ನವದೆಹಲಿ : ಭಾರತವು ಭಯೋತ್ಪಾದಕ ಎಂದು ಘೋಷಿಸಿರುವ ಖಲಿಸ್ತಾನಿ ಉಗ್ರ ಅರ್ಶದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾನನ್ನು ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಗುಂಡಿನ ದಾಳಿಯ ನಂತರ ಬಂಧಿಸಿರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಅಕ್ಟೋಬರ್ 28 ರಂದು ಮಿಲ್ಟನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ದಲ್ಲಾ, ನಿಷೇಧಿತ ಖಾಲಿಸ್ತಾನ ಟೈಗರ್‌ ಫೋರ್ಸ್‌ನೊಂದಿಗೆ (ಕೆಟಿಎಫ್‌) ನಂಟು ಹೊಂದಿದ್ದಾನೆ ಎಂದು ಹೇಳಿವೆ.’ಬಂದೂಕಿನಿಂದ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿದ’ ಆರೋಪದ ಮೇಲೆ 25 ವರ್ಷದ ಹಾಲ್ಟನ್‌ ಹಿಲ್ಸ್‌ ನಿವಾಸಿ ಹಾಗೂ 28 ವರ್ಷದ ಸರ‍್ರೆ ಬಿ.ಸಿ ನಿವಾಸಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ’ ಎಂದು ಹಾಲ್ಟನ್‌ ಪ್ರಾದೇಶಿಕ ಪೊಲೀಸ್‌ ಸೇವೆಗಳ (ಎಚ್‌ಆರ್‌ಪಿಎಸ್) ಅಧಿಕಾರಿಗಳು ಅಕ್ಟೋಬರ್‌ 29ರಂದು ಹೇಳಿದ್ದರು.
ಆದರೆ ಬಂಧಿತರ ಗುರುತನ್ನು ಬಹಿರಂಗಪಡಿಸಲಿಲ್ಲ.

ಬಂಧಿತರಲ್ಲಿ ಒಬ್ಬರು ಕೆನಡಾ ಮೂಲದ ದರೋಡೆಕೋರ ಅರ್ಶ್ ದಲ್ಲಾ ಎಂದು ನಂಬಲಾಗಿದೆ, ಅವರು ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ನೊಂದಿಗೆ ಸಂಬಂಧ ಹೊಂದಿದ್ದಾನೆ ಮತ್ತು ಈತ ಕಳೆದ ವರ್ಷ ಜೂನ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಪರವಾಗಿ ಭಯೋತ್ಪಾದನಾ ಘಟಕಗಳನ್ನು ನಡೆಸುತ್ತಿದ್ದ ಎಂದು ಮೂಲಗಳು ಹೇಳಿವೆ..
ಈ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಒಬ್ಬಾತನಿಗೆ ಗುಂಡೇಟು ತಗುಲಿತ್ತು. ಚಿಕಿತ್ಸೆ ನಂತರ ಇಬ್ಬರನ್ನೂ ಮನೆಗೆ ಕಳುಹಿಸಲಾಗಿತ್ತು. ಗುಂಡು ಹಾರಿಸಿದ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು, ಇಬ್ಬರನ್ನೂ ಬಂಧಿಸಿದ್ದಾರೆ’ ಎಂದು ಎಚ್‌ಆರ್‌ಪಿಎಸ್ ಅಧಿಕಾರಿಗಳು ಹೇಳಿದ್ದಾರೆ.

ಮೊಹಾಲಿಯ ಖರಾರ್‌ನಲ್ಲಿ ಕಳೆದ ತಿಂಗಳು ಸಿಖ್ ಕಾರ್ಯಕರ್ತನ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅರ್ಶ್ ದಲ್ಲಾ ಗ್ಯಾಂಗ್‌ನ ಇಬ್ಬರು ಶೂಟರ್‌ಗಳನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ಭಾನುವಾರ ಮುಂಜಾನೆ ಪ್ರಕಟಿಸಿದ್ದರು. ರಾಜ್ಯ ವಿಶೇಷ ಕಾರ್ಯಾಚರಣೆ ಘಟಕ, ದರೋಡೆಕೋರ ನಿಗ್ರಹ ದಳ ಮತ್ತು ಫರೀದ್‌ಕೋಟ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಬಂಧನ ನಡೆದಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ ಯಾದವ ತಿಳಿಸಿದ್ದಾರೆ.
ಇಬ್ಬರನ್ನು ಬರ್ನಾಲಾದ ಭದೋರ್ ನಿವಾಸಿ ಅನ್ಮೋಲ್‌ಪ್ರೀತ್ ಸಿಂಗ್ ಅಲಿಯಾಸ್ ವಿಶಾಲ ಮತ್ತು ಖರಾರ್‌ನ ನಿಜ್ಜರ್ ರಸ್ತೆಯ ನಿವಾಸಿ ನವಜೋತ್ ಸಿಂಗ್ ಅಲಿಯಾಸ್ ನೀತು ಎಂದು ಗುರುತಿಸಲಾಗಿದೆ. “ಹರಿ ನೌ ಟಾಕ್ಸ್” ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಗುರ್‌ಪ್ರೀತ್ ಸಿಂಗ್ ಹರಿ ನೌ ಅವರನ್ನು ಗುರಿಯಾಗಿಸಲು ಅರ್ಶ್ ದಲ್ಲಾ ನವಜೋತ್‌ಗೆ ಟಾಸ್ಕ್ ನೀಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಉದ್ದೇಶಿತ ಹತ್ಯೆಗಳು, ಭಯೋತ್ಪಾದನೆ ಹಣಕಾಸು ಮತ್ತು ಸುಲಿಗೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಅರ್ಶ್ ದಲ್ಲಾ ನನ್ನು ಕಳೆದ ವರ್ಷ ಜನವರಿಯಲ್ಲಿ ಭಾರತ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿತ್ತು. ಗಡಿಯಾಚೆಗಿನ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ಆತ ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದಾನೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಪಂಜಾಬ್‌ನಲ್ಲಿ ಉದ್ದೇಶಿತ ಹತ್ಯೆ, ಭಯೋತ್ಪಾದನೆ ನಿಧಿಗಾಗಿ ಹಣ ಸುಲಿಗೆ, ಕೊಲೆ ಯತ್ನ, ಕೋಮು ಸೌಹಾರ್ದ ಕದಡುವುದು ಮತ್ತು ಜನರಲ್ಲಿ ಭಯೋತ್ಪಾದನೆ ಸೃಷ್ಟಿಸುವುದು ಸೇರಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿರುವ ಮತ್ತು ತನಿಖೆ ನಡೆಸುತ್ತಿರುವ ವಿವಿಧ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ.

ಗಿಲ್ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು ಆದ್ದರಿಂದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಅಡಿಯಲ್ಲಿ ಭಯೋತ್ಪಾದಕ ಎಂದು ಗೊತ್ತುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.