ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ವತಿಯಿಂದ ಭಕ್ತ ಕನಕದಾಸರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಡಾ. ಅರ್ಜುನ ಜಂಬಗಿ ಅವರು ಸಂತ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪನಮನ ಮಾಡಿ ಮಾತನಾಡಿ, ಕನಕದಾಸರ ಸಾಹಿತ್ಯ ಅತ್ಯಂತ ಮೌಲ್ಯಯುತವಾದುದು. ದಾಸ ಸಾಹಿತ್ಯದಲ್ಲಿ ಕನಕರ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಕೀರ್ತನೆಗಳು ಮತ್ತು ಕಾವ್ಯಗಳ ಮೂಲಕ ಸಮಾಜದ ಮನೆ ಮಾತಾದರು. ಸಮಾಜದಲ್ಲಿ ಜಡ್ಡುಗಟ್ಟಿದ್ದ ಮೌಢ್ಯಗಳ ವಿರುದ್ಧ ಹೋರಾಡಿದರು. ಉತ್ತಮ ಸಮಾಜವನ್ನು ಕಟ್ಟಲು ಜೀವನಪೂರ್ತಿ ಬರವಣಿಗೆಯ ಮೂಲಕ ಹೋರಾಡಿದರು. ತಮ್ಮ ಬರವಣಿಗೆಯಲ್ಲಿ ದೀನ-ದಲಿತ-ನಿರ್ಗತಿಕರ, ಶೋಷಿತರ ಧ್ವನಿಯನ್ನೇ ಸ್ಥಾಯಿಯಾಗಿ ಇಟ್ಟುಕೊಂಡರು.
ಸಮಸಮಾಜ ನಿರ್ಮಾಣಕ್ಕಾಗಿ, ಅನಾಥ ಪ್ರಜ್ಞೆಯಲ್ಲಿ ಬದುಕುತ್ತಿರುವ, ನಿರ್ಲಕ್ಷಿತ ಸಮುದಾಯದವರ ಬದುಕಿನಲ್ಲಿ ಬೆಳಕನ್ನು ತರಲು ತಮ್ಮ ಜೀವನವನ್ನು ಸವೆಸಿದರು. ಕನಕದಾಸರ ವಿಚಾರಧಾರೆಗಳು ಮನುಕುಲದ ಉನ್ನತಿಗೆ ಮಾರ್ಗವನ್ನು ತೋರುವ ದೀಪಸ್ತಂಭ. ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತರಿಸಿ, ಪ್ರತಿಪಾದಿಸಿದರು ಎಂದರು.

ವಿದ್ಯಾರ್ಥಿ ಶಿವಕುಮಾರ್ ಹಿರೇಮಠ ನಿರೂಪಿಸಿದರು, ಶಿವಾನಂದ ಲೋಕರೆ ಸ್ವಾಗತಿಸಿದರು, ಚೈತ್ರಾ ನಾಗರಾಳ ವಂದಿಸಿದರು. ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ ಹಡಪದ, ಅಕ್ಷತಾ ಕಲ್ವಾಡಾ, ಗೀತಾ ಕಡನ್ನವರ್, ಶಿವಾನಂದ ಲೋಕರೆ ಅವರು ಕನಕದಾಸರ ಸಾಹಿತ್ಯ , ಹೋರಾಟ, ಬದುಕಿನ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೋಧಕ- ಬೋಧಕೇತರ ಸಿಬ್ಬಂದಿಗಳು,
ವಿದ್ಯಾರ್ಥಿಗಳು ಹಾಜರಿದ್ದರು.