ಬೆಳಗಾವಿ: ಕರ್ನಾಟಕದಲ್ಲಿ ಹಲವಾರು ದಿನಗಳಿಂದ ಬಡಜನತೆ ಉಪಯೋಗಿಸುವ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡುತ್ತಿರುವ ವಿಷಯ ತುಂಬಾ ಚರ್ಚೆಯಾಗುತ್ತಿದೆ ಮತ್ತು ಜನತೆ ಇದರಿಂದ ಕಳವಳಗೊಂಡಿದ್ದಾರೆ. ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಕರ್ನಾಟಕ ಸರ್ಕಾರ ಹಲವಾರು ಯೋಜನೆಗಳನ್ನು ರದ್ದು ಮಾಡುತ್ತಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಬೆಳಗಾವಿ ನಗರದ ಕೆ.ಎಲ್.ಇ ಜೀರಗೆ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಈ ಹಿಂದೆ ಜಾರಿಯಲ್ಲಿದ್ದ ಕಿಸಾನ್ ಸಮ್ಮಾನ್ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಜಿಲ್ಲೆಗೊಂದು ಗೋಶಾಲೆ ಯೋಜನೆ ಹಾಗೂ ಪ್ರತಿ ಲೀಟರ ಹಾಲಿಗೆ 5 ರೂ ಪ್ರೋತ್ಸಾಹ ಧನ ಈ ಎಲ್ಲ ಯೋಜನೆಗಳನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಮುಂದುವರೆದ ಭಾಗವಾಗಿ ಈಗ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿದ್ದಾರೆ. ಮೊದಲು ಎಲ್ಲರಿಗೂ ಪ್ರೀ ಎಂದರು, ಆಮೇಲೆ ಷರತ್ತು ಎಂದರು ಈಗ ಸರಕಾರದ ಮೇಲೆ ಹೊರೆ ತಪ್ಪಿಸಲು ಬಿಪಿಎಲ್, ಎಪಿಎಲ್ ನಾಟಕ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಪಿಎಲ್ ರೇಶನ್ ಕಾರ್ಡಗಳ ರದ್ದು ಪಡಿಸುವುದರಿಂದ ಆಯುಷ್ ಯೋಜನೆಯಡಿ ಉಚಿತ ಆರೋಗ್ಯ ರಕ್ಷಣೆ ಪಡೆದುಕೊಳ್ಳಲು ಸಾಧ್ಯವಾಗಲ್ಲ, ಬಡತನ ಮಟ್ಟಕ್ಕಿಂತ ಕೆಳಗಿರುವ ಜನರಿಗೆ ಆರೋಗ್ಯ ವಿಮೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗಲ್ಲ, ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗಲ್ಲ, ವಿದ್ಯಾರ್ಥಿ ವೇತನಗಳು ಮತ್ತು ಸರ್ಕಾರಿ ಸ್ಥಾನಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ಪಡೆಯಲು ಸಾಧ್ಯವಾಗಲ್ಲ, ಗೃಹ ಲಕ್ಷ್ಮಿ ಯೋಜನೆ ಪಡೆಯಲು ಸಾಧ್ಯವಾಗಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ರಾಷ್ಟ್ರೀಯ ಆರೋಗ್ಯ ಗ್ರಾಮೀಣ ಮಿಷನ್ ಮೂಲಕ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಲ್ಲ, ಆರ್ಥಿಕವಾಗಿ ಹಿಂದುಳಿದ ಗುಂಪುಗಳ ಜನರು ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿಯ ಮೂಲಕ 100 ದಿನಗಳ ಖಾತರಿ ಉದ್ಯೋಗವನ್ನು ಪಡೆಯಲು ಸಾಧ್ಯವಾಗಲ್ಲ, ಸಮಾಜ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವಸತಿ ಯೋಜನೆಗಳನ್ನು ಪಡೆಯಲು ಸಾಧ್ಯವಾಗಲ್ಲ, ಕಡಿಮೆ ಆದಾಯದ ಕುಟುಂಬಗಳ ಮಕ್ಕಳು ಸರ್ವ ಶಿಕ್ಷಾ ಅಭಿಯಾನದ ಮೂಲಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲ್ಲ, ಕೇಂದ್ರ ಸರ್ಕಾರದಿಂದ ನೀಡುವ ಮೀಸಲಾತಿ ದೊರೆಯುವುದಿಲ್ಲ ಎಂದರು.

ಬಿಪಿಎಲ್ ಕಾರ್ಡ ರದ್ದು ಪಡಿಸುವುದರಿಂದ ಕೇವಲ ಉಚಿತವಾಗಿ ಅಕ್ಕಿ ದೊರೆಯುವ ಯೋಜನೆ ಮಾತ್ರ ರದ್ದಾಗುವುದಿಲ್ಲ ಮೇಲಿನ ಎಲ್ಲಾ ಯೊಜನೆಗಳು ರದ್ದಾಗುವುದರಿಂದ ಬಡ ಕುಟುಂಬಗಳಿಗೆ ಇದು ತುಂಬಾ ಆರ್ಥಿಕ ಹೊರೆಯಾಗಲಿದೆ. ಆ ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಮುಂದುವರೆಸಬೇಕು ಒಂದು ವೇಳೆ ಸರ್ಕಾರ ಇದನ್ನು ಮುಂದುವರೆಸಲು ಒಪ್ಪದಿದ್ದರೇ ನಾವು ಜನರ ಪರವಾಗಿ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.