ಹೆಬ್ರಿ : ವಿಕ್ರಂ ಗೌಡ ಈ ಹೆಸರು ನಕ್ಸಲ್ ಚಟುವಟಿಕೆಯಲ್ಲಿ ಆಗಾಗ ಕೇಳಿ ಬರುತ್ತಿತ್ತು. ನಕ್ಸಲ್ ಹೆಸರು ಬಂದಾಗ ಈ ಹೆಸರು ಚಿರಪರಿಚಿತವಾಗಿತ್ತು. ಕೊನೆಗೂ ಈತನ ದಾರುಣ ಅಂತ್ಯವಾಗಿದೆ.
ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಂ ಗೌಡನ ಮೂಲ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕೂಡ್ಲು ನಾಡ್ಪಾಲು ಗ್ರಾಮ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವ ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ, ರಾಜ್ಯದಲ್ಲಿನ ಜವಾಬ್ದಾರಿ ವಿಕ್ರಂ ಗೌಡ ಹೆಗಲಿಗೆ ಬಿದ್ದಿತ್ತು. 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ವಿಕ್ರಂ ಗೌಡ ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಕಾರ್ಮಿಕ ಸಂಘಟನೆಯಿಂದ ಬಂದಿದ್ದ ವಿಕ್ರಂ ಗೌಡ ಮೂರು ಬಾರಿ ಕರ್ನಾಟಕ ಪೊಲೀಸರ ಕೈಯಿಂದ ಪರಾರಿಯಾಗಿದ್ದ. 2016ರಲ್ಲಿ ಕೇರಳ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ್ದ.
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಯೋಜನೆಗೆ ವಿಕ್ರಂ ಗೌಡ ವಿರೋಧ ಹೊಂದಿದ್ದ. ಅಷ್ಟೇ ಅಲ್ಲದೇ ಈ ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಕ್ಕೆ ಗೌರಿ ಲಂಕೇಶ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಿತ್ತಿಪತ್ರಗಳನ್ನೂ ಹಂಚಿದ್ದ. ಕಳೆದ 13 ವರ್ಷಗಳಿಂದ ಈತ ಕರ್ನಾಟಕದ ಪೊಲೀಸರಿಗೆ ಬೇಕಾಗಿದ್ದ.
ಸೋಮವಾರ ತಡರಾತ್ರಿ ಐದು ಜನ ನಕ್ಸಲರ ಗುಂಪು ಪೀತಬೈಲು ಬಳಿ ಆಹಾರ ಪದಾರ್ಥ ಸಂಗ್ರಹ ಮಾಡಿಕೊಂಡು ಹೋಗಲು ಬಂದಾಗ ಎಎನ್ ಎಫ್ ಹಾಗೂ ನಕ್ಸಲರ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಆಗ ಎಎನ್ಎಫ್ ನಾಯಕ ವಿಕ್ರಂ ಗೌಡ ಗುಂಡೇಟಿಗೆ ಬಲಿಯಾಗಿದ್ದಾನೆ. ಇನ್ನುಳಿದ ನಾಲ್ವರು ಕಾಡಿನಲ್ಲಿ ನಾಪತ್ತೆಯಾಗಿದ್ದಾರೆ. ಅವರನ್ನು ಬೇಟೆಯಾಡಲು ಹುಡುಕಾಟ ತೀವ್ರಗೊಂಡಿದೆ. ಈ ಭಾಗ ದಟ್ಟ ಅರಣ್ಯದಿಂದ ಕೂಡಿದೆ. ಕೇವಲ ಮೂರು ಮನೆಗಳ ಮಾತ್ರ ಇವೆ. ನಕ್ಸಲರು ಪಡಿತರಕ್ಕೆ ಬರುತ್ತಾರೆ ಎಂಬ ಗುಮಾನಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು ಯಶಸ್ಸು ಸಿಕ್ಕಿದೆ. ಅಂದರೆ, ನಕ್ಸಲ್ ನಾಯಕನನ್ನೇ ಈಗ ಬೇಟೆಯಾಡಲಾಗಿದೆ.
ಕೆಲ ವರ್ಷಗಳ ಹಿಂದೆ ಶೃಂಗೇರಿ ಸಮೀಪದ ಕಿಗ್ಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡನ ಹತ್ಯೆಯಾಗಿದೆ ಎಂಬ ಸುದ್ದಿ ವ್ಯಾಪಕ ಸುದ್ದಿಯಾಗಿತ್ತು. ಆದರೆ, ವಿಕ್ರಂ ಗೌಡನ ಸಂಬಂಧಿಕರೊಬ್ಬರು ಮೃತದೇಹ ಆತನದ್ದಲ್ಲ ಬೇರೆಯವರದು ಎಂದು ಖಚಿತ ಪಡಿಸಿದ್ದರು.
ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಮತ್ತೆ ಜೀವ ಪಡೆದುಕೊಳ್ಳಲು ಆರಂಭಿಸಿದ್ದ ನಕ್ಸಲರನ್ನು ಸದೆಬಡಿಯಲು ಆರಂಭಿಸಲಾದ ಕಾರ್ಯಾಚರಣೆಗೆ ಇದು ಬಹುದೊಡ್ಡ ಯಶಸ್ಸು ಸಿಕ್ಕಿದೆ. ನಾಯಕನ ಹತ್ಯೆಯಾಗಿದ್ದು, ಈಗ ಮುಂದೇನು ಎನ್ನುವುದು ಕಾದು ನೋಡಬೇಕಾಗಿದೆ. ಒಟ್ಟಾರೆ ವಿಕ್ರಂ ಗೌಡನ ಎನ್ಕೌಂಟರ್ ಎನ್ನುವುದು ಇಡೀ ಕರ್ನಾಟಕದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.