ಸೊಲ್ಲಾಪುರ: ಮಹಾರಾಷ್ಟ್ರ ವಿಧಾನಸಭ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಕಾಸ ಅಘಾಡಿ ಪರ ಪ್ರಚಾರದಲ್ಲಿ ನಿರತರವಾಗಿರುವ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸೋಲ್ಲಾಪುರ ಮತ್ತು ಲಾತೂರು ಕ್ಷೇತ್ರಗಳಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಶನಿವಾರ ಸೊಲ್ಲಾಪುರ ಕ್ಷೇತ್ರದ ಹಲವು ಭಾಗಗಳಲ್ಲಿ ಸಭೆ ನಡೆಸಿದ ಹೆಬ್ಬಾಳಕರ್, ಭಾನುವಾರ ಲಾತೂರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸ್ಥಳೀಯ ಮುಖಂಡರೊಂದಿಗೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ವಿಶೇಷವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಜಾರಿಗೊಳಿಸಿರುವ ಪಂಚ ಗ್ಯಾರಂಟಿ, ಗೃಹಲಕ್ಷ್ಮೀ ಯೋಜನೆಯ ಸಮರ್ಪಕ ಜಾರಿ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಯ ನಿರರ್ಗಳ ಮಾತುಗಳ ಮೂಲಕ ಲಕ್ಷ್ಮೀ ಹೆಬ್ಬಾಳಕರ್ ಅವರು ಅಲ್ಲಿನ ಮತದಾರರ ಮನ ಗೆಲ್ಲುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ ಬಡವರ ಬಗ್ಗೆ ಯೋಚಿಸಿದರೆ ಬಿಜೆಪಿ ಅಂಬಾನಿ, ಅದಾನಿ ಬಗ್ಗೆ ಯೋಜಿಸುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಿಲೆಂಡರ್ ದರವನ್ನು 400 ರೂ.ಗಳಿಂದ 1300 ರೂ.ಗೆ ಏರಿಸಲಾಗಿದೆ. ಬಡವರು, ಮಹಿಳೆಯರಿಗೆ ಸಹಾಯ ಮಾಡುವುದನ್ನು ಬಿಜೆಪಿಯವರಿಗೆ ನೋಡಲು ಸಾಧ್ಯವಿಲ್ಲ. ನಾವು ಜಾರಿಗೆ ತಂದಿರುವ ಬಡವರ ಪರ, ಮಹಿಳೆಯರ ಪರ ಯೋಜನೆಗಳನ್ನು ಟೀಕಿಸಿ, ನಂತರ ಅವುಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.
ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿಗೊಳಿಸುತ್ತಿದೆ. ಅದರಲ್ಲೂ ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆ ಮೂಲಕ ಈವರೆಗೆ 35 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಕೂಡ ಅಧಿಕಾರಕ್ಕೆ ಬಂದಲ್ಲಿ ಇಂತದ್ದೇ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಅಂಬೇಡ್ಕರ್ ತತ್ವದಂತೆ, ಬಸವಣ್ಣನವರ ತತ್ವದಂತೆ ನಾವು ಆಡಳಿತ ನಡೆಸುತ್ತೇವೆ. ದೇಶದಲ್ಲಿ ಯಾವ್ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ ಆಗೆಲ್ಲ ಸರ್ವ ಭಾಷಿಕರು, ಸರ್ವ ಜಾತಿಯಯವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

ಶನಿವಾರ ಸಂಜೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಸೊಲ್ಲಾಪುರ ಶಹರದಲ್ಲಿ, ಇಂದಿರಾ ನಗರ, ಕಿಸಾನ್ ನಗರಗಳಲ್ಲಿ ಶನಿವಾರ ಸಂಜೆ ಮಹಾ ವಿಕಾಸ ಅಘಾಡಿಯ ಕಾಂಗ್ರೆಸ್ ಅಭ್ಯರ್ಥಿ ಚೇತನ ಪಂಡಿತ್ ನರೋಟೆ ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ವೇಳೆ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ, ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ, ಪ್ರಣತಿ ತಾಯಿ ಶಿಂಧೆ, ಶ್ರೀದೇವಿ ಫುಲಾರೆ, ವಿನೋದ್ ಬೋಸಲೆ, ಶಕೀಲ್ ಮಾಳ್ವಿ, ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.