ಬೆಳಗಾವಿ : ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಾಡೋಜ ಕೋ. ಚೆನ್ನಬಸಪ್ಪ ಅವರ ಬದುಕು ಸಾಹಿತ್ಯ ಕುರಿತು ವಿಚಾರ ಸಂಕಿರಣ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ. ಆರ್. ಕುಲಕರ್ಣಿ ಅವರು, ಪ್ರತಿಯೊಬ್ಬರು ಕೋ. ಚೆನ್ನಬಸಪ್ಪ ಅವರ ಆದರ್ಶವನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಸದಸ್ಯ ಡಾ. ಬಸವರಾಜ. ಸಾದರ ಅವರು ಕೋ. ಚೆ ಯವರ ಸಾಹಿತ್ಯದ ಪ್ರಚಾರ ಹಾಗೂ ಪ್ರಸಾರ ಇನ್ನೂ ಹೆಚ್ಚ ಬೇಕೆಂಬ ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅನಿಲಕುಮಾರ. ಹವಾಲ್ದಾರ ಅವರು ಕೋ. ಚೆ ಯಂತಹ ಪ್ರತಿಭೆಗಳನ್ನು ನಾಡಿಗೆ ಕೊಡುಗೆ ನೀಡಿದ ನಮ್ಮ ಮಹಾವಿದ್ಯಾಲಯ ಮುಂಬರುವ ದಿನಗಳಲ್ಲೂ ಒಳ್ಳೆಯ ಪ್ರತಿಭೆಗಳನ್ನು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಡಾ. ಬಸವರಾಜ. ಜಗಜಂಪಿ ಅವರು ಕೋ. ಚೆ ಯವರ ಬದುಕು ಮತ್ತು ವ್ಯಕ್ತಿತ್ವ ಕುರಿತು, ಡಾ. ಗುರುದೇವಿ. ಹುಲೆಪ್ಪನವರಮಠ ಅವರು ಕೋ. ಚೆ. ಸಾಹಿತ್ಯದಲ್ಲಿ ಪ್ರಗತಿಪರ ಚಿಂತನಗಳು ಕುರಿತು, ಡಾ. ಪ್ರಸನ್ನಕುಮಾರ ಅವರು ಕೋ. ಚೆ. ನ್ಯಾಯಿಕ ಸಾಹಿತ್ಯ ಕುರಿತು, ಡಾ. ಪಿ. ಜಿ. ಕೆಂಪಣ್ಣವರ ಅವರು ಕೋ. ಚೆ. ಸೃಜನೇತರ ಸಾಹಿತ್ಯ ಕುರಿತು ಪ್ರಬಂಧ ಮಂಡನೆ ಮಾಡಿದರು. ಕೋ. ಚೆ ಯವರ ಅಳಿಯ ಸಂಗಮದೇವ ಗುಡಗಿ ಯವರು ಸಹ ಕೋ. ಚೆ ಯವರ ಸತ್ಯ -ನಿಷ್ಠುರ ಗುಣಗಳು ನಮಗೆ ಮಾದರಿಯಾಗಿವೆ ಎಂದರು.

ಪ್ರೊ. ಎಸ್. ಎಸ್. ಹೆಗಡೆ ವಂದಿಸಿದರು. ಸಹನಾ ನಿರೂಪಿಸಿದರು. ಡಾ. ರಾಮಕೃಷ್ಣ ಮರಾಠೆ, ಡಾ. ಎಸ್.ಬಿ. ಘಾಟಗೆ, ಶಿರೀಷ. ಜೋಶಿ, ಡಾ. ಹರೀಶ ಕೋಲಕಾರ, ಡಾ. ಹೇಮಾ ಸೋನೊಳ್ಳಿ, ಸ. ರಾ. ಸುಳಕುಡೆ ಮುಂತಾದ ಸಾಹಿತಿಗಳು, ಕಾಲೇಜಿನ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.