊಲೀಸರನ್ನು ಕೇಳೋರಿರಲ್ಲ. ನಿಧನದ ನಂತರವೂ ಗೌರವ ಸಿಕ್ಕರೆ ಅದೇ ವಿಶೇಷ. ಆದರೆ, ಪತ್ರಕರ್ತ ಮನೋಹರ ಪ್ರಸಾದ್ ನಿಧನ ಹೊಂದಿ ವರ್ಷವೇ ಕಳೆದರೂ ಅವರನ್ನು ಸಮಾಜ ಸಂಸ್ಮರಣೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಿ.ಬಿ. ಹರೀಶ ರೈ ಹೇಳಿದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕುತ್ತಾರುವಿನ ಖಾಸಗಿ ಸಭಾಂಗಣದಲ್ಲಿ ಪತ್ರಿಕೆ ರಂಗದ ಭೀಷ್ಮ ಎಂದೇ ಖ್ಯಾತರಾದ ದಿ. ಮನೋಹರ ಪ್ರಸಾದ್ ಅವರ ಸಂಸ್ಮರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನೋಹರ ಪ್ರಸಾದ್ ಅವರು
ಕವಿ, ಕಥೆಗಾರ, ನಟ, ನಿರೂಪಕರಾಗಿದ್ದಲ್ಲದೇ ಎಷ್ಟೇ ಪ್ರೇಕ್ಷಕರಿದ್ದರೂ ಅವರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯಕ್ರಮ ನಿರೂಪಣೆ ಮಾಡುವವರಾಗಿದ್ದರು. ಕೇವಲ ಪತ್ರಕರ್ತರಲ್ಲದೆ ಜಿಲ್ಲೆಯಲ್ಲಿ ಪ್ರಸಿದ್ಧ ಸೆಲಬ್ರೆಟಿಯಾಗಿ ಮಿಂಚಿದ್ದರು. ವೃತ್ತಿಯಲ್ಲಿರುವಷ್ಟು ದಿನ ಮಾತ್ರ ಪತ್ರಕರ್ತರಿಗೆ ಮತ್ತು ಪೊಲೀಸರಿಗೆ ಗೌರವ ಸಿಗುತ್ತದೆ. ನಿಧನ ನಂತರವೂ ಗೌರವ ಸಿಕ್ಕರೆ ಅದೇ ವಿಶೇಷ. ಅಷ್ಟೊಂದು ಪರಿಣಾಮಕಾರಿ ವ್ಯಕ್ತಿತ್ವವನ್ನು ಮನೋಹರ ಪ್ರಸಾದ್ ಹೊಂದಿದ್ದರು. ಅವರೊಬ್ಬ ಉತ್ತಮ ವರದಿಗಾರರು. ಬಹುಮುಖ ಪ್ರತಿಭೆ. ಕವಿ, ಕಥೆಗಾರರು. ಸಿನಿಮಾಗಳಲ್ಲೂ ನಟಿಸಿದ್ದರು. ನಾಟಕ ಬರೆದು ಹೆಸರು ಗಳಿಸಿದ್ದರು. ಯಕ್ಷಗಾನದಲ್ಲೂ ಅಭಿನಯಿಸಿದ್ದರು. ಸುಲಲಿತ ಮತ್ತು ಸ್ಪಷ್ಟವಾಗಿ ಮಾತನಾಡುತ್ತಿದ್ದ ಅವರು ಕನ್ನಡ ಭಾಷೆಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಘಟಿಸಿ ಹೋದ ಯಾವುದೇ ಘಟನೆಗಳ ದಿನಾಂಕ, ಇಸವಿಗಳನ್ನು ಅವರಲ್ಲಿ ಕೇಳಿದರೆ ಥಟ್ ಎಂದು ಹೇಳುವ ಅಗಾಧ ಸ್ಮರಣ ಶಕ್ತಿ ಅವರಲ್ಲಿತ್ತು. ಅವರ ಸೇವೆಯನ್ನು ಪರಿಗಣಿಸಿ ಅವರ ಅಂತ್ಯಸಂಸ್ಕಾರದಲ್ಲಿ ಸರ್ಕಾರಿ ಗೌರವ ಸಲ್ಲಿಸುತ್ತದೆ ಎಂದರೆ ಮನೋಹರ ಪ್ರಸಾದ್ ಎಷ್ಟು ಜನಪ್ರಿಯತೆ ಹೊಂದಿದ್ದವರಿರಬಹುದು ಎನ್ನುವುದಕ್ಕೆ ನಿದರ್ಶನ ಎಂದು ಅವರ ಜೀವನವನ್ನು ನೆನಪು ಮಾಡಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಉದ್ಘಾಟಿಸಿ, ಕೇವಲ ಭಾಷೆಗಾಗಿ ದಿನಾಚರಣೆ ಆಗಬಾರದು. ಕರ್ನಾಟಕ ರಾಜ್ಯೋತ್ಸವ ಮೂಲಕ ಕನ್ನಡ ಸಂಸ್ಕೃತಿಯನ್ನು ನಿರಂತರವಾಗಿ ಎತ್ತಿ ಹಿಡಿಯಬೇಕು. ಸಾಮಾಜಿಕ ಜಾಲತಾಣಗಳು ಹುಟ್ಟಿಕೊಳ್ಳುವ ಮೊದಲೇ ನಾಡಿನ ಸಂಸ್ಕೃತಿಯನ್ನು ಎಲ್ಲೆಡೆ ಪ್ರಸರಿಸುವ ಕಾರ್ಯವನ್ನು ಪತ್ರಕರ್ತರು ಮಾಡಿದ್ದಾರೆ. ಕಲಾವಿದರು ಸಾಹಿತಿಗಳನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಪತ್ರಕರ್ತ ಮನೋಹರ ಪ್ರಸಾದ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಪತ್ರಕರ್ತ ಹಾಗೂ ಸಾಹಿತಿ ಮಲಾರ್ ಜಯರಾಮ ರೈ, ಛಾಯಾಗ್ರಾಹಕ ಜಯಂತ ಉಳ್ಳಾಲ, ಜಾನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು .