ಮಂಗಳೂರು: ಕಡಬ ಬಳಿಯ ಕೋಡಿಂಬಾಳ ಸಮೀಪದ ಪುಳಿಕುಕ್ಕು ಮರಚೆಡವು ಬಳಿ ಎರಡು ದಿನಗಳ ಹಿಂದೆ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಎಡಮಂಗಲ ಗ್ರಾಮದ ದೇವಸ್ಯ ಸೀತಾರಾಮ ಗೌಡ ಸ್ಥಳದಲ್ಲೇ ಮೃತಪಟ್ಟು ಎರಡು ದಿನ ಕಳೆದಿದೆ. ಆದರೆ, ಅವರು ಸ್ಕೂಟಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕೋಳಿ ಮಾತ್ರ ಘಟನೆ ನಡೆದು ಎರಡು ದಿನ ಕಳೆದರೂ ಸ್ಥಳ ಬಿಟ್ಟು ಕದಲಲಿಲ್ಲ. ಸೀತಾರಾಮ ಅವರು ದೀಪಾವಳಿ ಪ್ರಯುಕ್ತ ಮನೆಯಲ್ಲಿ ನಡೆಯುವ ದೈವದ ಹರಕೆಗೆ ಕೋಳಿ ತೆಗೆದುಕೊಂಡು ಹೋಗುತ್ತಿದ್ದಾಗ ದೂಪದ ಮರ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಸ್ಕೂಟಿಯಲ್ಲಿ ಕೋಳಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಕೋಳಿಯ ಕಾಲಿಗೆ ಹಗ್ಗದಿಂದ ಕಟ್ಟಿದ್ದರಿಂದ ಸೀತಾರಾಮ ಅವರ ಅವಘಡವಾದ ನಂತರ ಸ್ಥಳಕ್ಕೆ ಬಂದ ಜನ ಕೋಳಿಯ ಕಾಲಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಬಿಟ್ಟಿದ್ದರು. ಆಗ ಅದು ಸನಿಹದ ಕಾಡಿನೊಳಗೆ ಹೋಗಿತ್ತು. ಈಗ ಕೋಳಿ ಜನ ಚದುರಿದ ಬಳಿಕ ಮರ ಬಿದ್ದು ನಜ್ಜುಗುಜ್ಜಾಗಿದ್ದ ಸ್ಕೂಟಿಯ ಮೇಲೆ ಬಂದು ಕುಳಿತುಕೊಂಡಿದೆ. ಜನ ಹತ್ತಿರ ಬಂದಾಗ ಮರದ ರೆಂಬೆ ಮೇಲೆ ಆಶ್ರಯ ಪಡೆಯುತ್ತಿದೆ. ಘಟನೆ ನಡೆದು ಎರಡು ದಿನ ಕಳೆದರೂ ಕೋಳಿ ಹೋಗದೆ ಇರುವುದು ಈಗ ಅಚ್ಚರಿಗೆ ಕಾರಣವಾಗಿದೆ.