ಮುಂಬೈ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಜೀವ ಬೆದರಿಕೆ ಸಂದೇಶ ರವಾನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವತಿಯೊಬ್ಬರನ್ನು ಬಂಧಿಸಲಾಗಿದೆ.

ಮುಂಬೈ ಪೊಲೀಸರು ಫಾತಿಮಾ ಖಾನ್ ಎಂಬವರ ಮೊಬೈಲ್‌ ನಂಬರ್‌ನಿಂದ ಸಂದೇಶ ಕಳುಹಿಸಿರುವುದು ತನಿಖೆಯಿಂದ ಬೆಳಕಿಗೆ ಬಂದ ನಂತರ ಅವರನ್ನು ಬಂಧಿಸಿದ್ದಾರೆ. 10 ದಿನಗಳೊಳಗೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯದಿದ್ದರೆ ‘ಬಾಬಾ ಸಿದ್ದಿಕಿ ಅವರಂತೆ ಕೊಲೆ ಮಾಡಲಾಗುವುದು’ ಎಂದು ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಯುವತಿ ಫಾತಿಮಾ ಖಾನ್ ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಆದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯುವತಿ ಮುಂಬೈ ಬಳಿಯ ಥಾಣೆಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ, ಆಕೆಯ ತಂದೆ ಮರದ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಯೋಗಿ ಆದಿತ್ಯನಾಥ ವಿರುದ್ಧ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿಯಂತ್ರಣ ಕೊಠಡಿಯ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದ್ದು, 10 ದಿನಗಳಲ್ಲಿ ಯೋಗಿ ಆದಿತ್ಯನಾಥ ರಾಜೀನಾಮೆ ನೀಡದಿದ್ದರೆ, “ಬಾಬಾ ಸಿದ್ದಿಕಿ ಅವರಂತೆ ಕೊಲ್ಲಲಾಗುವುದು” ಎಂದು ಬೆದರಿಕೆ ಹಾಕಲಾಗಿದೆ.
ಮಾಜಿ ಸಚಿವ ಹಾಗೂ ಅಜಿತ ಪವಾರ್‌ ಬಣದ ಬಾಬಾ ಸಿದ್ದಿಕಿ ಅವರನ್ನು ಅವರ ಹಾಗೂ ಬಾಂದ್ರಾ ಶಾಸಕ ಜೀಶಾನ್ ಸಿದ್ದಿಕಿ ಅವರ ಕಚೇರಿಯ ಬಳಿ ಅಕ್ಟೋಬರ್ 12 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೊಲೆಯ ಹೊಣೆ ಹೊತ್ತುಕೊಂಡಿದೆ.