ಬೆಳಗಾವಿ: ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲು ಆಗಿದ್ದ ದರೋಡೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಹುಕ್ಕೇರಿ ತಾಲೂಕು ಹರಗಾಪುರ ಬಳಿ ದುಷ್ಕರ್ಮಿಗಳಿಬ್ಬರು ತಮ್ಮ ಕಾರು ಅಡ್ಡಗಟ್ಟಿ ಗನ್ ತೋರಿಸಿ ಹಣ ದೋಚಿದ್ದಾರೆ ಎಂದು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ದೂರುದಾರ ಸೇರಿ ಇನ್ನಿಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ವಿವರಿಸಿದರು.
ಕಾರಿನಲ್ಲಿ 1.01 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ನವೆಂಬರ್ 15ರಂದು ಕೊಲ್ಲಾಪುರದಿಂದ ಬರುತ್ತಿದ್ದ ಕಾರನ್ನು ಹುಕ್ಕೇರಿ ತಾಲೂಕು ಹರಗಾಪುರ ಬಳಿ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ ಎಂದು ಸೂರಜ್ ಹೊನಮಾನೆ ಎಂಬ ಮಹಾರಾಷ್ಟ್ರ ಮೂಲದ ವ್ಯಕ್ತಿ ದೂರು ನೀಡಿದ್ದರು. ಆದರೆ ಈಗ ನೇರ್ಲಿ ಬಳಿ ಕಾರು ಪತ್ತೆಯಾಗಿದೆ. ಪೊಲೀಸರಿಗೆ ಸಂದೇಹ ಬಂದಿದ್ದು ಕಾರಿನ ಚಾಲಕ ಆರೀಫ್ ಶೇಖ್ ಹಾಗೂ ಅದರಲ್ಲಿ ಪ್ರಯಾಣ ಬೆಳೆಸುತ್ತಿದ್ದ ಸೂರಜ್ ಹಾಗೂ ಅಜಯ್ ಸರಗಾರ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಮೊದಲು 75 ಲಕ್ಷ ರೂಪಾಯಿ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ, ಈಗ ಕಾರಿನಲ್ಲಿ 1.01 ಕೋಟಿ ರೂಪಾಯಿ ಸಿಕ್ಕಿದೆ. ಈ ಕುರಿತು ದೂರು ಕೊಟ್ಟವರನ್ನು ತೀವ್ರ ವಿಚಾರಣೆ ನಡೆಸಿದಾಗ ವ್ಯಾಪಾರಿ ಕೊಟ್ಟ ಹಣ ಎಣಿಸದೆ ತೆಗೆದುಕೊಂಡು ಬರುತ್ತಿದ್ದೆವು. 75 ಲಕ್ಷ ರೂ. ಇರಬಹುದು ಎಂದು ಭಾವಿಸಿ ಹೇಳಿಕೆ ನೀಡಿದ್ದೆವು ಎಂದು ದೂರುದಾರರು ತಿಳಿಸಿದ್ದಾರೆ. ಕಾರಿನ ಮುಂಬದಿಯ ಎರಡು ಸೀಟುಗಳ ನಡುವೆ ಇರುವ ಗೇರ್ ಬಾಕ್ಸ್ ಹಾಗೂ ಹ್ಯಾಂಡ್ ಬ್ರೇಕ್ ಕೆಳಗೆ ಮೂಲವಿನ್ಯಾಸವನ್ನೇ ಬದಲಿಸಿ ಅಲ್ಲಿ ಬಾಕ್ಸ್ ರಚಿಸಲಾಗಿದೆ. ಅದರಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದರು. ಆದ್ದರಿಂದ ಮೋಟರು ವಾಹನಗಳ ಕಾಯ್ದೆಯಡಿ ಕಾರಿನ ಮಾಲಕರ ವಿರುದ್ಧ ಸಹ ದೂರು ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ಸಾಂಗ್ಲಿಯ ಭರತ್ ಮಾರಗುಡೆ ಎಂಬ ವ್ಯಾಪಾರಿ ಕೇರಳದಲ್ಲಿ ಹಳೆ ಚಿನ್ನ ಮಾರಾಟ ಮಾಡುತ್ತಾರೆ. ಕೊಲ್ಲಾಪುರಕ್ಕೆ ಹಳೆ ಚಿನ್ನ ಕಳಿಸುತ್ತಿದ್ದರು. ಇಲ್ಲಿಂದ ಕೇರಳಕ್ಕೆ ಹಣ ಹೋಗುತ್ತಿತ್ತು. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮೂರು ತನಿಖಾ ತಂಡಗಳು ತನಿಖೆ ಕೈಗೊಳ್ಳುತ್ತಿವೆ ಎಂದು ಅವರು ವಿವರಿಸಿದರು.