ಮೈಸೂರು : ಉಪಚುನಾವಣೆಯ ಫಲಿತಾಂಶ ಬಂದ ಬೆನ್ನಲ್ಲೇ, ಸಿದ್ದರಾಮಯ್ಯನವರು ಸಂಪುಟವನ್ನು ಪುನರ್ ರಚಿಸಲಿದ್ದಾರೆ ಎನ್ನುವ ಸುದ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆಯನ್ನು ನೀಡಿದ್ದಾರೆ. ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 170 ಕೋಟಿ ವೆಚ್ಚದ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಮತ್ತು ಕಲಾ ಕಾಲೇಜಿನ ನೂತನ ವಸತಿ ನಿಲಯ ಕಟ್ಟಡ ಹಾಗೂ ವಿಜ್ಞಾನ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇದಕ್ಕೂ ಮುನ್ನ, ಮಾಧ್ಯಮದವರಿಗೆ ಸ್ಪಷ್ಟನೆಯನ್ನು ನೀಡಿದರು. ಇಂದು ಮತದಾನ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲಿ ಜನಸ್ಪಂದನೆ ನೋಡಿದರೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕ ದೊಡ್ಡ ರಾಜ್ಯವಾಗಿದ್ದು, ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದಿರುವುದರಿಂದ , ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಿಯವರು ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ” ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಸಂಪುಟ ಪುನರ್ ರಚನೆಯಾಗಲಿ ಸಂಪುಟ ವಿಸ್ತರಣೆಯ ಯಾವ ವಿಚಾರವೂ ನಮ್ಮ ಅಥವಾ ಹೈಕಮಾಂಡ್ ಮುಂದೆ ಇಲ್ಲ.

ಈ ಬಗ್ಗೆ ಏನಾದರೂ ಇದ್ದರೆ, ನಾನೇ ಮಾಹಿತಿಯನ್ನು ನೀಡುತ್ತೇನೆ. ಕೆಲವು ಸಚಿವರನ್ನು ವಜಾಗೊಳಿಸಲಾಗುವುದು ಎನ್ನುವ ಸುದ್ದಿಯೆಲ್ಲಾ ಸತ್ಯಕ್ಕೆ ದೂರವಾದದ್ದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಭ್ರಷ್ಟಾಚಾರದ ಆರೋಪ ಬಂದಿರುವ ಹಿನ್ನಲೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಇವರ ಜೊತೆಗೆ, ಕೆ.ಎನ್.ರಾಜಣ್ಣ, ಎನ್.ಎಸ್.ಬೋಸರಾಜು, ಎಸ್.ಎಸ್.ಮಲ್ಲಿಕಾರ್ಜುನ ಸೇರಿದಂತೆ ಏಳು ಸಚಿವರನ್ನು ಸಂಪುಟದಿಂದ ಕೈಬಿಡಲಾಗುವುದು ಎಂದು ಸುದ್ದಿಯಾಗಿತ್ತು. ” ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆಯಿಲ್ಲ, ರಾಜೀನಾಮೆ ನೀಡಿರುವ ಬಿ.ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಹಲವರು ಒತ್ತಡವನ್ನು ಹಾಕುತ್ತಿದ್ದಾರೆ.

ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಯಷ್ಟೇ ಸದ್ಯ ನಡೆಯುತ್ತಿದೆ. ಉಪಚುನಾವಣೆಯ ಫಲಿತಾಂಶ ಬಂದ ನಂತರ ತೀರ್ಮಾನ ಮಾಡುತ್ತೇನೆ ” ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಯನ್ನು ನೀಡಿದ್ದಾರೆ.ವಾಲ್ಮೀಕಿ ಅಭಿವೃದ್ದಿ ನಿಗಮ ಮಂಡಳಿಯ ಅವ್ಯವಹಾರ ನಡೆದಿದೆ ಎಂದು ಆರೋಪ ಬಂದ ಹಿನ್ನಲೆಯಲ್ಲಿ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವರಗಿದ್ದ ಬಿ.ನಾಗೇಂದ್ರ ಅವರು ಜೂನ್ 6ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ, ಅಕ್ರಮ ಹಣ ವರ್ಗಾವಣೆ ಆರೋಪದಡಿ ಇವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಇದಾದ ನಂತರ ವಿಶೇಷ ತನಿಖಾ ದಳ ಇವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು.

ನಂತರ, ಜೈಲಿನಿಂದ ಬಿಡುಗಡೆಯನ್ನೂ ಹೊಂದಿದ್ದರು. ಮೈಸೂರಿನಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ನಾಗೇಂದ್ರ ಅವರನ್ನು ಬಿಜೆಪಿ ಹಣೆದ ಬಲಿಪಶು ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಸ್ಪಷ್ಟನೆಯ ನಂತರ, ಸಂಪುಟ ಪುನರಾರಚನೆ, ವಿಸ್ತರಣೆ ಯಾವುದೂ ಸದ್ಯಕ್ಕಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಜೊತೆಗೆ, ನಾಗೇಂದ್ರ ಅವರು ಸಂಪುಟ ಸೇರುವುದೂ ಬಹುತೇಕ ಖಚಿತವಾದಂತಾಗಿದೆ.