ಭಟ್ಕಳ- ವೆಯಿಲ್ ಫೌಂಡೇಶನ್ ಬೆಂಗಳೂರು ಅವರು ಕೊಡಮಾಡುವ ೨೦೨೪ ರ ಪ್ರತಿಷ್ಠಿತ ರವೀಂದ್ರ ರತ್ನ ಪುರಸ್ಕಾರಕ್ಕೆ ಉಮೇಶ ಮುಂಡಳ್ಳಿ ಆಯ್ಕೆಯಾಗಿರುತ್ತಾರೆ.

ಸಾಮಾಜಿಕ ಕ್ಷೇತ್ರದಲ್ಲಿ ಅವರ ಮಹತ್ವದ ಕೊಡುಗೆಗಳನ್ನು ಸೇವೆಗಳನ್ನು ಪರಿಗಣಿಸಿ ಉತ್ತಮ ಸಮಾಜ ಸೇವಕ ಎಂದು ೨೦೨೪ ರ ರವೀಂದ್ರ ರತ್ನ ಪುರಸ್ಕಾರ ಕ್ಕೆ ಆಯ್ಕೆ ಮಾಡಲಾಗಿದೆ.
ವಿಶೇಷವಾಗಿ ಸಮುದಾಯ ಜಾಗೃತಿಯಲ್ಲಿ ಅವರ ನಿನೂತನ ಪ್ರಯೋಗಗಳು,೨೦೦೩ ರಿಂದ ೨೦೦೮ ರವರೆಗೆ ಸುಸ್ಥಿರ ಅರಣ್ಯ ಹಾಗೂ ಸಾವಯವ ಕೃಷಿ, ಸ್ವಸಹಾಯ ಸಂಘಗಳ ಮಹತ್ವತೆ ಪ್ರಚುರಪಡಿಸಿರುವ ರೀತಿ,ಅಲ್ಲದೇ ಸುಮಾರು ಎರಡು ದಶಕಗಳಿಂದ ಹಲವಾರು ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾಹಿತಿ ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡ ವಿಧಾನ ಇವುಗಳನ್ನು ಪರಿಗಣಿಸಲಾಗಿದೆ.
2009 ರಿಂದ, ಉಮೇಶ್ ಅವರು ಕರ್ನಾಟಕ ಸರ್ಕಾರದ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದಲ್ಲಿ ಸಾಮಾಜಿಕ ಪರಿಶೋಧನಾ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರ ಸ್ಥಾನವನ್ನು ಹೊಂದಿದ್ದು ಅನೇಕ ಯೋಜನೆಗಳಲ್ಲಿ ಸಕ್ರಿಯವಾಗಿ ಸಾಮಾಜಿಕ ಪರಿಶೋಧನೆ ಯಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ. ಮಾತ್ರವಲ್ಲದೆ ವಿಶೇಷವಾಗಿ ಗ್ರಾಮೀಣ ಸಮುದಾಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಜಾಗೃತಿಯನ್ನು ಉತ್ತೇಜಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಮಾಜ ಸೇವೆಯಲ್ಲಿನ ಬದ್ಧತೆ ಹಾಗೂ ಕ್ರಿಯಾಶೀಲ ಮನೋಭಾವನೆ ಪರಿಗಣಿಸಿ ವೆಯಿಲ್ ಫೌಂಡೇಶನ್ ಬೆಂಗಳೂರು ಅವರು ಉತ್ತಮ ಸಮಾಜ ಸೇವಕ ಎಂಬ ಬಿರುದು ಸೇರಿದಂತೆ ೨೦೨೪ ರ ರರವೀಂದ್ರ ರತ್ನ ಪುರಸ್ಕಾರವನ್ನು ಘೋಷಿಸಿದೆ ಎಂದು ಪ್ರಶಸ್ತಿ ಸಮಿತಿಯ ಮುಖ್ಯಸ್ಥ ಚಂದ್ರಶೇಖರ ಕೆ.ಎನ್.ಹಾಗೂ ಸಂಸ್ಥೆಯ ಅಧ್ಯಕ್ಷ ಜಾನ್ ಥಾಮಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಡುವಿನ ವೇಳೆಯನ್ನೂ ಸದುಪಯೋಗ ಪಡಿಸಿಕೊಳ್ಳುತ್ತಾ ಬರುತ್ತಿರುವ ಕವಿಗಳು ಲೇಖಕರು ಹಾಗೂ ಸುಗಮಸಂಗೀತ ಗಾಯಕರಾಗಿರುವ ಉಮೇಶ ಮುಂಡಳ್ಳಿಯವರಿಗೆ ಈಗಾಗಲೇ ಕರ್ನಾಟಕ ಸರ್ಕಾರದ ಯುವ ಪ್ರಶಸ್ತಿ ಸೇರಿದಂತೆ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ನ್ಯಾಷನಲ್ ಐಕಾನ್ ಅವಾರ್ಡ್, ಬಸವ ಚೇತನ ಪ್ರಶಸ್ತಿ, ಕರುನಾಡ ಸಾದಕ ರತ್ನ ಮೊದಲಾದ ಹತ್ತಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿ ಗಳು ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.