ರಿಯಾದ್: ಸೌದಿ ಅರೇಬಿಯಾ ಎಂದರೆ ಮರಳುಗಾಡು. ಸದಾ ಸುಡುವಷ್ಟು ಬಿಸಿಲಿರುವ ಮರುಭೂಮಿಯಲ್ಲಿ ಈಗ ಹಿಮಪಾತ, ಮಳೆಯ ಅಬ್ಬರ.
ಹವಾಮಾನ ವೈಪರೀತ್ಯದಿಂದಾಗಿ ಸೌದಿ ಅರೇಬಿಯಾದ ಹಲವು ಭಾಗಗಳಲ್ಲಿ ಹಿಮ ಬೀಳುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ಕಾಣುತ್ತಿದ್ದ ಮರಳು ಗುಡ್ಡಗಳ ಮೇಲೆ ಹಿಮಗಳ ರಾಶಿ ಬಿದ್ದಿದೆ.
ಅಲ್ -ಜಾವ್ನ್ ಪ್ರಾಂತ್ಯದ ಉತ್ತರ ಗಡಿಪ್ರದೇಶಗಳಾದ ರಿಯಾದ್, ಮೆಕ್ಕಾ, ಆಸಿರ್, ತಬೂಕ್ ಮತ್ತು ಅಲ್ ಬಹಾಹ್ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಮತ್ತು ಹಿಮ ಬೀಳುತ್ತಿದೆ.
ಮರುಭೂಮಿಯಲ್ಲಿ ಹಿಮ ಮತ್ತು ಮಳೆಯಾಗುತ್ತಿರುವ ಅಪರೂಪದ ದೃಶ್ಯ ನೋಡಿ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಇದರ ವಿಡಿಯೊ, ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸೌದಿಯಲ್ಲಿ ಹಿಮ ಬೀಳಲು ಕಾರಣವೇನು ?
ಅರಬ್ಬಿ ಸಮುದ್ರದಲ್ಲಿ ಉಂಟಾದ ಕಡಿಮೆ ಒತ್ತಡದ ಪರಿಣಾಮ ಒಮಾನ್‌ಗೂ ಆವರಿಸಿದೆ. ಇದರಿಂದಾಗಿ ಶುಷ್ಕತೆಯಿಂದ ಇರುವ ಪ್ರದೇಶದಲ್ಲಿ ತೇವಾಂಶದಿಂದ ಕೂಡಿರುವ ಗಾಳಿ ಬೀಸುತ್ತಿದೆ. ಇದು ಸೌದಿ ಅರೇಬಿಯಾ ಮತ್ತು ನೆರೆಯ
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಾದ್ಯಂತ ಗುಡುಗು, ಆಲಿಕಲ್ಲು ಮಳೆ, ಹಿಮ ಬೀಳಲು ಕಾರಣವಾಗಿದೆ ಎಂದು ಯುಎಇಯ ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.ಪ್ರತಿಕೂಲ ಹವಾಮಾನ ಇರುವ ಕಾರಣ ಅಲ್-ಜಾವ್‌ನಾದ್ಯಂತ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ, ತೀವ್ರ ಗಾಳಿ ಬೀಸಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ ಎಂದು ಸೌದಿ ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮರುಭೂಮಿಯಲ್ಲಿ ಹಿಮ ಬೀಳುವುದು ತೀರಾ ಅಪರೂಪದ ವಿದ್ಯಮಾನ. ಆದರೆ ಹಿಮ ಬೀಳುವುದೇ ಇಲ್ಲ ಎನ್ನುವಂತಿಲ್ಲ ಎನ್ನುತ್ತಾರೆ ತಜ್ಞರು.
ಕೆಲವು ವರ್ಷಗಳ ಹಿಂದೆ ಸಹರಾ ಮರುಭೂಮಿ ಪ್ರದೇಶದ ಪಟ್ಟಣದಲ್ಲಿ ತಾಪಮಾನ 58 ಡಿಗ್ರಿಗೆ ಏರಿಕೆಯಾಗಿತ್ತು. ಆದರೆ ಏಕಾಏಕಿ ಆದ ಹಿಮಪಾತದಿಂದ ತಾಪಮಾನ ಇಳಿಕೆಯಾಗಿ ಮೈನಸ್ 2 ಡಿಗ್ರಿಗೆ ತಲುಪಿತ್ತು. ಹವಾಮಾನ ಬದಲಾವಣೆಯ ಕಾರಣದಿಂದಾಗಿ ಈ ರೀತಿ ವಿದ್ಯಮಾನವು ಸಂಭವಿಸುತ್ತದೆ. ಹವಾಮಾನ ವೈಪರೀತ್ಯಗಳ ಪರಿಣಾಮಗಳಿಗೆ ಪಶ್ಚಿಮ ಏಷ್ಯಾವು ಹೆಚ್ಚು ಒಳಗಾಗುತ್ತವೆ.
ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ವಾತಾವರಣದ ಪರಿಸ್ಥಿತಿಗಳಲ್ಲೂ ಬದಲಾವಣೆಯಾಗುತ್ತವೆ. ಹೀಗಾಗಿ ಮರುಭೂಮಿಗಳಲ್ಲಿ ಹಿಮಪಾತ ಸೇರಿದಂತೆ ಇಂತಹ ಅಸಾಮಾನ್ಯ ಹವಾಮಾನ ಘಟನೆಗಳು ಆಗಾಗ ಆಗುತ್ತವೆ ಎನ್ನುತ್ತಾರೆ ತಜ್ಞರು.