ನವದೆಹಲಿ: ವಿವಿಧ ಕಾರಣಗಳಿಂದ ವಿದೇಶಗಳಿಗೆ ಒಯ್ಯಲ್ಪಟ್ಟಿದ್ದ ಭಾರತದ 640 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತರಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ.
ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಇಲಾಖೆ ಮಾಹಿತಿ ನೀಡಿದ್ದು, ವಿದೇಶಗಳಿಂದ ಮರಳಿ ತಂದಿರುವ ಕಲಾಕೃತಿಗಳ ಪೈಕಿ ಅತಿಹೆಚ್ಚು ಕಲಾಕೃತಿಗಳನ್ನು ಅಮೆರಿಕದಿಂದ ತರಲಾಗಿದೆ ಎಂದು ಅದು ತಿಳಿಸಿದೆ.
ಕಳೆದ ಒಂದು ದಶಕದಲ್ಲಿ ವಿವಿಧ ದೇಶಗಳಿಂದ 640 ಕಲಾಕೃತಿಗಳನ್ನು ದೇಶಕ್ಕೆ ವಾಪಸ್ ತರಲಾಗಿದೆ. ಅತ್ಯಧಿಕ ಸಂಖ್ಯೆಯ 578 ಕಲಾಕೃತಿಗಳನ್ನು ಅಮೆರಿಕದಿಂದ ತರಲಾಗಿದೆ ಎಂದು ಇಲಾಖೆ ತಿಳಿಸಿದ್ದು, ಮರಳಿ ತಂದಿರುವ ಕಲಾಕೃತಿಗಳ ವೀಡಿಯೊವನ್ನು ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ, ವಿವಿಧ ಕಾರಣಗಳಿಂದ ಅಮೆರಿಕ ಸೇರಿದ್ದ ಭಾರತದ ರಾಷ್ಟ್ರೀಯ ಪರಂಪರೆಯ ಕಲಾಕೃತಿಗಳನ್ನು ವಾಪಸ್ ತರುವ ಬಗ್ಗೆ ಸಮಾಲೋಚನೆಗಳನ್ನು ನಡೆಸಿದ್ದರು. ಪ್ರಧಾನಿಯವರ ಮೂರು ದಿನಗಳ ಅಮೇರಿಕ ಭೇಟಿ ಸಂದರ್ಭದಲ್ಲೇ ಭಾರತಕ್ಕೆ 297 ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. ವಿವಿಧ ದೇಶಗಳಿಂದ ಭಾರತಕ್ಕೆ ಮರಳಿ ಬಂದಿರುವ 640 ಪುರಾತನ ಕಲಾಕೃತಿಗಳಲ್ಲಿ ಅಮೆರಿಕಕ್ಕೆ ಒಯ್ಯಲ್ಪಟ್ಟಿದ್ದ ಕಲಾಕೃತಿಗಳು ಸಹ ಸೇರಿವೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2014 ರಿಂದ ಈವರೆಗೆ ಭಾರತವು 640 ಪ್ರಾಚೀನ ವಸ್ತುಗಳನ್ನು ಯಶಸ್ವಿಯಾಗಿ ಮರುಪಡೆದುಕೊಂಡಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿವೆ. 2021 ರಲ್ಲಿ ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯ ಸಮಯದಲ್ಲಿ, 12 ನೇ ಶತಮಾನದ ಸೊಗಸಾದ ಕಂಚಿನ ನಟರಾಜ ಪ್ರತಿಮೆ ಸೇರಿದಂತೆ 157 ಪುರಾತನ ವಸ್ತುಗಳನ್ನು ಅಮೆರಿಕ ಸರ್ಕಾರ ಹಸ್ತಾಂತರಿಸಿತ್ತು. 2023 ರಲ್ಲಿ ಪ್ರಧಾನಿಯವರ ಅಮೆರಿಕ ಭೇಟಿಯ ಕೆಲವು ದಿನಗಳ ನಂತರ, 105 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿತ್ತು