ಹಾಸನ : ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬ ದೇವಿ ದರ್ಶನ ಈ ವರ್ಷ ಮುಕ್ತಾಯಗೊಂಡಿದೆ. ನವಂಬರ್ 3 ರಂದು ಹಾಸನಾಂಬ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗುತ್ತದೆ. ಹೀಗಾಗಿ ದೇವಸ್ಥಾನದ ಆವರಣ ಭಕ್ತರಿಂದ ತುಂಬಿ ತುಳುಕುತ್ತಿದೆ. ವಿಶ್ವರೂಪ ದರ್ಶನದ ಬಳಿಕ ಗರ್ಭಗುಡಿ ಮುಚ್ಚಲಾಗುತ್ತಿದೆ. ಗುರುವಾರ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್ 25 ರಿಂದ ನವಂಬರ್ 3 ರ ನಸುಕಿನ 6:00 ವರೆಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಒಂಬತ್ತು ದಿನಗಳ ಅವಧಿಯಲ್ಲಿ ದಾಖಲೆಯ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದುಕೊಂಡಿದ್ದಾರೆ. ದೇವಸ್ಥಾನಕ್ಕೆ 9 ಕೋಟಿ ರೂ.ಗೂ ಅಧಿಕ ಆದಾಯ ಹರಿದು ಬಂದಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ಭಕ್ತರು ದೇವಿ ದರ್ಶನ ಪಡೆದುಕೊಂಡಿರುವುದು ವಿಶೇಷವಾಗಿದೆ.