ಬೆಳಗಾವಿ: ನಮಗಾಗಿ ಸನಾತನ ಮಂಡಳಿ, ಸನಾತನ ಕಾನೂನು ಕಾಯ್ದೆ ರೂಪಿಸಲು ಬೇಡಿಕೆ ಇಟ್ಟಿರುವ ವಿವಿಧ ಸ್ವಾಮೀಜಿಗಳು ವಕ್ಫ್ ಮಂಡಳಿ ರೈತರ ಜಮೀನು ಕಸಿಯುತ್ತಿದ್ದು, ಎಲ್ಲರೂ ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಕರೆ ನೀಡಿದ್ದಾರೆ.
ಇಲ್ಲಿಯ ಸಂಭಾಜಿ ಉದ್ಯಾನದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ವಕ್ಫ್ ಹಟಾವೋ, ದೇಶ ಬಚಾವೋ ಆಂದೋಲನದಲ್ಲಿ ಮಾತನಾಡಿದರು.
ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿ ಮೂಲಕ ರೈತರ ಭೂಮಿ ಕಸಿದುಕೊಳ್ಳಲು ಹುನ್ನಾರ ನಡೆಸಿದೆ. ಇದರ ವಿರುದ್ಧ ಎಲ್ಲರೂ ಒಂದಾಗಿ ಹೋರಾಡಬೇಕು. ಈ ಮೂಲಕ ವಕ್ಫ್ ಮಂಡಳಿಯನ್ನೇ ಮನೆಗೆ ಕಳುಹಿಸೋಣ ಎಂದು ಕೊಲ್ಲಾಪುರದ ಕನೇರಿ ಮಠದ
ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.ದೇಶದ ವಿಭಜನೆಗಾಗಿ ಬ್ರಿಟಿಷರು ರೂಪಿಸಿದ ಈ ಕಾಯ್ದೆ ಬೇರೆ ಬೇರೆ ಕಾಲಘಟ್ಟದಲ್ಲಿ ತಿದ್ದುಪಡಿಯಾಯಿತು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ರೈತರ ಭೂಮಿಗೆ ಈಗ ವಕ್ಫ್
ಮಂಡಳಿ ಹೆಸರು ಸೇರ್ಪಡೆಯಾಗುತ್ತಿದೆ. ಇದು ಸಾಂವಿಧಾನಿಕವಾದ ಕಾಯ್ದೆಯಲ್ಲ. ನಮ್ಮ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ನಾವು ಹೋರಾಡದಿದ್ದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಬಂದಿರುವ ಸ್ಥಿತಿ ನಮಗೂ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಉಗ್ರವಾದದ ಮೂಲಕ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಗೊಳಿಸಲು ಸಂಚು ನಡೆದಿದೆ. ಬೇರೆ ದೇಶಗಳ ಶತ್ರುಗಳು ನಮಗೆ ಅನ್ಯಾಯ ಮಾಡುತ್ತಿಲ್ಲ. ಬದಲಿಗೆ, ನಮ್ಮಲ್ಲಿ ಇರುವವರಿಂದಲೇ ಅನ್ಯಾಯ ನಡೆದಿದೆ. ನೀವು ಅಲ್ಪಸಂಖ್ಯಾತರಾಗಬೇಡಿ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಲಜಿಯ ಶಿವಾನಂದ ಗುರೂಜಿ, ಜಾಲಿಕೊಪ್ಪದ ಶಿವಾತ್ಮಾನಂದ ಸ್ವಾಮೀಜಿ, ಮುನವಳ್ಳಿಯ ಮುಕ್ತಾನಂದ ಸ್ವಾಮೀಜಿ, ಕಾರಂಜಿ ಮಠದ ಶಿವಯೋಗಿ ದೇವರು, ಶಿವಾಪುರದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಇತರರು ಇದ್ದರು.
ಇದಕ್ಕೂ ಮುನ್ನ, ಕಪಿಲೇಶ್ವರ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.