ಬೆಳಗಾವಿ : ವಿದ್ಯಾರ್ಥಿಗಳ ಜೀವನ ಶಿಸ್ತು ಮತ್ತು ಶ್ರದ್ಧೆಯನ್ನು ಬಯಸುತ್ತದೆ. ಶಿಸ್ತು ಮತ್ತು ಶ್ರದ್ಧೆ ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ಭರತೇಶ ಬಿಬಿಎ ಕಾಲೀಜಿನ ಪ್ರಾಂಶುಪಾಲ ಡಾ. ಪ್ರಶಾಂತ ಕಾಂಬಳೆ ಅಭಿಪ್ರಾಯಪಟ್ಟರು.

ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಘಟಕ ಮಹಾವಿದ್ಯಾಯಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವ್ಯವಹಾರ ಶಾಸ್ತ್ರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲಿಯುವಿಕೆಯಲ್ಲಿ ಶಿಸ್ತು ಮತ್ತು ಶ್ರದ್ಧೆಯನ್ನು ತೋರದೆ ಹೋದರೆ ಸಾಧನೆಯತ್ತ ಸಾಗುವುದು ಕಷ್ಟ. ತಂದೆ -ತಾಯಿ, ಹಿರಿಯರನ್ನು ಗೌರವದಿಂದ ಕಾಣಬೇಕು. ವಿದ್ಯಾರ್ಥಿಗಳು ತಮ್ಮ ಸಹಾಧ್ಯಾಯಿಗಳೊಂದಿಗೆ ಸಾಮರಸ್ಯದಿಂದ ಇರಬೇಕು. ತನ್ನ ಬೆಳವಣಿಗೆ ಕೇವಲ ತನ್ನದಷ್ಟೇ ಅಲ್ಲ. ಅದು ಸಮಾಜ, ದೇಶದ ಬೆಳವಣಿಗೆ ಎಂದು ಅರಿತುಕೊಂಡು ಜ್ಞಾನಾರ್ಜನೆಗೆ ತೊಡಗಬೇಕು. ಆಗ ವಿದ್ಯಾರ್ಥಿಗಳಿಗೆ ಯಶಸ್ಸು ಸುಲಭವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ಅರ್ಜುನ ಜಂಬಗಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನಿಯಮಿತ ಅಭ್ಯಾಸದ ಜೊತೆಗೆ ಸಂವಹನ ಕೌಶಲ್ಯಗಳನ್ನು ಪಡೆಯಬೇಕು. ತಂತ್ರಜ್ಞಾನದೊಂದಿಗೆ ಮುಖಾಮುಖಿಯಾಗಬೇಕು. ತಮ್ಮ ಭವಿಷ್ಯಕ್ಕೆ ಬೇಕಾಗುವ ಜ್ಞಾನ ಶಿಸ್ತುಗಳನ್ನು ವಿದ್ಯಾರ್ಥಿ ಜೀವನದಲ್ಲಿ ಪಡೆದುಕೊಳ್ಳಬೇಕು. ಆಗ ಉದ್ಯೋಗ ಮತ್ತು ಉದ್ಯಮದಲ್ಲಿ ನೈಪುಣ್ಯತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸಣ್ಣಪುಟ್ಟ ವಿಷಯಗಳಿಗೆ ಕಿವಿಗೊಡದೆ ಪ್ರಬುದ್ಧತೆಯಿಂದಿದ್ದು ಜೀವನ ರೂಪಿಸುವತ್ತ ಗಮನ ಕೊಡಬೇಕು ಎಂದರು.

ವಿದ್ಯಾರ್ಥಿನಿಯರಾದ ಭುವನೇಶ್ವರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಕೀರ್ತಿ ಶಿಂಧೆ ಹಾಗೂ ಕಾವೇರಿ ಹುಕ್ಕೇರಿ ನಿರೂಪಿಸಿದರು, ನಿಂಗಪ್ಪ ಬುರ್ಲಿ ಪರಿಚಯಿಸಿದರು, ಸೃಷ್ಟಿ ಹಾರುಗೊಪ್ಪ ವಂದಿಸಿದರು, ವ್ಯವಹಾರ ಶಾಸ್ತ್ರದ ಉಪನ್ಯಾಸಕರಾದ ಶಿವಕುಮಾರ್ ಮೇಸ್ತ್ರಿ,
ಮಲ್ಲಸರ್ಜಿ ಜನಗೌಡ, ರೇಣುಕಾ ಕೊಳೆನ್ನವರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.