ಹುಬ್ಬಳ್ಳಿ: ಮಂಟೂರು ಅಡವಿ ಸಿದ್ಧೇಶ್ವರ ಮಠ
ಹಾಗೂ ಶಿವಮೊಗ್ಗ ಜಿಲ್ಲೆ ಬಳ್ಳಿಗಾವಿ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಮನಿಪ್ರ ಶಿವಲಿಂಗೇಶ್ವರ ಸ್ವಾಮೀಜಿ (82) ಭಾನುವಾರ ಬೆಳಗಿನ ಜಾವ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು.
ಹೃದಯಾಘಾತಕ್ಕೊಳಗಾಗಿದ್ದ ಸ್ವಾಮೀಜಿಯವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 11 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದ ಶ್ರೀಗಳು ಭಾನುವಾರ ಬೆಳಗಿನ ಜಾವ 1 ಗಂಟೆ ಹೊತ್ತಿಗೆ ಕೊನೆಯುಸಿರೆಳೆದರು. ಹುಬ್ಬಳ್ಳಿ ತಾಲೂಕಿನ ಮಂಟೂರು ಹಾಗೂ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಅಡವಿ ಸಿದ್ದೇಶ್ವರ ಮಠ, ಹುಬ್ಬಳ್ಳಿ ಹರುಷದೇವರ ಮಠ, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗೆರಕೊಪ್ಪ- ಬೊಪ್ಪಗೊಂಡನಕೊಪ್ಪ ಇಂದುಧರೇಶ್ವರ ಮಠ, ಶಿಕಾರಿಪುರ ತಾಲೂಕು ಬೆಳ್ಳಿಗಾವಿಯ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠ ಹಾಗೂ ಬೀದರ ಜಿಲ್ಲೆ ಬಸವಕಲ್ಯಾಣ ಕೆಳಗಿ ಪೀಠದ ಪೀಠಾಧಿಪತಿಗಳಾಗಿದ್ದರು.
ಮಂಟೂರು ಗ್ರಾಮದ ಗುರುಪಾದಮ್ಮ ಶಿವಜೋಗಯ್ಯನವರ ಮಗನಾಗಿ 1943 ಜುಲೈ 2ರಂದು ಜನಿಸಿದ್ದ ಅವರು ಶ್ರೀಗಳು ತಮ್ಮ ಬಾಲ್ಯ ವಿದ್ಯಾಭ್ಯಾಸವನ್ನು ಮಂಟೂರಿನಲ್ಲಿ ಪೂರ್ಣಗೊಳಿಸಿದ್ದರು. ಶಿವಯೋಗ ಮಂದಿರದಲ್ಲಿ ಅಧ್ಯಯನ ಹಾಗೂ ವಾರಾಣಸಿಯಲ್ಲಿ ಎಂಎ ಸಂಸ್ಕೃತ ಅಧ್ಯಯನ ಮಾಡಿದ್ದರು.
ಮಂಟೂರಿನಲ್ಲಿ ಶಿವಲಿಂಗೇಶ್ವರ ಪ್ರೌಢಶಾಲೆ ಸ್ಥಾಪಿಸಿ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ.
ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಡವಿ ಸಿದ್ದೇಶ್ವರ ಮಠವನ್ನು ಭಕ್ತರ ದೇಣಿಗೆ ಹಾಗೂ ಅವಿರತ ಶ್ರಮದಿಂದ ಅಭಿವೃದ್ಧಿಪಡಿಸಿದ್ದಾರೆ. ಭಕ್ತರೊಂದಿಗೆ ಸೇರಿ ರಾಜ್ಯಕ್ಕೆ ಮಾದರಿಯಾಗುವಂತಹ ರಥ ನಿರ್ಮಿಸಿದ್ದಾರೆ.ವಚನಕಾರ ಅಲ್ಲಮಪ್ರಭುವಿನ ಜನ್ಮಸ್ಥಳ ಶಿಕಾರಿಪುರ ತಾಲೂಕು ಬಳ್ಳಿಗಾವಿಯ ವಿರಕ್ತಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ.
ನಶಿಸುತ್ತಿದ್ದ ಅಲ್ಲಮಪ್ರಭುವಿನ ಮನೆಯನ್ನು ಅನುಭವ ಮಂಟಪವನ್ನಾಗಿಸಲು
ಸಿದ್ಧತೆ ನಡೆಸಿದ್ದರು. ಗ್ರಂಥ ಪ್ರಕಟಣೆಗಳ ಮೂಲಕ ವಚನಗಳ
ಸಂರಕ್ಷಣೆಗೆ ಮುಂದಾಗಿದ್ದರು.