ಬೆಂಗಳೂರು : ಕೇಂದ್ರ ಸರ್ಕಾರ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಟೆಂಡರ್ ಆಹ್ವಾನಿಸಿದೆ. ಇದರಿಂದ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿದೆ.
ಬೆಂಗಳೂರು ಟು ಮಂಗಳೂರು ಹೋಗಬೇಕು ಅಂದರೆ ಸುಮಾರು 350 ಕಿಮೀ, ಕನಿಷ್ಟ ಆರರಿಂದ ಏಳು ಗಂಟೆಗಳ ಕಾಲ ಬೇಕಾಗುತ್ತದೆ. ಆದರೆ ಈ ಸಮಯವನ್ನು ಕಡಿಮೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಬೆಂಗಳೂರು ಟು ಮಂಗಳೂರು ಎಕ್ಸ್ ಪ್ರೆಸ್ ವೇ ಕಾರಿಡಾರ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಇದರಿಂದ ಮೂರೂವರೆ ಗಂಟೆಯಿಂದ ನಾಲ್ಕು ಗಂಟೆಯೊಳಗೆ ಬೆಂಗಳೂರಿನಿಂದ-ಮಂಗಳೂರು ತಲುಪಬಹುದು ಎಂದು ಅಂದಾಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿತ್ತು. ಒಂಬತ್ತು ಕಂಪನಿಗಳು ಟೆಂಡರ್ನಲ್ಲಿ ಭಾಗಿಯಾಗಿವೆ. ಜನವರಿ ವೇಳೆಗೆ ಟೆಂಡರ್ ಫೈನಲ್ ಆಗುವ ಸಾಧ್ಯತೆಗಳಿವೆ. ಇದರಿಂದ ಬೆಂಗಳೂರಿನಿಂದ ವಿದೇಶಕ್ಕೆ ಸಾಗಿಸುವ ಸಾಮಾಗ್ರಿಗಳನ್ನು ಸಾಗಿಸಲು ಸಹಾಯ ಆಗುತ್ತದೆ ಮತ್ತು ವಿದೇಶದಿಂದ ಭಾರತಕ್ಕೆ ಬರುವ ಇಂಧನ, ಗ್ಯಾಸ್, ಮೈನ್ಸ್ ಮಂಗಳೂರು ಬಂದರಿನ ಮೂಲಕ ಬೆಂಗಳೂರಿಗೆ ತರಲು ಸಹಾಯ ಆಗುತ್ತದೆ ಎಂದು ಟ್ರಾಫಿಕ್ ಎಕ್ಸ್ಪರ್ಟ್ ಚಂದ್ರಶೇಖರ್ ಹೇಳಿದ್ದಾರೆ.
ಇನ್ನೂ ಡಿಪಿಆರ್ ರೆಡಿ ಮಾಡಲು ಒಂಬತ್ತು ಕಂಪನಿಗಳು ಟೆಂಡರ್ ಸಲ್ಲಿಸಿವೆ. ಈ ಹೈ ಸ್ಪೀಡ್ ಕಾರಿಡಾರ್ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರು ತಲುಪಲಿವೆ. ನಾಲ್ಕು ಅಥವಾ ಆರು ಲೈನ್ ರೋಡ್ ಮಾಡಲು ಪ್ಲಾನ್ ಮಾಡಲಾಗ್ತಿದೆ. ಈ ಎಕ್ಸ್‌ಪ್ರೆಸ್ ವೇ 335 ಕಿಮೀ ವಿಸ್ತೀರ್ಣ ಇರಲಿದೆ. ಟೆಂಡರ್ ಪಡೆದುಕೊಳ್ಳುವ ಕಂಪನಿಗೆ ಡಿಪಿಆರ್ ವರದಿ ಸಲ್ಲಿಸಲು 540 ದಿನಗಳ ಕಾಲ ಅವಕಾಶ ನೀಡಲಾಗುತ್ತದೆ.
2028 ರಲ್ಲಿ ಈ ಹೈ ಸ್ಪೀಡ್ ಕಾರಿಡಾರ್ ಯೋಜನೆಯ ಕೆಲಸ ಆರಂಭವಾಗಲಿದೆ ಅಂತ ಹೇಳಲಾಗುತ್ತಿದೆ. ಇದು ಅಷ್ಟು ಸುಲಭದ ಕೆಲಸವಲ್ಲ, ಕಾರಣ ಈ ಎಕ್ಸ್‌ಪ್ರೆಸ್ ವೇ ಮಾಡಲು ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ, ಅದಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಬೆಂಗಳೂರು ಟು ಮಂಗಳೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್ ಓಪನ್ ಆದ್ರೆ, ಜನರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗುತ್ತದೆ. ಪ್ರವಾಸೋದ್ಯಮವು ಬೆಳೆಯಬಹುದು. ಆದರೆ ರಸ್ತೆ ನಿರ್ಮಾಣ ವೇಳೆ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಭಾರೀ ಹಾನಿ ಉಂಟಾಗಬಹುದು. ಜೊತೆಗೆ ಸಾವಿರಾರು ಮರಗಳು ನಾಶವಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಪರಿಸರವಾದಿಗಳು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ.